Advertisement

ಭಾರತ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ: ಸೆಹವಾಗ್‌

12:33 PM Apr 22, 2018 | |

ಕೋಲ್ಕತಾ: ಭಾರತ ಮುಂದಿನ ವರ್ಷದ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಗೆಲ್ಲುವ ನೆಚ್ಚಿನ ತಂಡ ಎಂಬುದಾಗಿ ಮಾಜಿ ಡ್ಯಾಶಿಂಗ್‌ ಓಪನರ್‌ ವೀರೇಂದ್ರ ಸೆಹವಾಗ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಬಲಿಷ್ಠವಾಗಿದೆ. ಇದರಿಂದ ಭಾರತಕ್ಕೆ 3ನೇ ಸಲ ವಿಶ್ವಕಪ್‌ ಗೆಲ್ಲಲು ಸಹಕಾರಿಯಾಗಲಿದೆ ಎಂದು ಸೆಹವಾಗ್‌ ಹೇಳಿದರು. ಜತೆಗೆ ಇದೇ ವರ್ಷ ಆಸ್ಟ್ರೇಲಿಯ ಪ್ರವಾಸದ ವೇಳೆ ಭಾರತ ಟೆಸ್ಟ್‌ ಸರಣಿಯನ್ನೂ ಜಯಿಸಲಿದೆ ಎಂದರು.

“ವಿದೇಶದಲ್ಲಿ ಟೆಸ್ಟ್‌ ಸರಣಿ ಗೆಲ್ಲುವಷ್ಟು ಸಾಮರ್ಥ್ಯವನ್ನು ಭಾರತ ತಂಡ ಹೊಂದಿದೆ. ಮೊನ್ನೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಈ ಅವಕಾಶ ಸ್ವಲ್ಪದರಲ್ಲೇ ಕೈತಪ್ಪಿತು. ಆದರೆ ಆಸ್ಟ್ರೇಲಿಯದಲ್ಲಿ ಹೀಗಾಗಲು ಸಾಧ್ಯವೇ ಇಲ್ಲ’ ಎಂಬುದು ಸೆಹವಾಗ್‌ ಅವರ ಖಚಿತ ಧ್ವನಿಯಾಗಿತ್ತು.

“ನಮ್ಮ ಕಾಲದಲ್ಲಿ ಶ್ರೀನಾಥ್‌, ಜಹೀರ್‌ ಖಾನ್‌, ಅಜಿತ್‌ ಅಗರ್ಕರ್‌, ಆಶಿಷ್‌ ನೆಹ್ರಾ ವೇಗದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸುತ್ತಿದ್ದರು. ಆದರೆ ಇವರು ಒಟ್ಟಾಗಿ ಆಡಿದ್ದೇ ಅಪರೂಪ. ಒಬ್ಬರಲ್ಲ ಒಬ್ಬರು ಗಾಯಾಳಾಗಿ ಹೊರಗುಳಿಯುತ್ತಿದ್ದರು. ಆದರೆ ಈಗಿನ ಬೌಲಿಂಗ್‌ ವಿಭಾಗ ಯಾವುದೇ ಪರಿಸ್ಥಿತಿಯನ್ನೂ ನಿಭಾಯಿಸುವಷ್ಟು ಸಶಕ್ತವಾಗಿದೆ’ ಎಂದರು.

“ಆಸ್ಟ್ರೇಲಿಯ ತಂಡದಲ್ಲಿ ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌ ಇಲ್ಲ ಎಂಬುದೊಂದು ಪ್ರಶ್ನೆಯಲ್ಲ. ಇವರ ಉಪಸ್ಥಿತಿಯಲ್ಲೂ ಭಾರತಕ್ಕೆ ಗೆಲ್ಲುವ ಸಾಮರ್ಥ್ಯವಿದೆ’ ಎಂಬುದಾಗಿ ಸೆಹವಾಗ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next