ಮಂಗಳೂರು/ಉಡುಪಿ: ಮೊದಲ ಭಾರತೀಯ ಅಮೆರಿಕನ್ ಮೆಥೋಡಿಸ್ಟ್ ಬಿಷಪ್, ಮೂಲತಃ ಮೂಲ್ಕಿಯವರಾದ ಸುದರ್ಶನ್ ದೇವಧರ್ (72) ಅವರು ಜು. 19ರಂದು ಅಮೆರಿಕದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. 2004ರಲ್ಲಿ ಈಶಾನ್ಯ ಪ್ರಾಂತೀಯ ಪರಿಷತ್ತಿನ ಬಿಷಪ್ ಹುದ್ದೆಗೆ ಆಯ್ಕೆಯಾಗಿ ಅಮೆರಿಕದ ಯುನೈಟೆಡ್ ಮೆಥೋಡಿಸ್ಟ್ ಚರ್ಚ್‌ನ ಬಿಷಪ್ ಆಗಿದ್ದ ಮೊಟ್ಟಮೊದಲ ಭಾರತೀಯ ಅಮೆರಿಕನ್ ಆಗಿದ್ದು, 2023ರ ಜ. 1ರಂದು ನಿವೃತ್ತರಾಗಿದ್ದರು.
ಬಿಷಪ್ ದೇವಧರ್ ಅವರು ಬೋಸ್ಟನ್ ಪ್ರದೇಶದ ರೆಸಿಡೆಂಟ್ ಬಿಷಪ್ ಆಗಿದ್ದರು. 1982ರಲ್ಲಿ ಸಭಾಪಾಲಕರಾಗಿ ಸೇವೆ ಆರಂಭಿಸಿ 8 ವರ್ಷಗಳ ಕಾಲ ಓಂಟಾರಿಯೊ ಜಿಲ್ಲೆ ಮತ್ತು ನ್ಯೂಯಾರ್ಕ್‌ನ ಉತ್ತರಕೇಂದ್ರ ಜಿಲ್ಲೆಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದರು.
ಬಿಷಪರಾಗಿ ಅವರು ನ್ಯೂಜೆರ್ಸಿ ಎಪಿಸ್ಕೋಪಲ್ ಪ್ರದೇಶದ ಜವಾಬ್ದಾರಿಯನ್ನು 8 ವರ್ಷಗಳ ಕಾಲ ಯಶಸ್ವಿಯಾಗಿ ನಿರ್ವಹಿಸಿದ ಅನಂತರ 2012ರಲ್ಲಿ ಬೋಸ್ಟನ್ ಪ್ರಾಂತದ ಜವಾಬ್ದಾರಿಯನ್ನು ಹೊಂದಿದರು. 1951ರ ಎ. 1ರಂದು ಜನಿಸಿದ್ದ ಅವರು ಡೀಕನ್‌ರಾಗಿ ದಕ್ಷಿಣಭಾರತ ಐಕ್ಯಸಭೆಯ ದೀಕ್ಷೆ ಪಡೆದು ಮೊತ್ತಮೊದಲು ಕೊಡಗಿನ ಮಡಿಕೇರಿಯಲ್ಲಿ ಸೇವೆಸಲ್ಲಿಸಿದರು.
ಸಭಾಪಾಲಕರ ಕುಟುಂಬದಲ್ಲಿ ಜನಿಸಿದ ಅವರು ಮೂಲ್ಕಿಯ ವಿಜಯ ಕಾಲೇಜಿನಿಂದ ಮೈಸೂರು ವಿಶ್ವವಿದ್ಯಾನಿಲಯದಡಿಯಲ್ಲಿ ಬಿ.ಕಾಂ. ಪದವಿ ಗಳಿಸಿ ಅನಂತರ ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಿಂದ ಬ್ಯಾಚುಲರ್ ಆಫ್ ಡಿವಿನಿಟಿ ಪದವಿಯನ್ನು ಪಡೆದರು. ಎಂ.ಟೆಕ್ ಪದವಿಯನ್ನು ಪರ್ಕಿನ್ಸ್ ಸ್ಕೂಲ್ ಆಫ್ ಥಿಯಾಲಜಿಯಿಂದ ದಕ್ಷಿಣ ಮೆಥೋಡಿಸ್ಟ್ ವಿಶ್ವವಿದ್ಯಾಲಯದಡಿಯಲ್ಲಿ, ಎಂ.ಫಿಲ್. ಮತ್ತು ಪಿಎಚ್.ಡಿ.ಯನ್ನು ಡ್ರೂ ಯುನಿವರ್ಸಿಟಿ ನ್ಯೂ ಜೆರ್ಸಿಯಿಂದ ಪಡೆದಿದ್ದರು.
ನ್ಯೂಜೆರ್ಸಿಯಲ್ಲಿರುವ ಡ್ರೂé ವಿಶ್ವವಿದ್ಯಾಲಯ, ಸೆಂಟಿನೆರಿ ಕಾಲೇಜು ಮತ್ತು ಪೆನ್ನಿಂಗ್ಟನ್ ಶಾಲೆಯ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಫಿಲಡೆಲ್ಫಿಯಾದ ಲುಥೆರನ್ ಥಿಯೋಲಾಜಿಕಲ್ ಸೆಮಿನೆರಿ, ಮಂಗಳೂರಿನ ಬಲ್ಮಠದಲ್ಲಿರುವ ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಮತ್ತು ಇತರ ಸಂಸ್ಥೆಗಳಲ್ಲಿ ಕೋರ್ಸ್‌ಗಳನ್ನು ಕಲಿಸಿದ್ದಾರೆ ಮತ್ತು ವೆಸ್ಟ್ ಪಾಯಿಂಟ್‌ನಲ್ಲಿರುವ ಯುಎಸ್ ಮಿಲಿಟರಿ ಅಕಾಡೆಮಿ ಮತ್ತು ಆಕ್ಸ್‌ಫರ್ಡ್ ಇನ್‌ಸ್ಟಿಟ್ಯೂಟ್‌ನಲ್ಲಿ ಧಾರ್ಮಿಕ ವಿಷಯಗಳ ಕುರಿತು ಉಪನ್ಯಾಸ ನೀಡಿದ್ದಾರೆ.