ಪ್ಯಾರಿಸ್: ಅರ್ಹತಾ ಸುತ್ತಿನ ಸ್ಪರ್ಧಿಗಳೆಲ್ಲ ಸೋಲುವುದರೊಂದಿಗೆ ಭಾರತಕ್ಕೆ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಕೂಟದ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತಿನ ಬಾಗಿಲು ಮುಚ್ಚಿದಂತಾಯಿತು.
ಕೊನೆಯ ಭರವಸೆಯಾಗಿದ್ದ ಸುಮಿತ್ ನಾಗಲ್ ಅರ್ಹತಾ ಸುತ್ತಿನ ದ್ವಿತೀಯ ಮುಖಾಮುಖೀಯಲ್ಲಿ ಚಿಲಿಯ ಅಲೆಜಾಂಡ್ರೊ ಟ್ಯಾಬಿಲೊ ವಿರುದ್ಧ 3-6, 3-6ರಿಂದ ಸೋತು ನಿರಾಸೆ ಮೂಡಿಸಿದರು. ಇದರೊಂದಿಗೆ ಸತತ 3ನೇ ಗ್ರ್ಯಾನ್‌ಸ್ಲಾಮ್ ಮುಖ್ಯ ಸುತ್ತು ಪ್ರವೇಶಿಸುವ ಸುಮಿತ್ ಯೋಜನೆ ವಿಫಲಗೊಂಡಿತು.
ಇದಕ್ಕೂ ಮುನ್ನ ಅಂಕಿತಾ ರೈನಾ, ರಾಮ್‌ಕುಮಾರ್ ರಾಮನಾಥನ್ ಮತ್ತು ಪ್ರಜ್ಞೆàಶ್ ಗುಣೇಶ್ವರನ್ ಕೂಡ ಅರ್ಹತಾ ಸುತ್ತಿನಲ್ಲಿ ಎಡವಿದ್ದರು. ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಆವೆಯಂಗಳದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬೇಕಿದೆ. ಇಲ್ಲಿ ಅವರಿಗೆ ರ್‍ಯಾಂಕಿಂಗ್ ಅಂಕಗಳ ಅಗತ್ಯ ಹೆಚ್ಚಿದೆ. ಜೂ. 10ಕ್ಕೆ ಅನ್ವಯಿಸುವ ರ್‍ಯಾಂಕಿಂಗ್ ಮಾನದಂಡದಂತೆ ಟೋಕಿಯೊ ಒಲಿಂಪಿಕ್ಸ್ ಶ್ರೇಯಾಂಕವನ್ನು ನಿರ್ಧರಿಸಲಾಗುವುದು.
ಅಂಕಿತಾ ಪರಾಭವ :
125ನೇ ರ್‍ಯಾಂಕಿಂಗ್‌ನ ಅಂಕಿತಾ ರೈನಾ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಗ್ರೀಟ್ ಮಿನ್ನೆನ್ ಅವರಿಗೆ 2-6, 0-6 ಅಂತರದಿಂದ ಶರಣಾದರು. ರಾಮ್‌ಕುಮಾರ್ ರಾಮನಾಥನ್ ಅವರನ್ನು ಉಜ್ಬೆಕಿಸ್ಥಾನದ ಡೆನ್ನಿಸ್ ಇಸ್ತೋಮಿನ್ 6-1, 6-2 ಅಂತರದಿಂದ ಪರಾಭವಗೊಳಿಸಿದರು.
ಮಾಧ್ಯಮಗಳಿಂದ ಒಸಾಕಾ ದೂರ : ವಿಶ್ವದ ನಂ.2 ಆಟಗಾರ್ತಿ ನವೋಮಿ ಒಸಾಕಾ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ವೇಳೆ ಮಾಧ್ಯಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ. ಇದರಿಂದ ತಾನು ಮಾನಸಿಕವಾಗಿ ನೆಮ್ಮದಿಯಿಂದ ಇರಬಲ್ಲೆ ಎಂಬುದು ಅವರ ಲೆಕ್ಕಾಚಾರ. ಟೆನಿಸ್ ಪಂದ್ಯಾವಳಿಗಳ ನಿಯಮದಂತೆ, ಪ್ರತಿಯೊಂದು ಪಂದ್ಯದ ಬಳಿಕ ಆಟಗಾರರು ಪ್ರಸ್ ಮೀಟ್‌ನಲ್ಲಿ ಪಾಲ್ಗೊಳ್ಳುವುದು ಕಡ್ಡಾಯ.