Advertisement

ಭಾರತ, ಭೂತಾನ್‌, ಚೀನ ಗಡಿ ಜಂಕ್ಷನ್‌ನಲ್ಲಿ ಫ‌ುಲ್‌ ಟೆನ್ಶನ್‌

03:30 AM Jun 30, 2017 | Team Udayavani |

ಬೀಜಿಂಗ್‌/ಹೊಸದಿಲ್ಲಿ: ಹೊಸ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚೀನ ಯೋಧರು ಹಾಗೂ ಭಾರತೀಯ ಯೋಧರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಭೂತಾನ್‌ನಿಂದ ಅಂದಾಜು 269 ಕಿಲೋಮೀಟರ್‌ ದೂರದಲ್ಲಿರುವ ಭಾರತ, ನೇಪಾಳ ಹಾಗೂ ಚೀನ ಗಡಿ ಸಂಗಮ ಪ್ರದೇಶ ಡಾಂಗ್‌ಲಾಂಗ್‌ (ಡೊಕ್ಲಾಮ್‌) ಸುತ್ತ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಿಗೇ ಚೀನ ಸೇನಾಪಡೆ ಈಗಾಗಲೇ ಯುದ್ಧಕ್ಕೆ ಸನ್ನದ್ಧ ಎನ್ನುವ ರೀತಿಯಲ್ಲಿ ಟಿಬೆಟ್‌ ವ್ಯಾಪ್ತಿಯಲ್ಲಿ ಯುದ್ಧ ಟ್ಯಾಂಕ್‌ಗಳ ಪರೀಕ್ಷೆ ನಡೆಸಿದೆ. 35 ಟನ್‌ ತೂಕದ ಟ್ಯಾಂಕ್‌ ಮೂಲಕ ಪರೀಕ್ಷೆ ನಡೆಸಿರುವ ಪಡೆ, ಯಾವುದೇ ಕ್ಷಣವನ್ನೂ ಎದುರಿಸಲು ಸಜ್ಜಾಗಿದೆ ಎಂದು ಪಿಎಲ್‌ಎ ವಕ್ತಾರ ಕೊಲ್‌ ಕ್ವಿಯಾನ್‌ ಹೇಳಿದ್ದಾರೆ.

Advertisement

ಇವೆಲ್ಲದರ ನಡುವೆ ಚುಂಬಿ ಕಣಿವೆ ವಿಚಾರವಾಗಿ ಡೊಕ್ಲಾಮ್‌ ಪ್ರದೇಶದಲ್ಲಿ ಘರ್ಷಣೆ ನಡೆದಿದೆ ಎಂದು ಭಾರತೀಯ ರಾಜ ತಾಂತ್ರಿಕ  ಮೂಲಗಳು ತಿಳಿಸಿವೆ. ಭೂತಾನ್‌ ಪಡೆಯನ್ನು ತರಬೇತುಗೊಳಿಸುವ ಭಾರತದ ಬ್ರಿಗೇಡ್‌ ಗಾತ್ರದ ಸೇನಾಪಡೆ, ಚೀನ ಪಡೆ ನಡುವೆ ಈ ಘರ್ಷಣೆ ನಡೆದಿದೆ ಎಂದು ಹೇಳಲಾಗಿದೆ.

ಸಿಕ್ಕಿಂಗೆ ಸೇನಾ ಮುಖ್ಯಸ್ಥ ರಾವತ್‌ ಭೇಟಿ
ಘಟನೆ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ಗುರುವಾರ ಸಿಕ್ಕಿಂಗೆ ಭೇಟಿ ನೀಡಿದ್ದು, ಮಾಹಿತಿ ಕಲೆಹಾಕಿದ್ದಾರೆ. ಗಡಿಯಲ್ಲಿನ ವಾಸ್ತವ ಪರಿಸ್ಥಿತಿ ತಿಳಿದುಕೊಂಡ ಬಳಿಕ ಮಾತನಾಡಿರುವ ಜನರಲ್‌ ರಾವತ್‌, ಚೀನ ಆರೋಪವನ್ನು ತಳ್ಳಿಹಾಕಿದ್ದಾರೆ. ಚೀನದ ಯಾವುದೇ ಸವಾಲಿಗೆ ಭಾರತ ಕೂಡ ಸಿದ್ಧವಿದೆ. ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಹಾಗೆಯೇ ಪಾಕಿಸ್ತಾನದ ಯಾವುದೇ ರೀತಿಯ ದಾಳಿಯನ್ನೂ ಎದುರಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದಿದ್ದಾರೆ ರಾವತ್‌. 

ಭೂತಾನ್‌ ಗಡಿ ನಿಯಮ ಉಲ್ಲಂಘಿಸಿಲ್ಲ: ಚೀನ
ಗಡಿ ನಿಯಮ ಉಲ್ಲಂಘಿಸಿ ಒಳಪ್ರವೇಶ ಮಾಡಿದೆ ಎಂದು ಭೂತಾನ್‌ ಮಾಡಿರುವ ಆರೋಪವನ್ನು ಚೀನ ನಿರಾಕರಿಸಿದೆ. ಅಲ್ಲದೆ, ನಮ್ಮ ಸೇನಾ ಪಡೆ ಚೀನದ ಗಡಿ ಪ್ರದೇಶದಲ್ಲಿಯೇ ಕಾರ್ಯಾಚರಣೆ ನಡೆಸಿದೆ ಎಂದು ಹೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನ ರಕ್ಷಣಾ ಸಚಿವಾಲಯ, ‘ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಭಾರತಕ್ಕೆ ಸಂದೇಶ ರವಾನಿಸಿದ್ದಲ್ಲದೆ, ಚೀನ ಪಡೆ ತನ್ನ ವ್ಯಾಪ್ತಿಯಲ್ಲಿಯೇ ಕಾರ್ಯಾಚರಿಸಿದೆ. ಭೂತಾನ್‌ ಆರೋಪ ಆಧಾರ ರಹಿತ’ ಎಂದು ಹೇಳಿದೆ. ಸಿಕ್ಕಿಂ ಸೆಕ್ಟರ್‌ನಲ್ಲಿ ನಡೆದ ಒಳಪ್ರವೇಶ ಘಟನೆಯಲ್ಲಿಯೂ ಚೀನ, ತಾನೇ ಒಳ ಪ್ರವೇಶಿಸಿ ಬಳಿಕ ಭಾರತೀಯ ಯೋಧರೇ ಒಳಪ್ರವೇಶಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿತ್ತು.

ಭಾರತವು ಯುದ್ಧಕ್ಕೆ ಸಿದ್ಧವಾಗಿದೆ ಎಂಬ ಸೇನಾ ಮುಖ್ಯಸ್ಥ ರಾವತ್‌ ಅವರ ಹೇಳಿಕೆ ಸಂಪೂರ್ಣ ಬೇಜವಾಬ್ದಾರಿತನದಿಂದ ಕೂಡಿದೆ. ಅವರು ಮೊದಲು ಯುದ್ಧದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಇತಿಹಾಸದಲ್ಲಿ ಕಲಿತ ಪಾಠವನ್ನು ಒಮ್ಮೆ ನೆನಪಿಸಿಕೊಳ್ಳಲಿ.
– ಕ. ವು ಖೀಯಾನ್‌, ಚೀನ ಸೇನೆ ವಕ್ತಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next