Advertisement
ಸುಸಜ್ಜಿತ ಕ್ರೀಡಾ ವಸತಿ ನಿಲಯವಿದ್ದರೂ ಸ್ಥಳೀಯ ಅಭ್ಯರ್ಥಿಗಳ ದಾಖಲಾತಿ ಶೇ.40ಕ್ಕಿಂತ ಕಡಿಮೆಯಿದೆ. 2007ರಿಂದಲೇ ಕ್ರೀಡಾ ವಸತಿ ನಿಲಯ ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯ ಅಭ್ಯರ್ಥಿಗಳ ದಾಖಲಾತಿ ಮಾತ್ರ ಕಡಿಮೆಯೇ ಇದೆ.
ಕ್ರೀಡಾ ವಸತಿ ನಿಲಯದಲ್ಲಿ 8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಮಾತ್ರ ಅವಕಾಶವಿತ್ತು. ವಾಲಿಬಾಲ್ ಮತ್ತು ಆ್ಯತ್ಲೆಟಿಕ್ಸ್‌ಗೆ ಸಂಬಂಧಿಸಿದ ತರಬೇತಿ ನೀಡಲಾಗುತ್ತದೆ. ಉತ್ತಮ ಕ್ರೀಡಾಪಟು ಗಳು ರೂಪುಗೊಳ್ಳುವ ಹಂತದಲ್ಲಿ ಅವರ ಪಿಯುಸಿ ಶಿಕ್ಷಣ ಮುಗಿದಿರುತ್ತದೆ. ಪದವಿಯೂ ಇಲ್ಲೇ ಮುಂದುವರಿಸಲು ಅನುಕೂಲ ವಾಗುವಂತೆ ಪ್ರಸಕ್ತ ಸಾಲಿನಿಂದ ಪದವಿ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಇದರಿಂದ 8 ವಿದ್ಯಾರ್ಥಿಗಳು ಅನುಕೂಲ ಪಡೆದಿದ್ದಾರೆ ಎಂದು ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Related Articles
ಕ್ರೀಡಾ ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯ ಇಲ್ಲಿದೆ. ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ತರಬೇತಿಗೆ ಇಬ್ಬರು ತರಬೇತುದಾರರಿದ್ದಾರೆ. ಜಿಮ್, ಈಜುಕೊಳ,ಅಥ್ಲೆಟಿಕ್ಸ್ ಟ್ರ್ಯಾಕ್ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಪ್ರತೀ ವರ್ಷ ಕ್ರೀಡಾ ಸಮವಸ್ತ್ರ, ಪರಿಕರಗಳನ್ನು ನೀಡಲಾಗುತ್ತದೆ. ನಿತ್ಯ ಊಟಕ್ಕೆ ಮೀನು, ಮೊಟ್ಟೆ, ಗ್ರೀನ್ ಸಲಾಡ್, ತರಕಾರಿ ಪಲ್ಯ, ಎರಡು ದಿನಗಳ ಗೊಮ್ಮೆ ಚಿಕನ್ ಮತ್ತು ಮಟನ್ ಸಹಿತವಾದ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತದೆ. ಕುಚ್ಚಲು ಅಕ್ಕಿ ಮತ್ತು ಬೆಳ್ತಿಗೆ ಅಕ್ಕಿ, ಪರೋಟ, ಚಪಾತಿ ಜತೆಗೆ ಬೆಳಗ್ಗೆ ಮೊಳಕೆ ಕಾಳು, ಟೀ-ಕಾಫಿ, ರಾತ್ರಿ ಹಾಲು ಮತ್ತು ಹಣ್ಣಿನ ರಸ ನೀಡಲಾಗುತ್ತದೆ.
Advertisement
ನಿಯಮ ಬದಲಾಗಬೇಕು ಈ ಹಿಂದೆ ಕ್ರೀಡಾ ವಸತಿ ನಿಲಯದ ದಾಖಲಾತಿಗೆ ಜಿಲ್ಲಾ ಮಟ್ಟದಲ್ಲಿ ಅಂತಿಮ ಪ್ರಕ್ರಿಯೆ ನಡೆಸಿ ಸೀಟುಗಳ ಹಂಚಿಕೆ ಮಾಡಲಾಗುತ್ತಿತ್ತು. ಈಗ ವಿಭಾಗೀಯ ಮಟ್ಟದಲ್ಲೇ ಅಂತಿಮ ಪ್ರಕ್ರಿಯೆ ನಡೆಯುವುದರಿಂದ ಸ್ಥಳೀಯರಿಗೆ ಆದ್ಯತೆ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಜಿಲ್ಲಾಮಟ್ಟದಲ್ಲಿಯೇ ಹಂಚಿಕೆಯಾಗಬೇಕು ಎಂಬ ಆಗ್ರಹವನ್ನು ಜಿಲ್ಲೆಯ ಕ್ರೀಡಾಪಟುಗಳು ಮಾಡುತ್ತಿದ್ದಾರೆ. ಕ್ರೀಡಾಪಟು ದಾಖಲಾತಿ ಹೇಗೆ ?
ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಕ್ರೀಡಾ ವಸತಿ ನಿಲಯ ಪ್ರವೇಶಾತಿ ಆರಂಭವಾಗುತ್ತದೆ. ಇಲ್ಲಿ ಅಂಕಗಳು ಮುಖ್ಯವಾಗಿರುವುದಿಲ್ಲ. ಕ್ರೀಡಾ ಕ್ಷೇತ್ರದ ಪ್ರತಿಭಾನ್ವಿತರು ಅಥವಾ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕಚೇರಿ ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು. ಜಿಲ್ಲಾ ಮಟ್ಟದಲ್ಲಿ ದೈಹಿಕ ಮತ್ತು ಕ್ರೀಡಾ ಸಾಮರ್ಥ್ಯ ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಉಡುಪಿ ಜಿಲ್ಲೆಯಿಂದ ಅರ್ಜಿ ತುಂಬ ಕಡಿಮೆ ಬರುತ್ತದೆ ಎಂದು ಕ್ರೀಡಾ ಇಲಾಖೆಯ ಮೂಲಗಳು ತಿಳಿಸಿವೆ. ಅತ್ಯುತ್ತಮ ಸಾಧನೆ
ಉಡುಪಿ ಕ್ರೀಡಾ ವಸತಿ ನಿಲಯ ಉತ್ತಮ ಸೌಕರ್ಯವನ್ನು ಹೊಂದಿದ್ದು, ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲೆಯ ಸ್ಥಳೀಯ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆ ಇದೆ. ಪ್ರಸ್ತುತ ಸಾಲಿನಲ್ಲಿ ಪದವಿ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. 2007ರಿಂದ ಇಲ್ಲಿವರೆಗೂ ನಡೆದ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ನಿಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಎರಡು ಚಿನ್ನ, ಒಂದು ಕಂಚು, ರಾಜ್ಯಮಟ್ಟದಲ್ಲಿ 16 ಚಿನ್ನ, 12 ಬೆಳ್ಳಿ, 16 ಕಂಚು ಹಾಗೂ ಜಿಲ್ಲಾ ಮಟ್ಟದಲ್ಲಿ 70 ಚಿನ್ನ, 47 ಬೆಳ್ಳಿ, 12 ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
– ಡಾ| ರೋಶನ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ