Advertisement

ವನಿತಾ ಟಿ20 ಕ್ರಿಕೆಟ್‌: ನ್ಯೂಜಿಲ್ಯಾಂಡ್‌ ವಿರುದ್ಧ ಮುಗ್ಗರಿಸಿದ ಭಾರತ

11:15 PM Feb 09, 2022 | Team Udayavani |

ಕ್ವೀನ್ಸ್‌ಟೌನ್‌: ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಪ್ರವಾಸವನ್ನು ಭಾರತದ ವನಿತೆಯರು ಸೋಲಿನೊಂದಿಗೆ ಆರಂಭಿಸಿದ್ದಾರೆ. ಬುಧವಾರ ನಡೆದ ಟಿ20 ಪಂದ್ಯವನ್ನು 18 ರನ್ನಿನಿಂದ ಕಳೆದುಕೊಂಡಿದ್ದಾರೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ 5 ವಿಕೆಟಿಗೆ 155 ರನ್‌ ಗಳಿಸಿದರೆ, ಭಾರತ 8 ವಿಕೆಟಿಗೆ 137 ರನ್‌ ಮಾಡಿತು.

ಸ್ಮೃತಿ ಮಂಧನಾ ಗೈರು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಇವರ ಬದಲು ಇನ್ನಿಂಗ್ಸ್‌ ಆರಂಭಿಸಿದ ಯಾಸ್ತಿಕಾ ಭಾಟಿಯಾ ಎಸೆತಕ್ಕೊಂದರಂತೆ 26 ರನ್‌ ಮಾಡಿದರು (2 ಬೌಂಡರಿ, 1 ಸಿಕ್ಸರ್‌). ನಾಯಕಿ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಕೀಪರ್‌ ರಿಚಾ ಘೋಷ್‌ (ತಲಾ 12 ರನ್‌), ಶಫಾಲಿ ವರ್ಮ (13 ರನ್‌) ಸಿಡಿಯಲು ವಿಫಲರಾದರು. ಎಸ್‌. ಮೇಘನಾ ದಿಟ್ಟ ಹೋರಾಟವೊಂದನ್ನು ನಡೆಸಿ 30 ಎಸೆತಗಳಿಂದ 37 ರನ್‌ ಹೊಡೆದರು (6 ಬೌಂಡರಿ). ಇದು ಪಂದ್ಯದಲ್ಲೇ ಸರ್ವಾಧಿಕ ಗಳಿಕೆಯಾಗಿತ್ತು.

ನ್ಯೂಜಿಲ್ಯಾಂಡಿನ ಸವಾಲಿನ ಮೊತ್ತಕ್ಕೆ ಕಾರಣರಾದವರು ಆರಂಭಿಕರಾದ ಸುಝೀ ಬೇಟ್ಸ್‌ (36) ಮತ್ತು ಸೋಫಿ ಡಿವೈನ್‌ (31). ಇವರು ಮೊದಲ ವಿಕೆಟಿಗೆ 7.5 ಓವರ್‌ಗಳಿಂದ 60 ರನ್‌ ಒಟ್ಟುಗೂಡಿಸಿದರು.

ಇದನ್ನೂ ಓದಿ:ಬೆಂಗಳೂರು ಓಪನ್‌ ಟೆನಿಸ್‌: ಮೆಚ್ಚಿನ ಆಟಗಾರರಿಗೆ ಸೋಲಿನ ಆಘಾತ

Advertisement

ಇದು ಸರಣಿಯ ಏಕೈಕ ಟಿ20 ಪಂದ್ಯವಾಗಿದ್ದು, ಇನ್ನು 5 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಶನಿವಾರ ಮೊದಲ ಮುಖಾಮುಖೀ ಏರ್ಪಡಲಿದೆ.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-5 ವಿಕೆಟಿಗೆ 155 (ಬೇಟ್ಸ್‌ 36, ಡಿವೈನ್‌ 31, ಟಹುಹು 27, ಗ್ರೀನ್‌ 26, ಪೂಜಾ 16ಕ್ಕೆ 2, ದೀಪ್ತಿ 26ಕ್ಕೆ 2). ಭಾರತ-8 ವಿಕೆಟಿಗೆ 137 (ಮೇಘನಾ 37, ಯಾಸ್ತಿಕಾ 26, ಜೆಸ್‌ ಕೆರ್‌ 20ಕ್ಕೆ 2, ಅಮೇಲಿಯಾ ಕೆರ್‌ 25ಕ್ಕೆ 2, ಹ್ಯಾಲಿ ಜೆನ್ಸೆನ್‌ 25ಕ್ಕೆ 2). ಪಂದ್ಯಶ್ರೇಷ್ಠ: ಲೀ ಟಹುಹು.

ಸ್ಮೃತಿ ಮಂಧನಾ ಕ್ವಾರಂಟೈನ್‌
ಅವಧಿ ವಿಸ್ತರಣೆ
ನ್ಯೂಜಿಲ್ಯಾಂಡ್‌ನ‌ಲ್ಲಿ ಸ್ಮೃತಿ ಮಂಧನಾ ಸೇರಿದಂತೆ ಭಾರತದ ಮೂವರು ಕ್ರಿಕೆಟಿಗರ ಕ್ವಾರಂಟೈನ್‌ ಅವಧಿ ವಿಸ್ತರಣೆಗೊಂಡಿದೆ. ಹೀಗಾಗಿ ಮಂಧನಾ ಬುಧವಾರದ ಟಿ20 ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಯಿತು. ಮೊದಲ ಏಕದಿನ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಯೂ ಇಲ್ಲ. ಉಳಿದಿಬ್ಬರೆಂದರೆ ಮೇಘನಾ ಸಿಂಗ್‌ ಮತ್ತು ರೇಣುಕಾ ಸಿಂಗ್‌.
ನ್ಯೂಜಿಲ್ಯಾಂಡಿಗೆ ಬಂದಿಳಿದ ಭಾರತದ ಆಟಗಾರ್ತಿಯರೆಲ್ಲ “ಮ್ಯಾನೇಜ್‌x ಐಸೊಲೇಶನ್‌ ಕ್ವಾರಂಟೈನ್‌’ನಲ್ಲಿದ್ದರು (ಎಂ.ಐ.ಕ್ಯೂ). ಆದರೆ ಈ ಮೂವರ ಎಂ.ಐ.ಕ್ಯೂ. ವಿಸ್ತರಣೆ ಯಾಕಾಯಿತು ಎಂಬ ಕುರಿತು ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಟಿ20 ಪಂದ್ಯಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಯಾಸ್ತಿಕಾ ಭಾಟಿಯಾ ಈ ವಿಷಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next