ಟೊರೊಂಟೊ: ಕೆನಡಾದ ಒಂಟಾರಿಯೊ ಪ್ರಾಂತದ ಬ್ರಾಂಪ್ಟನ್ ನಗರದಲ್ಲಿ ಇತ್ತೀಚಿಗಷ್ಟೇ ಲೋಕಾರ್ಪಣೆ ಮಾಡಿದ್ದ “ಶ್ರೀ ಭಗವದ್ಗೀತಾ ಉದ್ಯಾನ’ವನ್ನು ಕಿಡಿಗೇಡಿಗಳು ವಿಧ್ವಂಸಗೊಳಿಸಿರುವುದನ್ನು ಕೆನಡಾದ ಭಾರತೀಯ ರಾಯಭಾರ ಕಚೇರಿ ತೀವ್ರವಾಗಿ ಖಂಡಿಸಿದೆ.
ಈ ಹೇಯ ಘಟನೆ ಪೀಲ್ ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಈ ಹಿಂದೆ ಟ್ರಾಯರ್ ಪಾರ್ಕ್ ಎಂದು ಕರೆಯುತ್ತಿದ್ದ ಉದ್ಯಾನವನಕ್ಕೆ ಸೆ.28ರಂದು “ಶ್ರೀ ಭಗವದ್ಗೀತಾ ಉದ್ಯಾನ’ ಎಂದು ಮರುನಾಮಕರಣಗೊಳಿಸಲಾಗಿತ್ತು.
ಅಂಥ ಘಟನೆ ನಡೆದಿಲ್ಲ: ಅಚ್ಚರಿಯ ವಿಚಾರವೆಂದರೆ, ಉದ್ಯಾನವನ್ನು ಧ್ವಂಸ ಮಾಡಲಾಗಿದೆ ಎಂದು ಖಚಿತಪಡಿಸಿದ್ದ ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಉಲ್ಟಾ ಹೊಡೆದಿದ್ದಾರೆ.
“ಭಗವದ್ಗೀತಾ ಪಾರ್ಕ್ ಅನ್ನು ಧ್ವಂಸ ಮಾಡಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಖಾಲಿ ಇರುವ ಬೋರ್ಡ್ ಅನ್ನು ಬಿಲ್ಡರ್ ಅವರೇ ತಾತ್ಕಾಲಿಕವಾಗಿ ಹಾಕಿದ್ದು ಎಂದು ಗೊತ್ತಾಗಿದೆ. ಅಲ್ಲಿ ಶೀಘ್ರವೇ ಭಗವದ್ಗೀತಾ ಪಾರ್ಕ್ ಎಂದು ಹೊಸ ಬೋರ್ಡ್ ಅನ್ನು ಶೀಘ್ರವೇ ಹಾಕಲಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.