Advertisement

Waqf Notice: ಸಂಸತ್‌ ಜಂಟಿ ಸದನ ಸಮಿತಿ ನ. 6, 7ರಂದು ರಾಜ್ಯಕ್ಕೆ ಭೇಟಿ?

02:32 AM Nov 04, 2024 | Team Udayavani |

ಬೆಂಗಳೂರು: ರಾಜ್ಯದ ಹಲವೆಡೆ ವಕ್ಫ್ ನೋಟಿಸ್‌ ಸೃಷ್ಟಿಸಿರುವ ಆತಂಕದ ವಿಚಾರವೀಗ ಕೇಂದ್ರ ಸರಕಾರಕ್ಕೂ ತಲುಪಿದ್ದು, ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಜಗದಂಬಿಕಾ ಪಾಲ್‌ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಂಸತ್ತಿನ ಜಂಟಿ ಸದನ ಸಮಿತಿ (ಜೆಪಿಸಿ)ಯು ನ. 6 ಮತ್ತು 7ರಂದು ಕರ್ನಾಟಕಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ.

Advertisement

ಸಮಿತಿ ಸದಸ್ಯರೂ ಆಗಿರುವ ಸಂಸದ ತೇಜಸ್ವಿ ಸೂರ್ಯ ಅವರು ಜಗದಂಬಿಕಾ ಪಾಲ್‌ ಅವರಿಗೆ ಪತ್ರ ಬರೆದು, ರಾಜ್ಯದ ರೈತರ ಅಹವಾಲು ಸ್ವೀಕರಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಸಮ್ಮತಿಸಿರುವ ಸಮಿತಿ, ಬುಧವಾರ ಮತ್ತು ಗುರುವಾರ ವಿಜಯಪುರ ಹಾಗೂ ಬೆಂಗಳೂರು ನಗರಕ್ಕೆ ಭೇಟಿ ನೀಡಲಿದೆ.
ಬಸವಣ್ಣರ ಕಾಲದ ಮಂದಿರಕ್ಕೂ ನೋಟಿಸ್‌!

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ವಿಜಯಪುರದ 400ಕ್ಕೂ ಹೆಚ್ಚು ರೈತರಿಗೆ ವಕ್ಫ್ ನೋಟಿಸ್‌ ರವಾನೆಯಾಗಿದ್ದು, ಇದೀಗ ವಿಜಯಪುರಕ್ಕಷ್ಟೇ ಸೀಮಿತವಾಗದೆ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ಬಸವಣ್ಣನವರ ಕಾಲದ ಮಂದಿರಗಳಿಗೂ ವಕ್ಫ್ ನೋಟಿಸ್‌ ಕೊಟ್ಟಿದ್ದು, ಆಗಿನ್ನೂ ಇಸ್ಲಾಂ ಧರ್ಮವೇ ಹುಟ್ಟಿತ್ತೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ. ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಚಾರ ಸಂಸತ್ತಿನ ಮುಂದಿದೆ.

ಅಲ್ಲಿ ಚರ್ಚೆ ನಡೆದು, ಜಂಟಿ ಸದನ ಸಮಿತಿ ರಚನೆಯಾಗಿದೆ. ಆ ಸಮಿತಿ ವರದಿ ಇನ್ನೂ ಕೊಟ್ಟಿಲ್ಲ. ಅಷ್ಟರಲ್ಲಾಗಲೇ ಸಚಿವ ಜಮೀರ್‌ ಅವರು ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್ ಅದಾಲತ್‌ ನಡೆಸಿ, ನೋಟಿಸ್‌ಗಳನ್ನು ಜಾರಿಗೊಳಿಸುತ್ತಿದ್ದಾರೆ. ಈ ವಕ್ಫ್ ಅದಾಲತ್‌ನ್ನು ಯಾವ ಕಾನೂನಿನಡಿ ಮಾಡಲು ಅವಕಾಶವಿದೆ? ಕಂದಾಯ ಕಾನೂನಿನಲ್ಲಿ ಇದೆಯೇ? ವಕ್ಫ್ ಕಾಯ್ದೆಯಲ್ಲಿ ಇದೆಯೇ? ಇದಕ್ಕೆ ರಾಜ್ಯ ಸರ್ಕಾರವೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

ರೈತರ ಭೂಮಿ, ರೈತರ ಹಕ್ಕು: ಪ್ರಧಾನಿಗೂ ಪತ್ರ
ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತನಾಡಿ, ವಕ್ಫ್ ಮಂಡಳಿ ಎಂಬುದು ದೊಡ್ಡ ಅವ್ಯವಹಾರಗಳ ಕೂಪ. ಅನ್ವರ್‌ ಮಾಣಿಪ್ಪಾಡಿ ಅವರು ಈ ಬಗ್ಗೆ ತನಿಖೆ ನಡೆಸಿ, ವರದಿ ಕೊಟ್ಟಿದ್ದಾರೆ. ಅದರ ಪ್ರಕಾರ ವಕ್ಫ್ ಆಸ್ತಿಯ ಲೂಟಿ ನಡೆದಿದೆ. ಸಾಲದ್ದಕ್ಕೆ ಈಗ ಬಡವರ ಜಮೀನು ಲೂಟಿ ಮಾಡಲು ಹೊರಟಿದ್ದಾರೆ.

Advertisement

ಹೀಗಾಗಿ ಜಂಟಿ ಸದನ ಸಮಿತಿ ಅಧ್ಯಕ್ಷರಾದ ಜಗದಂಬಿಕಾ ಪಾಲ್‌ ಅವರಿಗೆ ಪತ್ರ ಬರೆದು ರೈತರ ಅಹವಾಲು ಆಲಿಸಿ, ನ್ಯಾಯ ಕೊಡಿ ಎಂದು ಮನವಿ ಮಾಡುತ್ತೇನೆ. ಇಲ್ಲದಿದ್ದರೆ, ರೈತರು, ಮಠ, ಮಂದಿರ ಕೂಡ ಉಳಿಯಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಕಾಂಗ್ರೆಸಿನವರು ದೆಹಲಿಗೆ ಹೋಗಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೇಳಿದ್ದರು. ಈಗ ಇದು ರೈತರ ಭೂಮಿ, ರೈತರ ಹಕ್ಕು (ನಮ್ಮ ಭೂಮಿ ನಮ್ಮ ಹಕ್ಕು). ಇದನ್ನೇ ಅಭಿಯಾನವಾಗಿ ರೂಪಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next