ಮಾಲೂರು: ಕಳೆದ ಐದು ವರ್ಷಗಳಲ್ಲಿ ರಾಜಕೀಯ ಬದಲಾವಣೆಗಳು ಸರ್ಕಾರದಲ್ಲಿನ ಭಿನ್ನಾಭಿಪ್ರಾಯದಿಂದ ಸಿದ್ದರಾಮಯ್ಯನವರ ಕನಸಿನ ಕೂಸಾಗಿದ್ದ ಇಂದಿರಾ ಕ್ಯಾಂಟೀನ್ ಮಾಲೂರು ತಾಲೂಕಿನಲ್ಲಿ ಕೈಗೂಡಲೇ ಇಲ್ಲ. ಪ್ರಸ್ತುತ ದಿನಗಳಲ್ಲಾದರೂ ಸರ್ಕಾರದ ಇಂದಿರಾ ಕ್ಯಾಂಟೀನ್ ಆರಂಭವಾಗುದೇ ಎನ್ನುವುದು ಸಾರ್ವಜನಿಕ ವಲಯದ ಚರ್ಚೆ ನಡೆಯುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ಬೃಹತ್ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಚುನಾವಣೆಯ ಪೂರ್ವದಲ್ಲಿ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳಂತೆಯೇ ಮುಚ್ಚಿಹೋಗಿರುವ ಇಂದಿರಾ ಕ್ಯಾಂಟಿನ್‌ಗಳನ್ನು ಆರಂಭಿಸುವ ಸಂಕಲ್ಪ ತೊಟ್ಟಿದ್ದು, ಕೆಲವು ತಾಲೂಕುಗಳಲ್ಲಿ ಕ್ಯಾಂಟಿನ್ ಆರಂಭವೇ ಸಾಧ್ಯವಾಗಿಲ್ಲ. ಆ ಸಾಲಿನಲ್ಲಿ ಸೇರುವ ತಾಲೂಕಿನಲ್ಲಿ ಸಾರ್ವಜನಿಕರು ಮತ್ತು ಬಡಜನರು ಸರ್ಕಾರದ ಯೋಜನೆಯಿಂದ ವಂಚಿತರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಿದ್ದರಾಮಯ್ಯನವರೇ ಮುಖ್ಯ ಮಂತ್ರಿಗಳಾಗಿರುವ ಕಾರಣ ಸಾರ್ವಜನಿಕ ವಲಯದಲ್ಲಿ ಇಂದಿರಾ ಕ್ಯಾಂಟೀನ್ ಆಸೆ ಚಿಗುರಿದೆ.
ಕಾಮಗಾರಿ ಸ್ಥಗಿತ: ಕಳೆದ ಅವಧಿಯಲ್ಲಿ ಮುಖ್ಯ ಮಂತ್ರಿಗಳಾದ್ದ ಸಿದ್ದರಾಮಯ್ಯನವರ ಆಶಯದಂತೆ ಪಟ್ಟಣದಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗಿತ್ತು. ಕಾರ್ಯಕ್ರಮದ ಉಸ್ತುವಾರಿಯನ್ನು ಪುರಸಭೆಗೆ ವಹಿಸಿ, ಸ್ಥಳಾವಕಾಶದ ಅನುಕೂಲ ಕಲ್ಪಿಸಲು ಸರ್ಕಾರಆದೇಶ ನೀಡಿ ಅನುದಾನ ಬಿಡುಗಡೆ ಮಾಡಿದ್ದರಿಂದ ಸಂತೇ ಮೈದಾನದಲ್ಲಿ ಕ್ಯಾಂಟಿನ್‌ಆರಂಭಿಸಲು ಸ್ಥಳ ನಿಗದಿ ಪಡಿಸಲಾಗಿತ್ತು. ಐದುಲಕ್ಷಗಳ ವೆಚ್ಚದಲ್ಲಿ ಅಡಿಪಾಯ ಹಾಕಿ ಕ್ಯಾಂಟಿನ್ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಶಾಸಕ ಕೆ.ವೈ.ನಂಜೇಗೌಡರು ಉದ್ದೇಶಿದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಂತೇ ಮೈದಾನ ಸ್ಥಳ ಸಮಂಜಸವಲ್ಲ ಎನ್ನುವ ಅಭಿಪ್ರಾಯದಿಂದ ಕಾಮಗಾರಿ ನಿಲ್ಲಿಸಿ ಪಟ್ಟಣದ ಹೃದಯ ಭಾಗದಲ್ಲಿ ಆರಂಭಿಸಲು ಮುಂದಾಗಿದ್ದರು.
ಸಾರ್ವಜನಿಕರಿಂದ ಅಕ್ಷೇಪ: ಪಟ್ಟಣದ ಹೃದಯ ಬಾಗದಲ್ಲಿನ ಬಸ್‌ನಿಲ್ದಾಣಕ್ಕೆ ಸಮೀಪದ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಆಧಿಕೃತ ನಿವಾಸ ನೆಲ ಸಮಮಾಡಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ, ಪ್ರತಿ ಪಕ್ಷಗಳು ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿ ಪಟ್ಟಣದಲ್ಲಿ ಸರ್ಕಾರದ ಅನೇಕ ಸ್ಥಳಗಳು ಖಾಲಿ ಇದ್ದರೂ, ಇಲ್ಲಿ ಕ್ಯಾಂಟಿನ್ ನಿರ್ಮಾಣ ಮಾಡುವುದು ಸರಿಯಲ್ಲ ಆಕ್ಷೇಪಗಳು ಬಂದವು. ಸಾರ್ವಜನಿಕರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಕಾರಣ ಕಾಮಾಗಾರಿ ಸ್ಥಗಿತವಾಗಿತ್ತು. ಅಂದಿನ ಸಿದ್ದು ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಆದೇಶ ನೀಡಿದ ದಿನಗಳಲ್ಲಿ ಕ್ಷೇತ್ರದ ಶಾಸಕರು ಕಾಂಗ್ರೆಸ್‌ನವರೇ ಆಗಿದ್ದರೂ, ಯೋಜನೆ ಜಾರಿಯಾಗಲಿಲ್ಲ. ಸದ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಈಗಲಾದರೂ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗುತ್ತದೆಯೋ ಎನ್ನುವ ಚಿಂತನೆಯಲ್ಲಿ ಪಟ್ಟಣದ ಜನತೆ ಎದುರು ನೋಡುತ್ತಿದ್ದಾರೆ.
ಸ್ವಂತ ಖರ್ಚಿನಲ್ಲಿ ಮಧ್ಯಾಹ್ನದ ಊಟ: ಇಂದಿರಾ ಕ್ಯಾಂಟಿನ್ ಆರಂಭಿಸಲು ಅಡ್ಡಿ ಪಡಿಸುತ್ತಿದ್ದಂತೆ ಹಠಕ್ಕೆ ಬಿದ್ದ ಶಾಸಕ ಕೆ.ವೈ.ನಂಜೇಗೌಡರು ತಮ್ಮ ಸ್ವಂತ ಹಣದಲ್ಲಿ ಸಾರ್ವಜನಿಕರಿಗೆ ಮಧ್ಯಾಹ್ನದ ಊಟ ಕೊಡುವ ಹಿಂಗಿತ ವ್ಯಕ್ತ ಪಡಿಸಿ, ಪಟ್ಟಣದ ಹೃದಯ ಭಾಗದಲ್ಲಿನ ಕಾಂಗ್ರೆಸ್ ಮೈದಾನದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಿಸಿ, ಇಲ್ಲಿಯೇ ತಮ್ಮ ಸ್ವಂತ ಹಣದಲ್ಲಿ ಉಚಿತವಾಗಿ ಊಟ ಕೊಡುವ ಯೋಜನೆ ಆರಂಭಿಸಿ ಇದಕ್ಕೆ ಇಂದಿರಾ ಕ್ಯಾಂಟಿನ್ ಎಂದೇ ಕರೆಯಲು ಆರಂಭಿಸಿದ್ದರು. ಇದು ನಂಜೇಗೌಡರ ಕ್ಯಾಂಟೀನ್ ಆಯಿತೇ ಹೊರತು, ಸರ್ಕಾರದ ಇಂದಿರಾ ಕ್ಯಾಂಟೀನ್ ಆಗಲೇ ಇಲ್ಲ. ಉಚಿತವಾಗಿದ್ದ ಕಾರಣ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಿಲ್ಲ. ನಂಜೇಗೌಡ ಸ್ವಂತ ಖರ್ಚಿನಲ್ಲಿ ನಡೆಯುತ್ತಿರುವ ಕ್ಯಾಂಟಿನ್ ಆದ ಪರಿಣಾಮ ಬಿಕ್ಷಕರು, ಕೂಲಿ ಕಾರ್ಮಿಕರು ನಿರ್ಗತಿಗರಿಗೆ ಮಾತ್ರ ಸೀಮಿತವಾಗಿದ್ದ ಕ್ಯಾಂಟಿನ್ ಆಗಿ ಪರಿಣಮಿಸಿತ್ತು.