ನವದೆಹಲಿ: ಇನ್ನು ಮುಂದೆ ದೇಶದಲ್ಲಿ ಕುಳಿತೇ ವಿದೇಶಿ ವಿವಿಗಳ ಪದವಿ ಪಡೆಯಲು ಸಾಧ್ಯ. ಅದಕ್ಕಾಗಿ ದೇಶದ ಶಿಕ್ಷಣ ಸಂಸ್ಥೆಗಳು ವಿದೇಶಿ ವಿವಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಜತೆಗೆ ಸಹಭಾಗಿತ್ವ ಹೊಂದಲು ಅವಕಾಶ ಕಲ್ಪಿಸಿ ಕೊಡಲು ಯುಜಿಸಿ ಮಂಗಳವಾರ ಹೊಸ ನಿಯಮಗಳನ್ನು ಪ್ರಕಟಿಸಿದೆ.
ಈ ಬಗ್ಗೆ ಮಾತನಾಡಿದ ಯುಜಿಸಿ ಅಧ್ಯಕ್ಷ ಪ್ರೊ.ಎಂ.ಜಗದೀಶ್ ಕುಮಾರ್, ಕ್ಯುಎಸ್ ಮತ್ತು ಟೈಮ್ಸ್ ಹೈಯರ್ ಎಜುಕೇಶ್ ರ್‍ಯಾಂಕಿಂಗ್‌ನಲ್ಲಿ 1 ಸಾವಿರದ ಒಳಗೆ ಇರುವ ವಿದೇಶಿ ವಿವಿ ಮತ್ತು ಶಿಕ್ಷಣ ಸಂಸ್ಥೆಗಳ ಜತೆಗೆ ಶೈಕ್ಷಣಿಕ ಸಹಭಾಗಿತ್ವ ಹೊಂದಲು ಅವಕಾಶ ಕಲ್ಪಿಸಲಾಗಿದೆ.
ಈ ಮೂಲಕ ದೇಶದ ಮತ್ತು ವಿದೇಶಿ ಶಿಕ್ಷಣ ಸಂಸ್ಥೆಯಿಂದ ಒಂದೇ ಬಾರಿಗೆ ಎರಡು ಪದವಿಗಳನ್ನು ಪಡೆಯಲು ಸಾಧ್ಯವಾಗಲಿದೆ.
ಇದನ್ನೂ ಓದಿ:ಪಕ್ಷ ಸಿದ್ದಾಂತ, ನಾಯಕತ್ವ ಇಲ್ಲದ ಕಾಂಗ್ರೆಸ್ ದೇಶವನ್ನೇ ಗೆಲ್ಲಲು ಹೊರಟಿದೆ : ಸಿಎಂ ವ್ಯಂಗ್ಯ
ನ್ಯಾಕ್‌ನಿಂದ ಮಾನ್ಯತೆ ಪಡೆದು 3.01 ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೆàಮ್‌ವರ್ಕ್ (ಎನ್‌ಐಆರ್‌ಎಫ್) ಶ್ರೇಯಾಂಕದಲ್ಲಿ ಮೊದಲ 100 ಸ್ಥಾನಗಳಲ್ಲಿರುವ ಮತ್ತು “ಅತ್ಯುತ್ಕೃಷ್ಟ ಶಿಕ್ಷಣ ಸಂಸ್ಥೆಗಳು’ ಎಂಬ ಮಾನ್ಯತೆ ಪಡೆದ ದೇಶದ ಶಿಕ್ಷಣ ಸಂಸ್ಥೆಗಳಿಗೆ ವಿದೇಶಿ ವಿವಿಗಳ ಜತೆಗೆ ಸಹಭಾಗಿತ್ವ ಹೊಂದಲು ಸಾಧ್ಯವಾಗಲಿದೆ.
ವಿದೇಶದಲ್ಲಿ ಕಲಿಯಲೂ ಅನುಮತಿ:
ಹೊಸ ನಿರ್ಧಾರದ ಅನ್ವಯ ವಿದೇಶಿ ವಿವಿ ಜತೆಗೆ ಸಹಭಾಗಿತ್ವ ಹೊಂದಿದ್ದಲ್ಲಿ ನಿಗದಿತ ಕೋರ್ಸ್‌ನ ಅವಧಿಯಲ್ಲಿ ಕೆಲ ಸಮಯ ಆ ವಿವಿಯ ಕ್ಯಾಂಪಸ್‌ನಲ್ಲಿ ಅಧ್ಯಯನಕ್ಕೆ ಅವಕಾಶ ಇದೆ. ವಿದೇಶಿ ವಿವಿಗಳಿಂದ ಶೇ.30ಕ್ಕಿಂತ ಹೆಚ್ಚು ಕ್ರೆಡಿಟ್‌ಗಳನ್ನು ಹೊಂದಿರಬೇಕು ಎಂದು ಯುಜಿಸಿ ಅಧ್ಯಕ್ಷರು ತಿಳಿಸಿದ್ದಾರೆ.
ಇದರಿಂದಾಗಿ ಇತರ ದೇಶಗಳ ಪ್ರಾಧ್ಯಾಪಕರು ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಬರಲೂ ಅವಕಾಶ ಸಿಗಲಿದೆ.