Advertisement

ಹಾಕಿ: ವನಿತೆಯರಿಗೆ ಮೊದಲ ಸೋಲು

06:50 AM Mar 09, 2018 | Team Udayavani |

ಸಿಯೋಲ್‌: ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಭಾರತದ ವನಿತಾ ಹಾಕಿ ತಂಡ ಮೊದಲ ಸೋಲನುಭವಿಸಿದೆ. ಗುರುವಾರ ಸಿಯೋಲ್‌ನ “ಜಿಂಚುನ್‌ ನ್ಯಾಷನಲ್‌ ಆ್ಯತ್ಲೆಟಿಕ್‌ ಸೆಂಟರ್‌’ನಲ್ಲಿ ನಡೆದ 3ನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ 2-1 ಗೋಲುಗಳಿಂದ ರಾಣಿ ರಾಮ್‌ಪಾಲ್‌ ಪಡೆಯನ್ನು ಮಣಿಸಿತು.

Advertisement

ಮೊದಲೆರಡು ಪಂದ್ಯಗಳನ್ನು ಗೆದ್ದ ಭಾರತ 2-0 ಮುನ್ನಡೆಯಲ್ಲಿತ್ತು. ಗುರುವಾರದ ಪಂದ್ಯವನ್ನೂ ಜಯಿಸಿದ್ದರೆ ಸರಣಿ ವಶಪಡಿಸಿಕೊಳ್ಳಬಹುದಿತ್ತು. ಆದರೆ ಆತಿಥೇಯ ಪಡೆ ಮೊದಲ ಗೆಲುವಿನೊಂದಿಗೆ ಸರಣಿಯನ್ನು ಜೀವಂತವಾಗಿ ಇರಿಸಿದೆ. 5 ಪಂದ್ಯಗಳ ಸರಣಿಯ 4ನೇ ಮುಖಾಮುಖೀ ಶುಕ್ರವಾರ ನಡೆಯಲಿದೆ.

ಕೊರಿಯಾ ಆಕ್ರಮಣಕಾರಿ ಆರಂಭ
ಅತ್ಯಂತ ಆಕ್ರಮಣಕಾರಿಯಾಗಿ ಆಟ ಆರಂಭಿಸಿದ ಕೊರಿಯನ್‌ ವನಿತೆಯರು ಪಂದ್ಯದ 2 ಗೋಲುಗಳನ್ನು ಮೊದಲ ಕ್ವಾರ್ಟರ್‌ನಲ್ಲೇ ಬಾರಿಸಿ ಪ್ರಾಬಲ್ಯ ಮೆರೆದರು. ಪಂದ್ಯದ 12ನೇ ನಿಮಿಷದಲ್ಲಿ ಸಿಯುಲ್‌ ಕಿ ಚಿಯಾನ್‌, ಎರಡೇ ನಿಮಿಷದಲ್ಲಿ ಯುರಿಮ್‌ ಲೀ ಗೋಲುಗಳನ್ನು ಸಿಡಿಸಿ ಕೊರಿಯಾಕ್ಕೆ 2-0 ಮುನ್ನಡೆ ಒದಗಿಸಿದರು. ಎರಡೂ ಗೋಲುಗಳು ಪೆನಾಲ್ಟಿ ಕಾರ್ನರ್‌ ಮೂಲಕವೇ ಬಂದವು. ಈ ಸಂದರ್ಭದಲ್ಲಿ ಭಾರತದ ರಕ್ಷಣಾ ವಿಭಾಗ ಬಹಳ ದುರ್ಬಲವಾಗಿ ಗೋಚರಿಸಿತು. ಭಾರತದ ಆಟಗಾರ್ತಿಯರು ಕೊರಿಯಾದ ಮಿಡ್‌ ಫೀಲ್ಡ್‌ ಮೇಲೆ ಒತ್ತಡ ಹೇರಿದರೂ ಇದನ್ನು ಮೀರಿ ನಿಲ್ಲುವ ಮೂಲಕ ಆತಿಥೇಯರು ಪಾರಮ್ಯ ಸಾಧಿಸಿದರು.

ಭಾರತ ದ್ವಿತೀಯ ಕ್ವಾರ್ಟರ್‌ನಲ್ಲಿ ತಿರುಗಿ ಬಿತ್ತು. 16ನೇ ನಿಮಿಷದಲ್ಲಿ ಲಾಲ್ರೆಮಿÕಯಾಮಿ ಭಾರತದ ಪರ ಗೋಲಿನ ಖಾತೆ ತೆರೆದರು. ಅನಂತರ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತಾದರೂ ಅವಕಾಶಗಳನ್ನು ಕೈಚೆಲ್ಲುವ ಮೂಲಕ ನಿರಾಸೆ ಮೂಡಿಸಿತು. ದಕ್ಷಿಣ ಕೊರಿಯಾದ ಗೋಲ್‌ಕೀಪರ್‌ ಹೀಬಿನ್‌ ಜಂಗ್‌ ಅಮೋಘ ಪ್ರದರ್ಶನದ ಮೂಲಕ ಪ್ರವಾಸಿಗರ ಪ್ರಯತ್ನವನ್ನು ವಿಫ‌ಲಗೊಳಿಸಿದರು.

ತೃತೀಯ ಕ್ವಾರ್ಟರ್‌ನಲ್ಲಿ ಕೊರಿಯಾಕ್ಕೆ ಗೋಲು ಗಳಿಕೆಯ ಸಾಕಷ್ಟು ಅವಕಾಶಗಳಿದ್ದವು. 3 ಪೆನಾಲ್ಟಿ ಕಾರ್ನರ್‌ ಸಹಿತ ಎಲ್ಲ ಅವಕಾಶಗಳು ಕೈಕೊಟ್ಟವು. ಭಾರತದ ಗೋಲು ಪೆಟ್ಟಿಗೆಯ ಮುಂದೆ ನಿಂತಿದ್ದ ನೀಳಕಾಯದ ರಜನಿ ಎಟಿಮರ್ಪು ಕೊರಿಯನ್ನರಿಗೆ ಕಂಟಕವಾಗಿ ಪರಿಣಮಿಸಿದರು.

Advertisement

ಸಾಧ್ಯವಾಗಲಿಲ್ಲ ಸಮಬಲ
ಕೊನೆಯ ಕ್ವಾರ್ಟರ್‌ನಲ್ಲಿ ಭಾರತದ ಪ್ರದರ್ಶನ ಉತ್ತಮ ಮಟ್ಟದಲ್ಲಿತ್ತು. ಪಂದ್ಯವನ್ನು ಸಮಬಲಕ್ಕೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿತು. ಪಂದ್ಯದ ಕೊನೆಯ 4 ನಿಮಿಷಗಳಲ್ಲಿ ಲಭಿಸಿದ 2 ಪೆನಾಲ್ಟಿ ಕಾರ್ನರ್‌ಗಳು ವ್ಯರ್ಥವಾದವು. ಗೋಲಿ ಹೀಬಿನ್‌ ಜಂಗ್‌ ಜಬರ್ದಸ್ತ್ ಪ್ರದರ್ಶನ ನೀಡಿ ತಂಡವನ್ನು ಬಚಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next