ವಾಷಿಂಗ್ಟನ್: ಅಮೆರಿಕದಲ್ಲಿ “ವಸತಿಗಾಗಿ ಪಾವತಿ’ ವೀಸಾ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಭಾರತೀಯರು ಸೇರಿದಂತೆ ಹಲವು ವಿದೇಶಿಯರು ಈಗ ಬಂಧನ ಹಾಗೂ ಗಡಿಪಾರು ಭೀತಿ ಎದುರಿಸುವಂತಾಗಿದೆ. ಸುಮಾರು 600 ಮಂದಿ ವಲಸಿಗರನ್ನು ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುವಂತೆ ಮಾಡಿದ ಪ್ರಕರಣ ಸಂಬಂಧ ಗುರುವಾರ ಭಾರತೀಯರು ಮತ್ತು ಭಾರತೀಯ ಮೂಲದ 8 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ನಕಲಿ ವಿಶ್ವವಿದ್ಯಾಲಯಗಳ ಹೆಸರಲ್ಲಿ ವಿದ್ಯಾರ್ಥಿ ವೀಸಾಗಳನ್ನು ದುರ್ಬಳಕೆ ಮಾಡಲಾಗಿದೆ. ಹಲವು ವಿದೇಶಿಯರನ್ನು ವಿದ್ಯಾರ್ಥಿ ವೀಸಾ ಮೂಲಕ ಕರೆಸಿಕೊಂಡು, ಅಮೆರಿಕದಲ್ಲಿ ಉದ್ಯೋಗ ಮಾಡುತ್ತಾ ಅಕ್ರಮವಾಗಿ ನೆಲೆಸಲು ಅವಕಾಶ ಕಲ್ಪಿಸಲಾಗಿದೆ. ಯುಎಸ್ ಸ್ಟೂಡೆಂಟ್ ವೀಸಾವನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ 8 ಮಂದಿಯನ್ನು ಬಂಧಿಸಲಾಗಿದ್ದು, ಈ ವೀಸಾ ಪಡೆದಿರುವವರನ್ನು ಬಂಧಿಸುವ ಮತ್ತು ಗಡಿಪಾರು ಮಾಡುವ ಕೆಲಸವನ್ನು ಅಧಿಕಾರಿಗಳು ಆರಂಭಿಸಿದ್ದಾರೆ.