ಹೊಸದಿಲ್ಲಿ : ‘ಪಾಕ್ ಜಲ ಪ್ರದೇಶವನ್ನು ಪ್ರವೇಶಿಸಿದ ಭಾರತೀಯ ಜಲಾಂತರ್ಗಾಮಿಯನ್ನು ನಾವು ಪತ್ತೆ ಹಚ್ಚಿ, ದಾಳಿ ನಡೆಸಿ, ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ’ ಎಂಬ ಪಾಕ್ ನೌಕಾಪಡೆಯ ಹೇಳಿಕೆಯನ್ನು ಭಾರತೀಯ ನೌಕಾಪಡೆ ಸಾರಾಸಗಟು ಸುಳ್ಳೆಂದು ತಿರಸ್ಕರಿಸಿದೆ.
ಈ ಸಂಬಂಧ ಪಾಕ್ ನೌಕಾಪಡೆ ಬಹಿರಂಗಪಡಿಸಿರುವ ವಿಡಿಯೋ ಚಿತ್ರಿಕೆ, 2016 ನವೆಂಬರ್ 18ರ ದಿನಾಂಕದ್ದು ಎಂದು ಸಾಬೀತು ಪಡಿಸುವ ಮೂಲಕ ಭಾರತೀಯ ನೌಕಾ ಪಡೆ ಪಾಕ್ ಸುಳ್ಳನ್ನು ಬಟಾಬಯಲು ಮಾಡಿದೆ.
‘ಪಾಕಿಸ್ಥಾನ ಈ ರೀತಿ ಸುಳ್ಳನ್ನು ಹರಡುವ ಮೂಲಕ ಜನರಲ್ಲಿ ಯುದ್ಧದ ಉನ್ಮಾದವನ್ನು ಹೆಚ್ಚಿಸುವ ಷಡ್ಯಂತ್ರ ನಡೆಸಿ ಆ ಮೂಲಕ ಭಾರತದ ಮೇಲೆ ಭಯೋತ್ಪಾದಕ ದಾಳಿಗೆ ಸಿದ್ಧರಾಗಿರುವ ತನ್ನ ಉಗ್ರರ ಮೇಲಿನ ಭಾರತದ ಗಮನವನ್ನು ಬೇರೆಡೆಗೆ ಹರಿಸುವ ಯತ್ನ ವ್ಯರ್ಥ ನಡೆಸಿದೆ’ ಎಂದು ಸರಕಾರಿ ಮೂಲಗಳು ಹೇಳಿವೆ.
ಪಾಕ್ ನೌಕಾಪಡೆ ವಕ್ತಾರ ಈ ನಿಟ್ಟಿನಲ್ಲಿ ನೀಡಿರುವ ಹೇಳಿಕೆಯನ್ನು ಎಎನ್‌ಐ ಉಲ್ಲೇಖೀಸಿ ವರದಿ ಮಾಡಿದೆ.
“ಪಾಕ್ ನೌಕಾಪಡೆ ತನ್ನ ಪರಿಣತ ಕೌಶಲವನ್ನು ಬಳಸಿಕೊಂಡು ಪಾಕ್ ಜಲ ವ್ಯಾಪ್ತಿಯೊಳಗೆ ನುಗ್ಗಿ ಬರಲು ಯತ್ನಿಸಿದ ಭಾರತೀಯ ಜಲಾಂತರ್ಗಾಮಿಯನ್ನು ಗುರಿ ಇರಿಸಿ, ದಾಳಿ ನಡೆಸಿ, ಅದನ್ನು ಯಶಸ್ವಿಯಾಗಿ ಹೊರಗಟ್ಟಿದ್ದು ಅದರ ಈ ಸಾಹಸವು ಪಾಕ್ ಸರಕಾರದ ಶಾಂತಿ ನೀತಿಗೆ ಅನುಗುಣವಾಗಿದೆ’ ಎಂದು ಪಾಕ್ ವಕ್ತಾರ ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.