ವಾಷಿಂಗ್ಟನ್/ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೋವಿಡ್ ಮಹಾಮಾರಿಗೆ ಅಮೆರಿಕಾದಲ್ಲಿ 1, 255 ಜನರು ಬಲಿಯಾಗಿದ್ದು, ಮೃತರ ಪ್ರಮಾಣ 94,702ಕ್ಕೆ ಏರಿಕೆಯಾಗಿದೆ. ಸುಮಾರು 15 ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲೂ ಕೂಡ ವೈರಸ್ ಪ್ರಭಾವ ದಿನೇ ದಿನೇ ಏರುಗತಿಯಲ್ಲಿ ಸಾಗಿದ್ದು ಸುಮಾರು 1.12 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಈ ವೈರಸ್ ಅಬ್ಬರ ಹೆಚ್ಚಾಗಿದ್ದು ಈ ರಾಜ್ಯದಲ್ಲಿ ಅತೀ ಹೆಚ್ಚು ಅಂದರೇ 41, 642 ಮಂದಿ ವೈರಾಣು ಪೀಡಿತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,345 ಹೊಸ ಪ್ರಕರಣಗಳು ದಾಖಲಾಗಿವೆ.
ಒಟ್ಟಾರೆಯಾಗಿ ಭಾರತದಲ್ಲಿ ಕಳೆದ 48 ಗಂಟೆಗಳಲ್ಲಿ 11,220 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. 2 ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಇಲ್ಲಿಯಾವರೆಗೆ ದೇಶಾದ್ಯಂತ 3,435 ಜನರು ಈ ಮಹಾಮಾರಿಗೆ ಬಲಿಯಾಗಿದ್ದು, 45,300 ಜನರು ಗುಣಮುಖರಾಗಿದ್ದಾರೆ.
ಮತ್ತೊಂದೆಡೆ ಬ್ರೆಜಿಲ್ ನಲ್ಲಿ ಕೋವಿಡ್ ಅಟ್ಟಹಾಸ ಮೆರೆಯುತ್ತಿದ್ದು ಗುರುವಾರ ಒಂದೇ ದಿನ 1,188 ಜನರು ಮೃತರಾಗಿ, 18 ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ. ಈ ದೇಶ ಶೀಘ್ರವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ರಷ್ಯಾವನ್ನು ಮೀರಿಸಿ 2ನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇಲ್ಲಿ ಈವರೆಗೂ 20 ಸಾವಿರಕ್ಕಿಂತ ಹೆಚ್ಚು ಜನರು ಮೃತರಾಗಿದ್ದು, 3ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ.