ಬೆಂಗಳೂರು: ಬ್ರಝಿಲಿಯನ್ ಸ್ಟ್ರೈಕರ್ ಕ್ಲೀಟನ್ ಸಿಲ್ವ ಬೆಂಗಳೂರು ಎಫ್ ಸಿ (ಬಿಎಫ್ ಸಿ ತಂಡದೊಂದಿಗೆ ಒಂದು ವರ್ಷದ ಒಪ್ಪಂದ ಮಾಡಿಕೊಂಡಿದ್ದಾರೆ. ಐಎಸ್‌ಎಲ್ ಕ್ಲಬ್ ಶನಿವಾರ ಇದನ್ನು ಪ್ರಕಟಿಸಿತು. ಒಪ್ಪಂದದಂತೆ ಇದನ್ನು 2 ವರ್ಷಗಳಿಗೆ ವಿಸ್ತರಿಸುವ ಅವಕಾಶವಿದೆ.
33 ವರ್ಷದ ಕ್ಲೀಟನ್ ಸಿಲ್ವ ಬ್ರಝಿಲಿಯನ್ ಮ್ಯಾಡುರಿರಾ ಕ್ಲಬ್ ಪರ ತಮ್ಮ ಫುಟ್‌ಬಾಲ್ ಜೀವನವನ್ನು ಆರಂಭಿಸಿದ್ದರು. ಬಳಿಕ ಥಾಯ್ಲೆಂಡ್‌ಗೆ ತೆರಳಿ ಯಶಸ್ವಿ ದಶಕವೊಂದನ್ನು ಕಳೆದರು. ಮೆಕ್ಸಿಕೊ, ಚೀನ ಕ್ಲಬ್ ತಂಡಗಳನ್ನೂ ಪ್ರತಿನಿಧಿಸಿದರು.
100 ಗೋಲು ಬಾರಿಸಿದ ಥಾಯ್ಲೆಂಡ್‌ನ ಮೊದಲ ಫುಟ್ಬಾಲಿಗನೆಂಬ ಹೆಗ್ಗಳಿಕೆ ಕ್ಲೀಟನ್ ಸಿಲ್ವ ಅವರದು. ಥಾಯ್ಲೆಂಡ್‌ನ ಮೊದಲೆರಡು ಋತುಗಳಲ್ಲಿ ಸಿಲ್ವ ಅತ್ಯಧಿಕ ಗೋಲು ದಾಖಲಿಸಿದರು. ಥಾಯ್ಲೆಂಡ್ ಲೀಗ್‌ನ ಸಾರ್ವಕಾಲಿಕ ಗೋಲುಗಳ ದಾಖಲೆ ಕೂಡ ಇವರ ಹೆಸರಲ್ಲಿದೆ.
“ಬೆಂಗಳೂರು ಎಫ್ ಸಿ ಚಾಂಪಿಯನ್ ಕ್ಲಬ್‌ಗಳಲ್ಲಿ ಒಂದಾಗಿದ್ದು, ಇದರ ಅಭಿಮಾನಿಗಳನ್ನು ಸಂತೋಷಪಡಿಸುವುದು ನನ್ನ ಉದ್ದೇಶ’ ಎಂಬುದಾಗಿ ಕ್ಲೀಟನ್ ಸಿಲ್ವ ಹೇಳಿದ್ದಾರೆ.