ಧಾರವಾಡ: ಜಿಲ್ಲೆಗೆ ಮಂಜೂರಾಗಿದ್ದ 15 ಇಂದಿರಾ ಕ್ಯಾಂಟೀನ್‌ಗಳಿಗೆ ಇನ್ನೂ ಉದ್ಘಾಟನೆ ಭಾಗ್ಯ ಇಲ್ಲವಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 12 ಕ್ಯಾಂಟೀನ್ ಗಳ ಪೈಕಿ 9 ಕ್ಯಾಂಟೀನ್‌ಗಳು ಸಿದ್ಧಗೊಂಡಿದ್ದು, ಇವು ಲೋಕಾರ್ಪಣೆಗೊಳ್ಳಬೇಕಿವೆ.
ಚುನಾವಣೆ ಘೋಷಣೆ ಪೂರ್ವವೇ ಈ ಕ್ಯಾಂಟಿನ್‌ಗಳನ್ನು ಆರಂಭಿಸಲು ಉದ್ದೇಶಿಸಲಾಗಿತ್ತು. ಈ ಕ್ಯಾಂಟೀನ್‌ಗಳ ನಿರ್ಮಾಣ ಕಾರ್ಯ ಹೊಸ ತಂತ್ರಜ್ಞಾನ ಪದ್ಧತಿ ಅಳವಡಿಕೆಯಿಂದ ವೇಗ ಪಡೆದಿತ್ತು. ಸದ್ಯ ಈಗ ಅಂತಿಮ ಹಂತಕ್ಕೆ ಬಂದು ನಿಂತಿವೆ. ಚುನಾವಣೆ ಮುಗಿದು ತಿಂಗಳಾದರೂ ಈ ಕಟ್ಟಡಗಳಿಗೆ ಲೋಕಾರ್ಪಣೆಯ ಭಾಗ್ಯವಿಲ್ಲ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಅಥವಾ ಅಧಿಕಾರಿಗಳ ವಿಳಂಬ ನೀತಿಯೋ ಎಂಬುದು ಸಾರ್ವಜನಿಕರಿಗೆ ತಿಳಿಯದಾಗಿದೆ.
ಹಿಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಒಟ್ಟು 15 ಇಂದಿರಾ ಕ್ಯಾಂಟೀನ್ ಕಾರ್ಯಾರಂಭಕ್ಕೆ ಹಸಿರು ನಿಶಾನೆ ತೋರಿಸಿತ್ತು. ಈ ಪೈಕಿ ಅದರಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ 12 ಕ್ಯಾಂಟೀನ್ ನಿಗದಿಪಡಿಸಿ ಉಳಿದಂತೆ 3 ಕ್ಯಾಂಟೀನ್‌ಗಳು ತಾಲೂಕು ಕೇಂದ್ರಗಳಿಗೂ ಲಭ್ಯವಾಗಿದ್ದವು. ಇದಲ್ಲದೇ ಎರಡು ಮಾಸ್ಟರ್ ಕಿಚನ್‌ಗೂ ಅನುಮೋದನೆ ದೊರೆತು ಹುಬ್ಬಳ್ಳಿಯ ಬೆಂಗೇರಿ ಹಾಗೂ ಧಾರವಾಡದಲ್ಲಿ ಮಾಸ್ಟರ್ ಕಿಚನ್ ನಿರ್ಮಾಣಕ್ಕೆ ಚಾಲನೆ ದೊರೆತಿತ್ತು.
ಮಾಸ್ಟರ್ ಕಿಚನ್ ಸಿದ್ಧ: ಧಾರವಾಡಕ್ಕೆ ಮಂಜೂರಾಗಿದ್ದ ನಾಲ್ಕು ಕ್ಯಾಂಟೀನ್‌ಗಳ ಪೈಕಿ ಮಿನಿ ವಿಧಾನಸೌಧ ಆವರಣ ಹಾಗೂ ಹೊಸ ಬಸ್ ನಿಲ್ದಾಣ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ಗಳು ಸಜ್ಜಾಗಿದ್ದು, ವಿದ್ಯುತ್, ನೀರು ಪೂರೈಕೆಗಳ ಕೆಲಸಗಳಷ್ಟೇ ಬಾಕಿ ಉಳಿದಿವೆ. ಹುಬ್ಬಳ್ಳಿಯಲ್ಲಿ ನಿಗದಿ ಮಾಡಿದ್ದ 8 ಕ್ಯಾಂಟೀನ್ ಗಳ ಪೈಕಿ 7 ಕ್ಯಾಂಟೀನ್ ಸಿದ್ಧಗೊಂಡಿದ್ದು, ಒಂದು ಕ್ಯಾಂಟೀನ್ ಕಾರ್ಯವಷ್ಟೇ ಬಾಕಿ ಉಳಿದಿದೆ. ಇದಲ್ಲದೇ ಧಾರವಾಡದ ಮಿನಿ ವಿಧಾನಸೌಧ ಆವರಣ ಹಾಗೂ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಮಾಸ್ಟರ್ ಕಿಚನ್‌ಗಳು ತಯಾರಾಗಿದ್ದು, ಈ ಮಾಸ್ಟರ್ ಕಿಚನ್‌ಗಳಿಂದಲೇ ಅವಳಿನಗರದ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಆಗಲಿದೆ. ದಿನಕ್ಕೆ ಎರಡು ಊಟ, ಒಂದು ಉಪಹಾರ ಲಭ್ಯವಾಗಲಿದೆ.
ಇನ್ನೆರಡಕ್ಕೆ ಸ್ಥಳದ ಹುಡುಕಾಟ: ಧಾರವಾಡದ ಕಲಾಭವನ ಹಾಗೂ ಶಿವಾಜಿ ವೃತ್ತದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾದರೂ ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇರೆ ಸ್ಥಳದ ಹುಡುಗಾಟದಲ್ಲಿದೆ ಅಧಿಕಾರಿಗಳ ತಂಡ. ಕಲಾಭವನದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಗಿಡ ಕಡಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಶಿವಾಜಿ ವೃತ್ತದ ನಿರ್ಮಾಣಕ್ಕೂ ಕೆಲ ತಾಂತ್ರಿಕ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಎರಡು ಕ್ಯಾಂಟೀನ್‌ಗಳ ನಿರ್ಮಾಣಕ್ಕಾಗಿ ಪರ್ಯಾಯ ಸ್ಥಳಗಳ ಹುಡುಗಾಟ ನಡೆಸಲಾಗಿದೆ.
ಅವಳಿನಗರದ ಎಲ್ಲ ಕ್ಯಾಂಟೀನ್‌ಗಳ ನಿರ್ಮಾಣ ಕೈಗೊಂಡು ಕಾರ್ಯಾರಂಭ ಮಾಡಿದ ಬಳಿಕ ನವಲಗುಂದ, ಕುಂದಗೋಳ
ಹಾಗೂ ಕಲಘಟಗಿ ತಾಲೂಕಿನಲ್ಲಿ ಮಂಜೂರಾಗಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಒಟ್ಟಿನಲ್ಲಿ ಆದಷ್ಟು ಬೇಗ ಈ ಎಲ್ಲ ಇಂದಿರಾ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಉಪಹಾರ, ಊಟ ಸಿಗುವಂತೆ ಆಗಲಿ ಎಂಬುದು ಸಾರ್ವಜನಿಕರ ಆಶಯ.
ಹುಬ್ಬಳ್ಳಿ-ಧಾರವಾಡ ಅವಳಿನಗರದ 12 ಕ್ಯಾಂಟೀನ್‌ಗಳ ಪೈಕಿ ಒಂದಾದರೂ ಕ್ಯಾಂಟೀನ್ ಆರಂಭಕ್ಕೆ ಚಾಲನೆ ನೀಡಲು ಈ ಹಿಂದಿನ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಸಚಿವ ವಿನಯ ಕುಲಕರ್ಣಿ ಸಾಕಷ್ಟು ಪ್ರಯತ್ನಿಸಿದ್ದರು. ಅದಕ್ಕಾಗಿ ಕಟ್ಟಡ ಕಾಮಗಾರಿ ಕಾರ್ಯಗಳು ವೇಗಗತಿ ಪಡೆದು ಅಂತಿಮ ರೂಪಕ್ಕೆ ಬರುವ ಮೊದಲೇ ಚುನಾವಣಾ ಘೋಷಣೆಯಾಗಿ ನನೆಗುದಿಗೆ ಬೀಳುವಂತಾಗಿತ್ತು. ಜನವರಿ ಅಂತ್ಯದಲ್ಲೇ ಕಟ್ಟಡ ಕಾಮಗಾರಿ ಮುಗಿಸಿ ಫೆಬ್ರುವರಿ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಬೇಕಿದ್ದ ಕ್ಯಾಂಟೀನ್‌ಗಳು ಇನ್ನೂ ಆರಂಭಗೊಂಡಿಲ್ಲ.
ಧಾರವಾಡ ನಗರಕ್ಕೆ ನಿಗದಿ ಮಾಡಿದ್ದ 4 ಕ್ಯಾಂಟೀನ್‌ನಲ್ಲಿ ಎರಡು ಸಿದ್ಧವಾಗಿದ್ದರೆ ಹುಬ್ಬಳ್ಳಿಗೆ ನಿಗದಿ ಮಾಡಿದ್ದ 8 ಕ್ಯಾಂಟೀನ್‌ಗಳಲ್ಲಿ 7 ಕ್ಯಾಂಟೀನ್ ಸಿದ್ಧವಾಗಿವೆ. ಈ ಕ್ಯಾಂಟೀನ್ ಹೆಸರು ಬದಲಿಸಲು ಯಾವುದೇ ಸೂಚನೆ ಬಂದಿಲ್ಲ. ಇನ್ನೂ 2-3 ವಾರಗಳಲ್ಲಿ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಲಿವೆ.
ವಿ.ಜೆ. ಜೋಶಿ,
ಹಾಯಕ ಕಾರ್ಯ ನಿರ್ವಾಹಕ ಅಭಿಯಂತರು,
ಜಿಲ್ಲಾ ನಗರಾಭಿವೃದ್ದಿ ಕೋಶ, ಧಾರವಾಡ