ಗಂಗಾವತಿ: ಹಸಿವು ಮುಕ್ತ ರಾಜ್ಯವನ್ನಾಗಿಸುವ ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್. 2013ರಲ್ಲಿ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಿ ಜನನಿಬಿಡ ಮತ್ತು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹೆಚ್ಚಿರುವ ಪ್ರದೇಶದಲ್ಲಿ ಕಡಿಮೆ ದರದಲ್ಲಿ ಉಪಹಾರ, ಊಟ ಒದಗಿಸುವ ವಿಶಿಷ್ಠ ಯೋಜನೆ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿತ್ತು.
ತಾಲೂಕು ಪ್ರದೇಶ ಮತ್ತು ಹೋಬಳಿವಾರು ಮತ್ತು ಮೆಟ್ರೋ ಸಿಟಿಗಳಲ್ಲಿ ಹಲವು ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ಗಂಗಾವತಿಯಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭವಾಗಿದ್ದು, ನಗರದ ಗುಂಡಮ್ಮ ಕ್ಯಾಂಪ್ ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸರಕಾರ ಹಾಗೂ ನಗರಸಭೆಯ ಅನುದಾನದಲ್ಲಿ ಇಂದಿರಾ ಕ್ಯಾಂಟೀನ್ ಗಳು ನಡೆಯುತ್ತಿವೆ.
ಗಂಗಾವತಿ ನಗರ 1.50 ಲಕ್ಷ ಜನಸಂಖ್ಯೆ ಹೊಂದಿದ್ದು, ಇಲ್ಲಿಗೆ ಗ್ರಾಮೀಣ ಭಾಗ ಹಾಗೂ ಬೇರೆ ಊರುಗಳಿಂದ ಕೂಲಿ ಕೆಲಸ ಮಾಡಲು ನೂರಾರು ಜನರು ಆಗಮಿಸುತ್ತಾರೆ. ಅದರ ಜೊತೆಗೆ ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ನಗರಕ್ಕೆ ಆಗಮಿಸುತ್ತಾರೆ.
ಸಿಬಿಎಸ್ ಗಂಜ್ ಸೇರಿ ನಗರದ ಇತರೆಡೆ ಕೂಲಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಾರೆ. ಇಂಥ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಉಪಹಾರ ಹಾಗೂ ಊಟ ನೀಡಲು ನಗರದ ಗುಂಡಮ್ಮ ಕ್ಯಾಂಪ್ ನಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ಮಾಡಲಾಗಿದೆ.
ಸರ್ಕಾರದಿಂದ ನಿರೀಕ್ಷಿತ ಮಟ್ಟದ ಪ್ರೋತ್ಸಾಹ ಇಲ್ಲದ ಕಾರಣ ಇದುವರೆಗೂ ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಚಿತ್ರಾನ್ನ, ಪಲಾವ್ ಹಾಗೂ ಅನ್ನ, ಸಾರು ವಾರದಲ್ಲಿ ಎರಡು ದಿನ ಇಡ್ಲಿ, ಶೀರಾ ಉಪಹಾರ ನೀಡಲಾಗುತ್ತಿತ್ತು.
ಇದೀಗ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಪ್ರೋತ್ಸಾಹಿಸಲು ಸಭೆ ಮಾಡಿ ಮತ್ತು ಹೆಚ್ಚು ಬೇಡಿಕೆ ಇರುವ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸುವ ನಿಟ್ಟಿನಲ್ಲಿ ತೀರ್ಮಾನಗಳನ್ನು ಸರಕಾರ ಕೈಗೊಂಡಿದೆ.
ಗಂಗಾವತಿ ನಗರಕ್ಕೆ ಕೂಲಿ ಕೆಲಸ ಮಾಡಲು ಜನರು ಮತ್ತು ಶಾಲಾ-ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಮತ್ತು ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಗೆ ನಿತ್ಯವೂ ಸಾವಿರಾರು ಭಕ್ತರು ಆಗಮಿಸುವುದರಿಂದ ಇವರಿಗೆ ಕಡಿಮೆ ದರದಲ್ಲಿ ಉಪಹಾರ ಊಟ ಸಿಗುವಂತಾಗಲು ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಇಂದಿರಾ ಕ್ಯಾಂಟೀನ್ ಆರಂಭಿಸಿದರೆ ಜನರಿಗೆ ಅನುಕೂಲವಾಗುತ್ತದೆ.
ಪ್ರಮುಖವಾಗಿ ಜೂನಿಯರ್ ಕಾಲೇಜು ಮೈದಾನ, ಸಿಬಿಎಸ್ ಗಂಜ್ ಪ್ರದೇಶ, ಜುಲೈನಗರ,ಆನೆಗೊಂದಿ ರಸ್ತೆ, ತಹಶೀಲ್ದಾರ್ ಕಚೇರಿ ಆವರಣ ಹಾಗೂ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಇಂದಿರಾ ಕ್ಯಾಂಟೀನ್ ನ ಅವಶ್ಯಕತೆ ಇದೆ.
ಬಡವರಿಗೆ ಹಾಗೂ ನಿತ್ಯ ಕಡಿಮೆ ಕೂಲಿಯಲ್ಲಿ ದುಡಿಯುವವರಿಗೆ ಇಂದಿರಾ ಕ್ಯಾಂಟೀನ್ ಉಪಯುಕ್ತವಾಗಿದೆ. ಮೆನು ಬದಲಾವಣೆ ಮಾಡಿ ಹೆಚ್ಚು ಜನರು ಸೇರುವ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದರೆ ಇನ್ನೂ ಉಪಯುಕ್ತವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಗ್ಗೆ ಹೀಯಾಳಿಸಿ ಮಾತನಾಡುವವರಿಗೆ ಅನ್ನ, ಹಸಿವಿನ ಮಹತ್ವ ಗೊತ್ತಿಲ್ಲ. ಈ ಯೋಜನೆ ಬಡವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. –
ಬಾಷಾ, ಬಳ್ಳಾರಿ ಸೈಕಲ್ ರಿಕ್ಷಾ ಚಾಲಕ
ನಮ್ಮ ಮನೆಯಲ್ಲಿ ದುಡಿಯುವವರು ಕಮ್ಮಿ. ಮಕ್ಕಳು – ಮೊಮ್ಮಕ್ಕಳು ಹೊಟೇಲ್, ಇತರೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಾರೆ. ನಮಗೆ ಕೂಲಿ ಕಮ್ಮಿ. ಬರುವ ಹಣದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಇಡೀ ಕುಟುಂಬದವರು ಉಪಹಾರ ಹಾಗೂ ಮಧ್ಯಾಹ್ನದ ಊಟ ಮಾಡುತ್ತೇವೆ. ರಾತ್ರಿಯಲ್ಲಿ ಅನ್ನಭಾಗ್ಯ ಅಕ್ಕಿಯಲ್ಲಿ ಅನ್ನ ಮಾಡಿ ಊಟ ಮಾಡುತ್ತೇವೆ. ಉಪವಾಸ ಇರದಂತೆ ಹೊಟ್ಟೆ ತುಂಬಿಸುವವರಿಗೆ ದೇವರು ಒಳ್ಳೆಯದನ್ನು ಮಾಡಲಿ. –
ಹನುಮಂತಪ್ಪ, ಬಾಂಡೆ ಸಾಮಾನು ಅಂಗಡಿಯ ಕೂಲಿ
-ಕೆ.ನಿಂಗಜ್ಜ