ಹುಣಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಯೋಜನೆಯಾಗಿದ್ದ ಇಂದಿರಾ ಕ್ಯಾಂಟೀನ್ ಹುಣಸೂರಿನಲ್ಲಿ ಪ್ರಾರಂಭಗೊಂಡಿದೆ.
ಹಸಿದವರಿಗೆ ಕಡಿಮೆ ದರದಲ್ಲಿ ಊಟ, ಉಪಹಾರಗಳನ್ನು ಒದಗಿಸುವ ಇಂದಿರಾ ಕ್ಯಾಂಟೀನ್ ಗೆ ಶಾಸಕ ಎಚ್.ಪಿ.ಮಂಜುನಾಥ್ ಅವರು ಇಂದು ಚಾಲನೆ ನೀಡಿದರು.
ಬಳಿಕ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಶಾಸಕ ಮಂಜುನಾಥ್ ಅವರು, ‘ಗ್ರಾಮೀಣ ಭಾಗದಿಂದ ನಗರಕ್ಕೆ ಬರುವ ಬಡವರು ಮತ್ತು ಕಾರ್ಮಿಕರು ಹಸಿವಿನಿಂದ ಬಳಲಬಾರದೆಂದು ರಾಜ್ಯಾದ್ಯಂತ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟ ನೀಡುವ ಈ ಕ್ಯಾಂಟಿನ್ ನಲ್ಲಿ 5 ರೂಗೆ ಉಪಹಾರ ಮತ್ತು 10 ರೂಗೆ ಊಟ ನೀಡಲಾಗುತ್ತದೆ’ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ ಒಂದು ಹೊತ್ತಿಗೆ 500 ಗ್ರಾಹಕರಿಗೆ ಈ ಸೇವೆಯನ್ನು ಸೀಮಿತಗೊಳಿಸಲಾಗಿದೆ. ಒಬ್ಬರಿಗೆ 32 ರೂ ಸಬ್ಸಿಡಿ ನೀಡಲಾಗುತ್ತದೆ. ನಗರಸಭೆಯವರು ಉಸ್ತುವಾರಿ ವಹಿಸಬೇಕು. ಆಹಾರ ಪೂರೈಕೆಯಲ್ಲಿ ಶುಚಿ, ರುಚಿಗೆ ಆದ್ಯತೆ ನೀಡುವಂತೆ ಶಾಸಕರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ತಹಸೀಲ್ದಾರ್ ಬಸವರಾಜ್, ನಗರಸಭೆ ಪೌರಾಯುಕ್ತ ಮಂಜುನಾಥ್ ತಾ.ಪಂ.ಇ.ಓ. ಗಿರೀಶ್, ನಗರಸಭಾ ಸದಸ್ಯರಾದ ಮಾಲಿಕ್ ಪಾಷಾ, ಗಣೇಶ್ ಕುಮಾರಸ್ವಾಮಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪು ಷ್ಪಾಮರ್ ನಾಥ್, ಜಿ.ಪಂ.ಸದಸ್ಯೆ ಸಾವಿತ್ರಿ ಮಂಜು, ನಗರಸಭೆ ಸದಸ್ಯರಾದ ಸ್ವಾಮಿಗೌಡ, ಗಣೇಶ ಕುಮಾರಸ್ವಾಮಿ ಸೇರಿದಂತೆ ಇತರೇ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಕ್ಯಾಂಟೀನ್ ಉದ್ಘಾಟನೆಯ ನಂತರ ನಗರಸಭಾ ಸದಸ್ಯರೊಂದಿಗೆ ಶಾಸಕರು ಉಪಹಾರದ ರುಚಿಯನ್ನು ಸವಿದರು.