Advertisement

Indian art: ಪ್ರಯೋಗಗಳು ಕಲೆಯ ಸಾತ್ವಿಕತೆಗೆ ಧಕ್ಕೆ ತರಬಾರದು: ಡಾ| ವಸುಂಧರಾ

01:38 AM Aug 25, 2024 | Team Udayavani |

ಮೂಡುಬಿದಿರೆ ಮೂಲದ ಮೈಸೂರಿನಲ್ಲಿ ವಾಸವಿರುವ ಹಿರಿಯ ಭರತನಾಟ್ಯ ಕಲಾವಿದೆ ಡಾ| ವಸುಂಧರಾ ದೊರೆಸ್ವಾಮಿ. ತಮ್ಮ 75ನೇ ವಯಸ್ಸಿನಲ್ಲೂ ನೃತ್ಯ ಪ್ರದರ್ಶನ ನೀಡುತ್ತಿರುವ ಹಾಗೂ ವಿದೇಶದಲ್ಲಿ ಭಾರತೀಯ ಕಲೆಯ ಬೆಳವಣಿಗೆಗೆ ತನ್ನದೇ ಕೊಡುಗೆ ನೀಡುತ್ತಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ನೃತ್ಯ ಕ್ಷೇತ್ರದಲ್ಲಿನ ಬದಲಾವಣೆ, ರಿಯಾಲಿಟಿ ಶೋಗಳ ಪ್ರಭಾವ ಇತ್ಯಾದಿ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

Advertisement

* ಯಾವುದೇ ಕಲೆಯ ಅಂತಿಮ ಗುರಿಯೇನು?
ನಾನು ನಾಟ್ಯದ ನೆಲೆಯಲ್ಲಿ ಹೇಳಲು ಪ್ರಯತ್ನಿಸುತ್ತೇನೆ. ನಾಟ್ಯದ ಮೂಲಕ ಆತ್ಮ-ಪರಮಾತ್ಮನ ಮಿಲನವನ್ನು ಕಲಾವಿದ ತನ್ನೊಳಗೆ ಸಾಧ್ಯವಾಗಿಸಿಕೊಳ್ಳುವುದು. ದೈವಿಕ ಕಲೆಗಳು ಆತ್ಮ ಸಂತೋಷಕ್ಕಾಗಿ ಮಾಡಿದಾಗ ಸಿಗುವುದೇ ತೃಪ್ತಿ. ಕಲಾವಿದನ ಪ್ರದರ್ಶನದಲ್ಲಿ ಆ ಸಂತೃಪ್ತಿಯ ರಸ ಉತ್ಪತ್ತಿಯಾದಾಗಲೇ ಅದು ಪ್ರೇಕ್ಷಕರಲ್ಲಿಯೂ ಅನುರಣಿಸುವುದು. ಕಲಾವಿದ ಮೊದಲು ಆತ್ಮಾನಂದವನ್ನು ಅನುಭವಿಸಬೇಕು. ಬಳಿಕ ಪ್ರೇಕ್ಷಕರನ್ನು ಆ ನೆಲೆಗೆ ಕೊಂಡೊಯ್ಯಬೇಕು.

* ಕಲೆಯ ಪ್ರದರ್ಶನದಲ್ಲಿ ನಡೆಯುತ್ತಿರುವ ಪ್ರಯೋಗ ಕಸರತ್ತು ಎಂದೆನಿಸುತ್ತಿದೆಯೇ?
ಪ್ರತೀ ಕಲಾವಿದನಿಗೂ ಮನೋಧರ್ಮ ಮತ್ತು ಕ್ರಿಯಾಶೀಲತೆ ಇರುತ್ತದೆ. ಅದರ ಸೀಮಿತ ಪರಿಧಿಯೊಳಗೆ ಕಲೆಯ ಜತೆಗೆ ಯೋಗ, ಮಾರ್ಷಲ್‌ ಆರ್ಟ್‌ ಇತ್ಯಾದಿ ಸೇರಬಹುದು. ಅದು ಕಲೆಯ ಔಚಿತ್ಯಕ್ಕೆ ಪೂರಕವಾಗಿರಬೇಕು. ನಾನು ಯೋಗ ಬಲ್ಲೆ. ಹಾಗೆಂದು ಭರತನಾಟ್ಯ ಪ್ರದರ್ಶನದಲ್ಲಿ ಶೀರ್ಷಾಸನ ಮಾಡಿದರೆ ಸರ್ಕಸ್‌ ಎನಿಸಲಿದೆ. ಹಾಗಾಗಿ ಅದನ್ನು ಎಷ್ಟು ಮತ್ತು ಎಲ್ಲಿ ಬಳಸಬೇಕು ಎಂಬುದರ ಸ್ಪಷ್ಟ ಅರಿವಿರಬೇಕು. ರೇಖಾವಿನ್ಯಾಸ, ನಿಖರತೆ, ಸ್ಥಿರತೆ, ಉಸಿರಾಟದ ಪ್ರಕ್ರಿಯೆ ಇತ್ಯಾದಿಗೆ ಯೋಗ ಪೂರಕ. ಆದರೆ ಯೋಗ, ಮಾರ್ಷಲ್‌ ಆರ್ಟ್‌ ಇತ್ಯಾದಿಯೇ ಪ್ರಧಾನ ಸ್ಥಾನ ಪಡೆದರೆ ಕಲೆಯ ಸಾತ್ವಿಕತೆಗೆ ಧಕ್ಕೆಯಾಗಲಿದೆ. ಈ ಕಸರತ್ತಿನಲ್ಲಿ ಆತ್ಮಾನಂದ ಇರದು. ಕಲೆಯ ನೈಜತೆಯಿಂದ ಸಿಗುವ ಸಂತೃಪ್ತಿ, ಸಂತೋಷವೇ ಅನುಭೂತಿ.

ರಿಯಾಲಿಟಿ ಶೋಗಳು ಈ ಕಲೆಗಳ ಪರಂಪರೆಯ ಸಾಗುವಿಕೆಗೆ ತಡೆ ಆಗುತ್ತಿವೆಯೇ?
-ರಿಯಾಲಿಟಿ ಶೋಗಳಿಂದ ಕಲೆಯ ನಿಜವಾದ ಅಸ್ತಿತ್ವಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ. ಪ್ರಚಾರ ತತ್‌ಕ್ಷಣ ಸಿಗುತ್ತದೆ. ಆದರೆ ಷೋಡಶೋಪಚಾರಗಳಲ್ಲಿ ಒಂದಾಗಿರುವ ನೃತ್ಯ ದೇವ ಕಲೆಗಳಿಗೆ ಸಣ್ಣ ಮಕ್ಕಳನ್ನು ಬಳಸಿ, ಸಂಗೀತದೊಂದಿಗೆ ಏನೇನೋ ಸರ್ಕಸ್‌ ಮಾಡುವುದರಿಂದ ಮಗುವಿನಲ್ಲಿ ಕಲೆಯ ವಿಕಸನದ ಸಾಧ್ಯತೆಯೇ ಮುರುಟುತ್ತದೆ. ಕಲಿಕೆಯ ಕಠಿನ ತಪಸ್ಸೂ ಇರದು. ಕಲೆ ಪರಂಪರೆ ಉಳಿಸಲು ಸಾಧ್ಯವಾಗದು.

ಸ್ವಪ್ರಚಾರಕ್ಕೆ ಕಲಾವಿದ ಸಾಮಾಜಿಕ ಮಾಧ್ಯಮವನ್ನು ಅತಿಯಾಗಿ ಬಳಸುವುದು ಸೂಕ್ತವೇ?
ಪ್ರಚಾರ, ದುಡ್ಡಿಗಾಗಿ ಕಲೆ ಇರಬಾರದು. ಮನಃತೃಪ್ತಿಗೆ ಕಲೆ ಇರಬೇಕು. ಇದರಲ್ಲಿ ತ್ಯಾಗ, ಭಕ್ತಿ ಇರಬೇಕು. ವೈಯಕ್ತಿಕ ಪ್ರಚಾರ ಕಲೆಗಿಂತ ಮುನ್ನೆಲೆಗೆ ಬರಬಾರದು. ಕಲಾವಿದನೊಂದಿಗೆ ಕಲೆ ಇರಬೇಕು. ಪ್ರಚಾರವೂ ಬೇಕು, ಅದೇ ಎಲ್ಲವೂ ಅಲ್ಲ. ಕಲೆಗಳು ಶೋಗಳಿಗೆ ಸೀಮಿತವಾಗಬಾರದು.

Advertisement

ವಿದೇಶದಲ್ಲಿ ಭಾರತೀಯ ಕಲೆಗಳ ಕಲಿಕೆಗೆ ಆಸಕ್ತಿ ಹೇಗಿದೆ?
ವಿದೇಶದಲ್ಲಿರುವ ಭಾರತೀಯರಿಗೆ ತಮ್ಮ ಮಕ್ಕಳು ಕಲೆಯಲ್ಲಿ ಬೆಳೆಯಬೇಕು ಎಂಬ ಮಹದಾಸೆ ಇರುತ್ತದೆ. ಸಂಸ್ಕಾರದ ಜತೆಗೆ ಕಲೆಯನ್ನು ಶ್ರದ್ಧೆಯಿಂದ ಕಲಿಸುತ್ತಾರೆ. ನಮ್ಮಲ್ಲಿ ಬರೀ ಓದು ಮಾತ್ರ. ಕಲೆಯನ್ನು ಸಾಧಿಸಲು ಬಿಡುವುದಿಲ್ಲ. ಈ ಅಭ್ಯಾಸ ತಪ್ಪಬೇಕು.

ಮನೆ, ಶಾಲೆಯಲ್ಲಿ ಕಲೆಯ ಬೋಧನೆ ಆಗುತ್ತಿಲ್ಲ ಎಂದೆನಿಸುತ್ತಿದೆಯೇ?
-ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮನೆ ಮತ್ತು ಶಾಲೆಯಲ್ಲಿ ಮಕ್ಕಳಿಗೆ ನೃತ್ಯ ಅಥವಾ ಭಾರತೀಯ ಕಲಾ ಪ್ರಕಾರಗಳನ್ನು ಕಲಿಸುವುದು ಆಗಬೇಕು. ನಮ್ಮ ಸಂಸ್ಕೃತಿಯ ಅರಿವು ಮನೆ, ಶಾಲೆಯಿಂದ ಮಕ್ಕಳಿಗೆ ಸಿಗಬೇಕು. ಅದಾದರೆ ನಮ್ಮ ಕಲೆ, ಪರಂಪರೆ ಎಲ್ಲವೂ ಉಳಿದೀತು.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next