Advertisement

ರಜಾದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ ಬಂದ್‌

02:55 PM Aug 22, 2022 | Team Udayavani |

ಯಳಂದೂರು: ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು ಊಟ, ತಿಂಡಿ ಮಾಡದೆ ಇರಬಾರದು, ಹಸಿದು ಮಲಗಬಾರದು, ಅವರಿಗೆ ಕಡಿಮೆ ಹಣದಲ್ಲಿ ಗುಣಮಟ್ಟದ ಆಹಾರ ದೊರಕಬೇಕು ಎಂಬ ಮಹತ್ತರ ಉದ್ದೇಶದಿಂದ ಆರಂಭಗೊಂಡ ಇಂದಿರಾ ಕ್ಯಾಂಟೀನ್‌ ಯಳಂದೂರು ಪಟ್ಟಣದಲ್ಲಿ ರಜಾದಿನಗಳಲ್ಲಿ ಬಂದ್‌ ಆಗುವುದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.

Advertisement

ಪಟ್ಟಣದ 1ನೇ ವಾರ್ಡಿನ ಆಶ್ರಯ ಬಡಾವಣೆಯಲ್ಲಿ, 2019ರ ಮಾರ್ಚ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿತ್ತು, ಪೊಲೀಸ್‌ ಠಾಣೆ, ಕಾಲೇಜು, ಸರ್ಕಾರಿ ಆಸ್ಪತ್ರೆ, ತಾಲೂಕು ಕಚೇರಿ, ಪಟ್ಟಣ ಪಂಚಾಯಿತಿ ಕಚೇರಿ ಸೇರಿದಂತೆ ಇತರೆ ಸಾರ್ವಜನಿಕರು ಹೆಚ್ಚಾಗಿ ಆಸ್ಪತ್ರೆಯ ರೋಗಿಗಳು ಮತ್ತು ಅವರ ಸಂಬಂಧಿಗಳು, ಆಟೋ ಚಾಲಕರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಸೇರಿದ ಬಡ ಮಧ್ಯಮ ವರ್ಗದ ಜನರು ಇಂದಿರಾ ಕ್ಯಾಂಟೀನ್‌ ನಲ್ಲಿ ಅತಿ ಕಡಿಮೆ ದರದಲ್ಲಿ ಊಟ, ತಿಂಡಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಪ್ರಸುತ್ತ ದಿನಗಳಲ್ಲಿ ಗುಣಮಟ್ಟದ ಊಟ, ತಿಂಡಿಯನ್ನು ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ದಿನದಿಂದ ದಿನಕ್ಕೆ ಕ್ಯಾಂಟೀನ್‌ಗೆ ಆಗಮಿಸುವವೆ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತಿದೆ. ಕೋವಿಡ್‌ ಸಮಯದಲ್ಲಿ ಕ್ಯಾಂಟೀನ್‌ನಲ್ಲಿ ಊಟ ಕೊಡುತ್ತಿದ್ದೆವು. ಬಡವರು ಕೈ ಮುಗಿದು ಊಟ ಮಾಡಿ ಹೋಗು ತ್ತಿದ್ದರು. ಆದರೆ ಗುತ್ತಿಗೆದಾರರು ಬರುಬರುತ್ತಾ ಕ್ಯಾಂಟೀನ್‌ ನಡೆಸಲು ನಿರ್ಲಕ್ಷ್ಯ ವಹಿಸಿದರು. ಇದರಿಂದ ಕ್ಯಾಂಟೀನ್‌ಗೆ ಬೀಗ ಹಾಕಿ ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹೋಗುತ್ತಿದ್ದಾರೆ ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಗುಣಮಟ್ಟದ ಊಟ ನೀಡುತ್ತಿಲ್ಲ: ಇಂದಿರಾ ಕ್ಯಾಂಟೀನ್‌ನ್ನು ಗುತ್ತಿಗೆ ಆಧಾರದಲ್ಲಿ ನಡೆಸುತ್ತಿತ್ತು. ಸರ್ಕಾರ ಆದೇಶದಂತೆ ಉಪಾಹಾರಕ್ಕೆ 5 ರೂ., ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10 ರೂ. ದರ ನಿಗದಿಪಡಿಸಲಾಗಿದೆ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ತಿಂಡಿ, ಎರಡು ಬಾರಿ ಊಟ ಸೇರಿದಂತೆ 52.49 ರೂ. ಆಹಾರ ವಿತರಣೆ ಟೆಂಡರ್‌ ಮಂಜೂರು ಮಾಡಲಾಗಿದೆ. ಗ್ರಾಹಕರಿಂದ 25 ಮತ್ತು ಉಳಿದ 27.49 ರೂ. ಅನ್ನು ರಾಜ್ಯ ಸರ್ಕಾರ ಪಾವತಿಸುತ್ತಿದೆ. ಪ್ರತಿ ತಿಂಗಳು ಉಪಾಹಾರ ಮತ್ತು ಊಟ ಸೇವಿಸಿದ ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ ಬಿಲ್‌ ಪಾವತಿಸಲಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ನಿಗದಿತ ಮಟ್ಟದಲ್ಲಿ ಗುಣಮಟ್ಟದ ಸಾಮಗ್ರಿ ಹಾಗೂ ತರಕಾರಿಗಳನ್ನು ಬಳಸದೆ ಊಟ ನೀಡಲಾಗುತ್ತಿದೆ ಎಂಬ ಆರೋಪ ಗಳು ಕೇಳಿ ಬರುತ್ತಿವೆ. ಜತೆಗೆ ಸರ್ಕಾರಿ ರಜೆ ಹಾಗೂ ಭಾನುವಾರ ದಿನಗಳಲ್ಲಿ ಕ್ಯಾಂಟೀನ್‌ ಬಂದ್‌ ಮಾಡುವುದರಿಂದ ಬಡ ಜನರು ಊಟಕ್ಕೆ ಪರದಾಡು ವಂತಾಗಿದೆ ಎಂದು ಯರಿಯೂರು ಗ್ರಾಮದ ವ್ಯಾಪಾರಿ ಮಲ್ಲು ದೂರಿದರು.

ಈ ಹಿಂದೆ ಬಾಗಿಲು ಮುಚ್ಚಿ ಹೋಗಿರುವ ಬಗ್ಗೆ ನೋಟಿಸ್‌ ನೀಡಿ ಎಚ್ಚರಿಸಲಾಗಿದೆ ಆದರೂ ಕೂಡ ಪದೇ ಪದೆ ಈ ರೀತಿ ತಪ್ಪು ಮಾಡುತ್ತಿರುವುದು ಸೂಕ್ತವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ವಹಿಸಲಾಗುವುದು. – ಮಲ್ಲೇಶ್‌, ಮುಖ್ಯಾಧಿಕಾರಿ ಪಪಂ, ಯಳಂದೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next