Advertisement
ಇದೆಲ್ಲದರ ನಡುವೆ, ವಿಳಂಬ ವಿತರಣೆ, ಆಹಾರ ಕೊರತೆ, ಮೆನು ಅದಲು-ಬದಲು, ಗೊಂದಲ, ಪ್ರತಿಭಟನೆಗಳೂ ಮೊದಲ ದಿನ ಕಂಡು ಬಂದಿತು. ನಗರದ ಬಡ ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿನ ಆಹಾರದ ರುಚಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಆಹಾರದ ಪ್ರಮಾಣ ಹಾಗೂ ಆಹಾರದ ಕೊರತೆಯ ಬಗ್ಗೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related Articles
ಆಹಾರ ಪೂರೈಕೆ ಮೆನುವಿನ ಪ್ರಕಾರ ಗುರುವಾರ ಬೆಳಗ್ಗೆ ಇಡ್ಲಿ ಮತ್ತು ರವಾ ಕಿಚಡಿ ನೀಡಬೇಕಿತ್ತು. ಆದರೆ, ಕೆಲವು ಕಡೆಗಳಲ್ಲಿ ಉಪ್ಪಿಟ್ಟು ವಿತರಣೆ ಮಾಡಿದರೆ, ಹಲವೆಡೆ ಕೇಸರಿಬಾತು, ಇಡ್ಲಿ, ಟೊಮೆಟೋ ಬಾತ್ ವಿತರಿಸಲಾಯಿತು.
Advertisement
ಉಪಹಾರ ಮುಗಿದಿದೆ…ನಗರದ ಹಲವಾರು ಕಡೆಗಳಲ್ಲಿ ಬೆಳಗ್ಗೆ 7.30ರಿಂದಲೇ ಟೋಕನ್‌ಗಳನ್ನು ವಿತರಿಸಿದ್ದರಿಂದ ತಿಂಡಿ ವಿತರಿಸಲು ಆರಂಭಿಸಿದ ಅರ್ಧ ಗಂಟೆಯೊಳಗೆ ತಿಂಡಿ ಖಾಲಿಯಾಗಿದೆ ಎಂಬ ಫಲಕವನ್ನು ಸಿಬ್ಬಂದಿ ಅಳವಡಿಸಿದ್ದರು. ಇದರಿಂದ ಗಂಟೆಗಟ್ಟಲೇ ಸಾಲಿನಲ್ಲಿ ನಿಂತಿದ್ದ ಜನರು ಕೋಪಗೊಂಡು ಕ್ಯಾಂಟೀನ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ಇನ್ನು ಕೆಲವು ಕಡೆಗಳಲ್ಲಿ ನಿರೀಕ್ಷೆ ಮೀರಿ ಸಾರ್ವಜನಿಕರು ಹಾಜರಾದ ಪರಿಣಾಮ ಟೋಕನ್ ನೀಡದೆ ಊಟ ವಿತರಣೆ ಮಾಡಿರುವುದು ವರದಿಯಾಗಿದೆ. ಮೇಯರ್ ವಾರ್ಡ್‌ನಲ್ಲಿ ಕೊರತೆ
ಮೇಯರ್ ಜಿ.ಪದ್ಮಾವತಿ ಪ್ರತಿನಿಧಿಸುವ ಪ್ರಕಾಶ್‌ನಗರ ವಾರ್ಡ್‌ನಲ್ಲಿ 500ಕ್ಕೂ ಹೆಚ್ಚು ಜನರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಈ ನಡುವೆ ಆಹಾರ ಮುಗಿದ ಬಗ್ಗೆ ಫಲಕ ಪ್ರದರ್ಶಿಸಲಾಯಿತು. ಪರಿಣಾಮ ಸಾರ್ವಜನಿಕರು ಗಲಾಟೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮೇಯರ್, ತಿಂಡಿ ಕೊರತೆಯಾಗಲು ಕಾರಣವೇನು ಎಂದು ವಿಚಾರಿಸಿದಾಗ, ಕೆಲವರು ಎರಡೆರಡು ಟೋಕನ್ ಪಡೆದು ತಿಂಡಿ ತಿಂದಿದ್ದಾರೆ ಎಂದು ತಿಳಿಸಿದರು. ಈ ವೇಳೆ ಮೇಯರ್ ಅವರು, ಪ್ರತಿಯೊಬ್ಬರಿಗೂ ಆಹಾರ ದೊರೆಯಬೇಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂದು ಟೋಕನ್ ಮಾತ್ರ ಪಡೆಯಬೇಕು ಎಂದು ಸೂಚಿಸಿದರು. ಒಬ್ಬರಿಗೆ ಕೇವಲ ಒಂದೇ ಟೋಕನ್ ನೀಡಬೇಕು ಎಂದು ಕ್ಯಾಂಟೀನ್ ಸಿಬ್ಬಂದಿಗೆ ತಾಕೀತು ಮಾಡಿದರು. ತಡವಾಗಿ ಬಂದ ಆಹಾರ
101 ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಇರುವುದು ಆರು ಅಡುಗೆ ಮನೆಗಳು ಮಾತ್ರ. ಪರಿಣಾಮ ಹಲವಾರು ವಾರ್ಡ್‌ಗಳಿಗೆ ತಿಂಡಿ – ಊಟ ತಡವಾಗಿ ತಲುಪಿತು. ಹೀಗಾಗಿ ಸಾರ್ವಜನಿಕರು ಪರದಾಡಬೇಕಾಯಿತು. ಇನ್ನು ಕೆಲವೊಂದು ವಾರ್ಡ್‌ಗಳಲ್ಲಿ ಎರಡು ಗಂಟೆಗಳ ಕಾಲ ಕಾದರೂ ಊಟ ಬಾರದ ಹಿನ್ನೆಲೆಯಲ್ಲಿ ನಾಗರಿಕರು ಪಾಲಿಕೆಯನ್ನು ಬೈದುಕೊಂಡು ಹೊರಹೋದ ದೃಶ್ಯಗಳು ಕಂಡು ಬಂತು. ಸಂಖ್ಯೆ ಹೆಚ್ಚಿಸುವಂತೆ ಮನವಿ
ಗುರುವಾರ ದೇವಸಂದ್ರ ವಾರ್ಡ್‌ನ ಸಂತೆ ಮೈದಾನದಲ್ಲಿ 5 ರೂ. ತಿಂಡಿ ದೊರೆಯುವ ವಿಷಯ ತಿಳಿದು ಮಾರುಕಟ್ಟೆಗೆ ಬಂದಿದ್ದ ವ್ಯಾಪಾರಿಗಳು ಬೆಳಗ್ಗೆ 7 ಗಂಟೆಗೆ ಸಾಲುಗಟ್ಟಿ ನಿಂತಿದ್ದರು. ಪರಿಣಾಮ ಆಹಾರ ವಿತರಣೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ತಿಂಡಿ ಮುಗಿದು ಹೋಯಿತು. ತಿಂಡಿ ದೊರೆಯದೆ ಬೇಸರದಿಂದ ಹಿಂತಿರುಗಿದವರು ಹೆಚ್ಚಿನ ಜನರಿರುವ ಜಾಗದಲ್ಲಿ ಊಟ-ತಿಂಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಬೇಕು ಎಂದು ಒತ್ತಾಯಿಸಿದರು. ರುಚಿ ಚೆನ್ನಾಗಿದೆ, ಪ್ರಮಾಣ ಜಾಸ್ತಿ ಮಾಡಿ
ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡಲಾಗುತ್ತಿರುವ ತಿಂಡಿ ಹಾಗೂ ಊಟ ರುಚಿಕರವಾಗಿದೆ. ಆದರೆ, ಆಹಾರದ ಪ್ರಮಾಣವನ್ನು ಹೆಚ್ಚಿಸಿ ಎಂದು ಹಲವಾರು ನಾಗರಿಕರು ಮನವಿ ಮಾಡಿದರು. ಇದರೊಂದಿಗೆ ನಿಗದಿತ ಅವಧಿಯೊಳಗೆ ಆಹಾರ ಪೂರೈಕೆ ಮಾಡಿದರೆ ಹೆಚ್ಚು ಅನುಕೂಲ. ಕುಡಿಯಲು ಹಾಗೂ ಕೈ ತೊಳೆಯಲು ನೀರಿನ ವ್ಯವಸ್ಥೆ ಕಲ್ಪಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ. ಕುತೂಹಲಕ್ಕಾಗಿ ಬಂದ ನೂರಾರು ಜನ
ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಹಲವಾರು ಭಾಗಗಳಲ್ಲಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಸಹ ಭೇಟಿ ನೀಡಿದ್ದು, ವಿಶೇಷವಾಗಿತ್ತು. ಈ ಕುರಿತು ಅವರನ್ನು ವಿಚಾರಿಸಿದಾಗ ಗುಣಮಟ್ಟ ಹಾಗೂ ಕ್ಯಾಂಟೀನ್ ಹೇಗೆ ನಿರ್ಮಿಸಲಾಗಿದೆ ಎಂಬುದುನ್ನು ನೋಡಲು ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಕ್ಯಾಂಟೀನ್ ತಿಂಡಿ, ಮಕ್ಕಳ ಬಾಕ್ಸ್‌ಗೆ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ 7.30ರಿಂದಲೇ ತಿಂಡಿ ವಿತರಣೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬಹುತೇಕ ತಾಯಂದಿರು ಶಾಲೆಗೆ ಕಳುಹಿಸುವ ಮಕ್ಕಳನ್ನು ಕ್ಯಾಂಟೀನ್‌ಗಳಿಗೆ ಕರೆತಂದು ಬೆಳಗಿನ ತಿಂಡಿಯನ್ನು ತಿನ್ನಿಸುತ್ತಿದ್ದಾರೆ. ಜತೆಗೆ ಕ್ಯಾಂಟೀನ್ ತಿಂಡಿಯನ್ನೇ ಮಕ್ಕಳು ಮಧ್ಯಾಹ್ನ ಬಾಕ್ಸ್‌ಗೆ ಹಾಕಿ ಕಳುಹಿಸುತ್ತಿರುವುದು ಕಂಡು ಬಂತು. ಸಾಲುಗಟ್ಟಿದ ಆಟೋ ಚಾಲಕರು
ಆರಂಭವಾಗಿರುವ 101 ಕ್ಯಾಂಟೀನ್‌ಗಳ ಬಳಿ ಸಾಲುಗಟ್ಟಿ ನಿಂತ ಜನರನ್ನು ಗಮನಿಸಿದಾಗ ಆಟೋ ಚಾಲಕರು ಹಾಗೂ ಕಾರು ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂತು. ಕಾಮಗಾರಿ ಮುಗಿಯುವ ಮೊದಲೇ ಆರಂಭ
ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದ ಬಸವನಪುರ ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಹಂತದಲ್ಲಿದೆ. ಆದರೂ ಗುರುವಾರದಿಂದ ಕ್ಯಾಂಟೀನ್‌ನಲ್ಲಿ ತಿಂಡಿ ಹಾಗೂ ಊಟ ವಿತರಿಸಲಾಯಿತು. ಇದರೊಂದಿಗೆ ಈಜೀಪುರ, ವಿ.ವಿ.ಪುರ, ಬನಶಂಕರಿ ದೇವಸ್ಥಾನ ವಾರ್ಡ್‌ನ ಕದಿರೇನಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಂಡರೂ ಗುರುವಾರ ಆಹಾರ ವಿತರಣೆ ಆರಂಭವಾಗಿಲ್ಲ. ನಿರೀಕ್ಷೆಗೂ ಮೀರಿ ಜನರು ಇಂದಿರಾ ಕ್ಯಾಂಟೀನ್‌ಗಳಿಗೆ ಬರುತ್ತಿರುವುದರಿಂದ ಬಹುಬೇಗ ತಿಂಡಿ-ಊಟ ಖಾಲಿಯಾಗಿದೆ. ಆ ಮೂಲಕ ಕ್ಯಾಂಟೀನ್ ಅಭೂತಪೂರ್ವ ಯಶಸ್ಸು ಕಂಡಿದೆ. ಆರಂಭದಲ್ಲಿ ಕೆಲವೊಂದು ಅವ್ಯವಸ್ಥೆ ಉಂಟಾಗಿದೆ. ಆದರೆ, ಶೀಘ್ರ ಅವುಗಳನ್ನು ಪರಿಹರಿಸಲಾಗುವುದು.
-ಜಿ.ಪದ್ಮಾವತಿ, ಮೇಯರ್ ಬಿಬಿಎಂಪಿ ವತಿಯಿಂದ ಇದೇ ಮೊದಲ ಬಾರಿಗೆ ಹೋಟೆಲ್ ಸೇವೆಯನ್ನು ನೀಡಲಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಸಮಸ್ಯೆಗಳಾಗಿರುವುದು ನಿಜ. ಅವುಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಒಂದೊಂದಾಗಿ ಅವುಗಳನ್ನು ಪರಿಹರಿಸಲಾಗುವುದು. ಹೆಚ್ಚಿನ ಜನರಿರುವ ಕಡೆ ಊಟದ ಸಂಖ್ಯೆಯನ್ನು ಹೆಚ್ಚಿಸುವಂತೆ ಮನವಿಗಳು ಬರುತ್ತಿವೆ. ಆದರೆ, ಅದಕ್ಕೆ ಹೆಚ್ಚಿನ ಅನುದಾನ ಅಗತ್ಯವಿರುವುದರಿಂದ ಸರ್ಕಾರದ ಅನುಮತಿ ಬೇಕಾಗಿದೆ.
-ಎನ್.ಮಂಜುನಾಥ ಪ್ರಸಾದ್, ಆಯುಕ್ತರು ದಿನಗೂಲಿ ಕೆಲಸ ಮಾಡುವವರಿಗೆ ಹಾಗೂ ಬೀದಿ ವ್ಯಾಪಾರಿಗಳಿಗೆ ಕಡಿಮೆ ದರದಲ್ಲಿ ಉತ್ತಮ ಊಟ ನೀಡುವುದು ಉತ್ತಮ ಯೋಜನೆಯಾಗಿದೆ.
-ಅಬ್ರಹಾಂ, ಕಾರ್ಮಿಕ ಜನರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಇಂದಿರಾ ಗಾಂಧಿಯವರು ತಂದಿದ್ದರು. ಇದೀಗ ಅವರ ಹೆಸರಿನಲ್ಲಿ ಬಡವರಿಗೆ ಅನ್ನ ಕೊಡುವ ಯೋಜನೆ ತಂದಿರುವುದು ಖುಷಿಯಾಗುತ್ತಿದೆ.
-ಶೋಭಾ, ಮನೆ ಕೆಲಸ ಮಾಡುವವರು ಸರ್ಕಾರದಿಂದ ಬಡವರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಊಟ-ತಿಂಡಿ ನೀಡುತ್ತಿರುವುದು ಒಳ್ಳೆಯ ಸಂಗತಿ. ಆದರೆ, ನಿಗದಿತ ಅವಧಿಗೆ ಊಟ ಪೂರೈಕೆ ಮಾಡಿದರೆ ಕೆಲಸಗಳಿಗೆ ಹೋಗುವವರಿಗೆ ಅನುಕೂಲ ಆಗುತ್ತದೆ.
-ಕಲಾವತಿ, ಮನೆ ಕೆಲಸ ಮಾಡುವವರು ಯಾವುದೇ ಯೋಜನೆಯ ಆರಂಭದಲ್ಲಿ ಕೆಲವೊಂದು ವ್ಯತ್ಯಾಸಗಳು ಆಗುವುದು ಸಹಜ. ಅವುಗಳನ್ನು ಲೋಪಗಳೆಂದು ಪರಿಗಣಿಸುವುದು ಸರಿಯಲ್ಲ. ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
-ರೋಹಿತ್, ಕಾಲೇಜು ವಿದ್ಯಾರ್ಥಿ ಮುಖ್ಯಮಂತ್ರಿಗಳು ಜನರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಜಾರಿಗೊಳಿಸಿದ್ದು, ಜನರಿಗೆ ವಾಸಿಸುವ ಬಡವರಿಗೆ ಯೋಜನೆಯಿಂದ ಹೆಚ್ಚು ಅನುಕೂಲವಾಗಲಿದೆ.
-ಬಸವರಾಜು, ಸಿದ್ದರಾಮಣ ಹುಂಡಿಯಿಂದ ಬಂದವರು