ಬರ್ಮಿಂಗಂ: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕೂಟದ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಬಂಗಾರದ ಪದಕದ ಆಸೆ ಕಮರಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿ ಫೈನಲ್ ನಲ್ಲಿ ಭಾರತದ ವನಿತೆಯರು ಪೆನಾಲ್ಟಿ ಶೂಟೌಟ್ ನಲ್ಲಿ 0-3 ಅಂತರದಿಂದ ಸೋಲನುಭವಿಸಿದ್ದಾರೆ.
ಆದರೆ ಶೂಟೌಟ್ ಸಮಯದಲ್ಲಿ ಚೀಟಿಂಗ್ ಮಾಡಿ ತಂಡಕ್ಕೆ ಚಿನ್ನದ ಪದಕದ ಅವಕಾಶವನ್ನು ‘ನಿರಾಕರಿಸಲಾಗಿದೆ’ ಎಂದು ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಎಲ್ಲಾ ಮೂರು ಶೂಟರ್‌ಗಳು ಶೂಟೌಟ್ ನಲ್ಲಿ ವಿಫಲರಾದರು. ಆದರೂ ಭಾರತದ ನಾಯಕಿ ಮತ್ತು ಗೋಲ್‌ಕೀಪರ್ ಸವಿತಾ ಅವರ ಉತ್ತಮ ಸೇವ್ ನೊಂದಿಗೆ ಆಸ್ಟ್ರೇಲಿಯಾದ ಮಲೋನ್ ರ ಮೊದಲ ಶೂಟೌಟ್ ನ್ನು ತಪ್ಪಿಸಿದರು. ಆದರೆ ಆಸೀಸ್ ಆಟಗಾರ್ತಿಯ ಪ್ರಯತ್ನದ ವೇಳೆ ಗಡಿಯಾರದ ಟೈಮರ್ ಆರಂಭವಾಗಿರಲಿಲ್ಲ ಎಂದು ಅಂಪೈರ್ ಗಳು ಮಧ್ಯ ಪ್ರವೇಶಿಸಿ ಆಸ್ಟ್ರೇಲಿಯಾಗೆ ಮತ್ತೊಂದು ಅವಕಾಶ ನೀಡಿದರು. ಎರಡನೇ ಅವಕಾಶದಲ್ಲಿ ಆಸೀಸ್ ಆಟಗಾರ್ತಿಯು ಗೋಲು ಬಾರಿಸಿದರು.
ಇದನ್ನೂ ಓದಿ:ರೈಲಿನಲ್ಲಿ ಮಹಿಳೆಗೆ ಕಿರುಕುಳ,ಬೆದರಿಕೆ : ಸೀನಿಯರ್ ಮ್ಯಾನೇಜರ್, ಎಂಬಿಎ ವಿದ್ಯಾರ್ಥಿ ವಶಕ್ಕೆ
ಈ ಘಟೆನೆಯಿಂದ ತಂಡ ಆಘಾತಕ್ಕೆ ಒಳಗಾಯಿತು. ಟೀಂ ಇಂಡಿಯಾ ಕೋಚ್ ಜನ್ನೆಕೆ ಶಾಪ್ಮನ್ ಈ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, “ ನನಗಿದು ಅರ್ಥವಾಗುತ್ತಿಲ್ಲ. ಆಸ್ಟ್ರೇಲಿಯಾ ತಂಡ ದೂರು ನೀಡಿರಲಿಲ್ಲ. ಈ ಅಧಿಕಾರಿಗಳ ನಾಟಕೀಯ ನಡೆಯ ಬಗ್ಗೆ ಅರ್ಥವಾಗುತ್ತಿಲ್ಲ” ಎಂದಿದ್ದಾರೆ.
ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಭಾರತದ ಬಂಗಾರದ ಪದಕವನ್ನು ಕಿತ್ತುಕೊಂಡಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.