Advertisement

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

01:30 AM Apr 17, 2024 | Team Udayavani |

ಬೆಂಗಳೂರು: ಸೋಮವಾರ ರಾತ್ರಿಯ ರನ್‌ ಪ್ರವಾಹದಲ್ಲಿ ಸನ್‌ರೈಸರ್ ಹೈದರಾಬಾದ್‌ ಗೆದ್ದಿರಬಹುದು, ಆದರೆ ಎಲ್ಲರ ಹೃದಯ ಗೆದ್ದ ಆಟಗಾರನೆಂದರೆ ದಿನೇಶ್‌ ಕಾರ್ತಿಕ್‌. ಪಂದ್ಯ ಬಹುತೇಕ ಕೈ ಜಾರಿದರೂ ಪಟ್ಟು ಸಡಿಲಿಸದೆ ಬ್ಯಾಟಿಂಗ್‌ ಹೋರಾಟ ನಡೆಸಿದ ಡಿ.ಕೆ. ಆರ್‌ಸಿಬಿ ಅಭಿಮಾನಿಗಳಿಗೆ ಸೋಲಿನಲ್ಲೂ ಸಮಾಧಾನ ಮೂಡಿಸಿದರು. ಈ ಸಾಹಸದಿಂದಾಗಿ ಅವರಿಗೆ ಮುಂಬರುವ ವಿಶ್ವಕಪ್‌ನಲ್ಲಿ ಸ್ಥಾನ ಸಿಗಬಹುದೇ ಎಂಬ ಕುತೂಹಲವೀಗ ಗರಿಗೆದರಿದೆ.

Advertisement

ಮುಂಬೈ ವಿರುದ್ಧದ ಹಿಂದಿನ ಪಂದ್ಯದಲ್ಲೂ ಡಿ.ಕೆ. ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಇದನ್ನು ಕಂಡ ರೋಹಿತ್‌ ಶರ್ಮ ಕೂಡ ಕಾಲೆಳೆದಿದ್ದರು. ಟಿ20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಬೇಕೆಂಬ ರೀತಿಯಲ್ಲಿ ಆಡುತ್ತಿದ್ದಿ ನೋಡು ಎಂದು ತಮಾಷೆ ಮಾಡಿದ್ದರು. ಆರ್‌ಸಿಬಿ ಕೋಚ್‌ ಆ್ಯಂಡಿ ಫ್ಲವರ್‌ ಕೂಡ ದಿನೇಶ್‌ ಕಾರ್ತಿಕ್‌ ಅವರ ವಿಶ್ವಕಪ್‌ ಆಯ್ಕೆಯ ಸಾಧ್ಯತೆಯನ್ನು ತೆರೆದಿರಿಸಿದ್ದಾರೆ.

ಜೋಶ್‌ ತುಂಬಿದ ಬ್ಯಾಟಿಂಗ್‌
ಹೈದರಾಬಾದ್‌ ವಿರುದ್ಧ ದಿನೇಶ್‌ ಕಾರ್ತಿಕ್‌ ಬ್ಯಾಟ್‌ ಬೀಸಿದ್ದನ್ನು ಕಂಡಾಗ ಅವರ ವಿಶ್ವಕಪ್‌ ಆಯ್ಕೆ ನಿಜವಾಗಲೂ ಬಹುದು ಎಂದೆನಿಸದೇ ಇರದು. 288 ರನ್‌ ಬೆನ್ನಟ್ಟಿ ಹೋಗಿದ್ದ ಆರ್‌ಸಿಬಿ 10 ಓವರ್‌ ಅಂತ್ಯಕ್ಕೆ 122ಕ್ಕೆ 5 ವಿಕೆಟ್‌ ಕಳೆದುಕೊಂಡಿತ್ತು. ದೊಡ್ಡ ಸೋಲು ಕಾದು ನಿಂತಿತ್ತು. ಆದರೆ ಇದನ್ನು ಮರೆಸಿ, ಹೈದರಾಬಾದ್‌ ಆಟಗಾರರೂ ಬೆದರುವ ರೀತಿಯಲ್ಲಿ ಬ್ಯಾಟ್‌ ಬೀಸಿದ ಕಾರ್ತಿಕ್‌, ಪಂದ್ಯಕ್ಕೊಂದು ಜೋಶ್‌ ತುಂಬಿದರು. ಇವರ ಬ್ಯಾಟಿಂಗ್‌ ಅಬ್ಬರ ಕಂಡಾಗ ಆರ್‌ಸಿಬಿ ಈ ದಾಖಲೆ ಮೊತ್ತವನ್ನೂ ಚೇಸ್‌ ಮಾಡಬಹುದೆಂಬ ನಿರೀಕ್ಷೆ ಮೂಡಿದ್ದು ಸುಳ್ಳಲ್ಲ!

6ನೇ ಕ್ರಮಾಂಕದಲ್ಲಿ ಬಂದ ಕಾರ್ತಿಕ್‌ ಸುಂಟರಗಾಳಿಯಂಥ ಬೀಸುಗೆಯಲ್ಲಿ 35 ಎಸೆತಗಳಿಂದ 83 ರನ್‌ ಬಾರಿಸಿದರು. 7 ಸಿಕ್ಸರ್‌, 5 ಬೌಂಡರಿ ಬಾರಿಸಿ ಅಬ್ಬರಿಸಿದರು.

ಫಿನಿಶರ್‌ ಪಾತ್ರ?
ಕಳೆದ ಟಿ20 ವಿಶ್ವಕಪ್‌ ಬಳಿಕ ದಿನೇಶ್‌ ಕಾರ್ತಿಕ್‌ ಟೀಮ್‌ ಇಂಡಿಯಾ ಪರ ಯಾವುದೇ ಟಿ20 ಪಂದ್ಯ ಆಡಿಲ್ಲ. ಈ ಐಪಿಎಲ್‌ನಲ್ಲಿ ಆಡುತ್ತಿರುವ ರೀತಿ ಕಂಡಾಗ ಆಯ್ಕೆಗಾರರ ಕೆಲಸ ಜಟಿಲಗೊಳ್ಳುವುದರಲ್ಲಿ ಅನುಮಾನವಿಲ್ಲ. ಹೈದರಾ ಬಾದ್‌ ವಿರುದ್ಧ 237.14ರ ಸ್ಟ್ರೈಕ್‌ರೇಟ್‌ ದಾಖಲಿಸಿದ್ದಾರೆ. ಆದರೆ ವಿಕೆಟ್‌ ಕೀಪರ್‌ ರೇಸ್‌ನಲ್ಲಿ ಇನ್ನೂ ಅನೇಕರಿದ್ದಾರೆ. ರಿಷಭ್‌ ಪಂತ್‌, ಕೆ.ಎಲ್‌. ರಾಹುಲ್‌, ಸಂಜು ಸ್ಯಾಮ್ಸನ್‌ ಪ್ರಮುಖರು. ಕಾರ್ತಿಕ್‌ ಕೀಪರ್‌ ಅಲ್ಲದೇ ಹೋದರೂ “ಉತ್ತಮ ಫಿನಿಶರ್‌’ ಆಗಿ ತಂಡಕ್ಕೆ ಮರುಪ್ರವೇಶ ಮಾಡಲೂಬಹುದೆಂಬುದು ಅನೇಕರ ಅನಿಸಿಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next