ಬೆಂಗಳೂರು: ಭಾರತೀಯ ಅಂಚೆ ಇಲಾಖೆ ಹೊಸ ಮೈಲುಗಲ್ಲೊಂದನ್ನು ಮೆರೆದಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೂ ಅಡಿಯಿಟ್ಟಿರುವ ಅಂಚೆ ಇಲಾಖೆ ಇದೀಗ 1 ಸಾವಿರ ಎಟಿಎಂ ಕೇಂದ್ರ ತೆರೆಯುವ ಮೂಲಕ ಮತ್ತೂಂದು ಹೊಸ ಯಶೋಗಾಥೆ ಬರೆದಿದೆ.
ಪ್ರಧಾನ ಅಂಚೆ ಕಚೇರಿಯಲ್ಲಿ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಿಜೋರಾಂನಲ್ಲಿ ತೆರೆಯಲಾಗಿರುವ ಅಂಚೆ ಇಲಾಖೆಯ ನೂರನೇ ಎಟಿಎಂ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಯಿತು. ಭಾರತೀಯ ಅಂಚೆ ಇಲಾಖೆ ಬ್ಯಾಂಕಿಂಗ್ ಸದಸ್ಯೆ ಸಂಧ್ಯಾರಾಣಿ ಮಾತನಾಡಿ, ಗುಡ್ಡಗಾಡು ಪ್ರದೇಶ ಮಿಜೋರಾಂನ ಲುಂಗ್ಲೆ ನಲ್ಲಿ ನೂರನೇ ಎಟಿಎಂ ಕೇಂದ್ರವನ್ನು ಸಾರ್ವಜನಿಕರಿಗೆ ಅರ್ಪಣೆ ಮಾಡುವ ಮೂಲಕ ಅಂಚೆ ಇಲಾಖೆ ಮತ್ತೂಂದು ಮೈಲುಗಲ್ಲನ್ನು ಸ್ಥಾಪಿಸಿದೆ.
ಇದು ಹೆಮ್ಮೆ ಪಡುವಂತ ವಿಚಾರವೆಂದರು. ಅಂಚೆ ಇಲಾಖೆ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಜನರಲ್ಲಿ ಮತ್ತಷ್ಟು ನಂಬಿಕೆ ಬಂದಿದೆ. ಲೌಕ್‌ಡೌನ್ ವೇಳೆ ಇಲಾಖೆ ಎಟಿಎಂಗಳ ಮೂಲಕ ಸುಮಾರು 404 ಕೋಟಿ ರೂ. ವಹಿವಾಟು ನಡೆದಿದೆ. ಸುಕನ್ಯ ಸಮೃದಿ ಯೋಜನೆಯಡಿ ಶೇ.85 ರಷ್ಟು ಖಾತೆಗಳನ್ನು ಇಲಾಖೆ ನಿರ್ವಹಿಸುತ್ತಿದೆ. ರಿಸರ್ವ್ ಬ್ಯಾಂಕ್ ನಿಯಮದಡಿ ಮುಂದಿನ ದಿನಗಳಲ್ಲಿ ಬ್ಯಾಂಕಿಗ್ ಕ್ಷೇತ್ರದಲ್ಲಿ ಮತ್ತಷ್ಟು ಜನೋಪಯೋಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ವಿಶೇಷ ಲಕೋಟೆ ಬಿಡುಗಡೆ: ಅಂಚೆ ಇಲಾಖೆ ವಿಶೇಷ ಲಕೋಟೆ ಹೊರತಂದಿದ್ದು ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿ, ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಅಂಚೆ ಇಲಾಖೆ ಮತ್ತಷ್ಟು ಸಾಧನೆ ಮಾಡಲಿದೆ ಎಂದು ತಿಳಿಸಿದರು.
ಚೆನ್ನೈನಲ್ಲಿ ಮೊದಲ ಅಂಚೆ ಇಲಾಖೆ ಎಟಿಎಂ: ಭಾರತೀಯ ಅಂಚೆ ಇಲಾಖೆ 2014ರ ಫೆ.25 ರಂದು ತಮಿಳುನಾಡಿನ ತ್ಯಾಗರಾಜ ನಗರ (ಟಿ.ನಗರ್)ದಲ್ಲಿ ಮೊದಲ ಬಾರಿಗೆ ಎಟಿಎಂ ಕೇಂದ್ರ ತೆರೆಯುವ ಮೂಲಕ ಎಟಿಎಂ ಕ್ಷೇತ್ರಕ್ಕೆ ಹೆಜ್ಜೆಯಿರಿಸಿತು. ನ್ಯಾಷನಲ್ ಎಟಿಎಂ ಯೂನಿಟ್ ಭಾರತೀಯ ಅಂಚೆ ಇಲಾಖೆ ಎಟಿಎಂಗಳನ್ನು ನಿರ್ವಹಣೆ ಮಾಡಲಿದೆ. ಇದು ಉತ್ತಮ ತಾಂತ್ರಿಕ ನಿರ್ವಹಣೆಯ ತಂಡ ಹೊಂದಿದ್ದು ಗುಡ್ಡಗಾಡು ಪ್ರದೇಶಗಳಲ್ಲೂ ಎಟಿಎಂ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿವೆ ಎಂದು ಅಂಚೆ ಇಲಾಖೆ ಎಂಟಿಎಂ ನಿರ್ವಹಣೆ ಕೇಂದ್ರದ ಹಿರಿಯ ಅಧಿಕಾರಿ ರಾಜೇಂದ್ರಕುಮಾರ್ ತಿಳಿಸಿದ್ದಾರೆ.