Advertisement
ದುರ್ಬಲ ವರ್ಗದವರು ಗುರುತಿನ ಚೀಟಿ ತೋರಿಸಿ ಮೂರು ಹೊತ್ತು ಊಟ ಮತ್ತು ತಿಂಡಿ ಪಡೆಯಲು ಅವಕಾಶ ಮಾಡಿಕೊಟ್ಟಿರುವುದು ಉತ್ತಮ ನಡೆ. ಏಕೆಂದರೆ ದಿನದ ದುಡಿಮೆ ನಂಬಿ ಬದುಕುವ ಆಟೋ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು ಹಾಗೂ ನಿರ್ಗತಿಕರು ಲಾಕ್‌ಡೌನ್ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಮೇ 24ರ ವರೆಗೆ ಬಡವರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸಿಗುವುದರಿಂದ ಸ್ವಲ್ಪ ಮಟ್ಟಿಗೆ ನಿರಾಳವಾಗಲಿದ್ದಾರೆ.
Related Articles
Advertisement
ರಾಜ್ಯ ಸರಕಾರವೂ ಈ ನಿಟ್ಟಿನಲ್ಲಿ ಯೋಚಿಸಿದರೆ ಬಿಪಿಎಲ್ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ ಕಾರ್ಡ್ ವಿತರಣೆಯಾಗದ 1.60 ಲಕ್ಷ ಕುಟುಂಬಗಳಿಗೆ ಅಕ್ಕಿ ವಿತರಣೆ ಮಾಡಲಾಗಿತ್ತು. ಎಪಿಎಲ್ ಕಾರ್ಡ್‌ದಾರರಿಗೆ ರಿಯಾಯಿತಿ ದರದಲ್ಲಿ ಅಕ್ಕಿ ನೀಡಲಾಗಿತ್ತು. ಅಂತಹ ಕ್ರಮಗಳು ಈಗಲೂ ಅಗತ್ಯ.ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣ್ಣು ತರಕಾರಿ ಹೂವು ಬೆಳೆದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಪ್ರತೀ ಎಕರೆಗೆ 15 ಸಾವಿರ ರೂ.ವರೆಗೆ ಪ್ಯಾಕೇಜ್ ನೀಡಲಾಗಿತ್ತು. ಶ್ರಮಿಕ ವರ್ಗಕ್ಕೆ ಆರ್ಥಿಕ ನೆರವು ಪ್ಯಾಕೇಜ್ ಘೋಷಿಸಲಾಗಿತ್ತು.ಈ ಬಾರಿಯೂ ಅದೇ ರೀತಿ ಪ್ಯಾಕೇಜ್ ನೀಡಬೇಕು ಎಂಬುದು ವಿಪಕ್ಷಗಳ ಆಗ್ರಹವೂ ಆಗಿದೆ. ರಾಜ್ಯ ಸರಕಾರ ಆರ್ಥಿಕ ಇತಿಮಿತಿಯಲ್ಲಿ ಯೋಚಿಸಿ ಸಾಧ್ಯವಾದಷ್ಟೂ ಬಡವರು, ಶ್ರಮಿಕ ವರ್ಗ, ರೈತಾಪಿ ಸಮುದಾಯದ ನೆರವಿಗೆ ಬಂದರೆ ಕಷ್ಟ ಕಾಲದಲ್ಲಿ ಸ್ಪಂದಿಸಿದಂತಾಗುತ್ತದೆ.ಕೊರೊನಾ ಸೋಂಕು ದೃಢಪಟ್ಟು ಸರಕಾರಿ ಬೆಡ್ ಸಿಗದೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಬಡವರ್ಗ ಲಕ್ಷಾಂತರ ರೂ. ವೆಚ್ಚ ಮಾಡಿ ಸಾಲದ ಕೂಪಕ್ಕೆ ಹೋಗುತ್ತಿದ್ದಾರೆ. ಇಂತಹ ಕುಟುಂಬ ರಕ್ಷಣೆಗೆ ಸರಕಾರ ಮುಂದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಲಹೆಯಂತೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕೊರೊನಾಗೆ ಚಿಕಿತ್ಸೆ ಪಡೆದರೂ 5 ಲಕ್ಷ ರೂ. ವಿಮೆ ಹಣ ದೊರಕುವಂತೆ ಮಾಡಿದರೆ ಎಷ್ಟೋ ಕುಟುಂಬಗಳಿಗೆ ಸಹಾಯವಾಗುತ್ತದೆ. ಈ ಬಗ್ಗೆಯೂ ಸರಕಾರ ಗಂಭೀರವಾಗಿ ಯೋಚಿಸಲಿ.