Advertisement

ಐಎಎಫ್ ಗೆ ಸಿಗಲಿದೆ ಬಾಂಬ್‌ ನಿಷ್ಕ್ರಿಯ ರೋಬೋಟ್‌ ವ್ಯವಸ್ಥೆ

10:01 AM Feb 09, 2020 | Hari Prasad |

ಲಕ್ನೋ: ಬಾಲಕೋಟ್‌ ದಾಳಿ ಬಳಿಕ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು ಹೊಸ ರೀತಿಯ ರೋಬೋಟಿಕ್‌ ವ್ಯವಸ್ಥೆಯನ್ನು ಭಾರತೀಯ ವಾಯುಪಡೆ ಹೊಂದಲಿದೆ. ಸುಮಾರು 1 ಸಾವಿರ ಕೆಜಿ ತೂಕದ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಈ ರೊಬೋಟ್‌ಗಿರಲಿದೆ.

Advertisement

ಲಕ್ನೋದಲ್ಲಿ ನಡೆದ ಡಿಫೆನ್ಸ್‌ ಎಕ್ಸ್‌ಪೋದಲ್ಲಿ ಅದನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಈ ರೋಬೋಟ್‌ಗೆ ಯುಕ್ಸರ್‌ (ಅನ್‌ ಎಕ್ಸ್‌ ಪ್ಲೋಡೆಡ್‌ ಆರ್ಡಿನೆನ್ಸ್‌ ಹ್ಯಾಂಡ್ಲಿಂಗ್‌ ರೋಬೋಟ್‌) ಎಂದು ಹೆಸರು. ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅದನ್ನು ವಿನ್ಯಾಸಗೊಳಿಸಿ, ಸಿದ್ಧಗೊಳಿಸಿದೆ.

ಹಲವು ರೀತಿಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಅದನ್ನು ಐಎಎಫ್ ಸೇವೆಗೆ ಸೇರ್ಪಡೆ ಮಾಡಿ ಕೊಳ್ಳಲಿದೆ. ಬಾಂಬ್‌ ನಿಷ್ಕ್ರಿಯಗೊಳಿಸಲು ಮಾನವರ ಬದಲಿಗೆ ರೋಬೋಟ್‌ಗಳನ್ನು ನಿಯೋಜಿಸಲಾಗುತ್ತದೆ. ಅವುಗಳನ್ನು ಸಂಚಾರಿ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ ಮತ್ತು 2 ಕಿ.ಮೀ. ದೂರದಿಂದಲೇ ನಿಯಂತ್ರಿಸಲು ಸಾಧ್ಯವಿದೆ ಎಂದು ಡಿಆರ್‌ಡಿಒ ವಿಜ್ಞಾನಿ ಅಲೋಕ್‌ ಮುಖರ್ಜಿ ಹೇಳಿದ್ದಾರೆ.

200 ಒಪ್ಪಂದಗಳಿಗೆ ಅಂಕಿತ: ಡಿಫೆನ್ಸ್‌ ಎಕ್ಸ್‌ ಪೋದಲ್ಲಿ 200ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ. 2024ರ ಒಳಗಾಗಿ ದೇಶದಿಂದ 5 ಬಿಲಿಯನ್‌ ಡಾಲರ್‌ ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.

ಆರಂಭದಲ್ಲಿ 100 ಒಪ್ಪಂದಗಳಿಗೆ ಸಹಿ ಹಾಕುವ ಗುರಿ ಹಾಕಿಕೊಳ್ಳಲಾಗಿತ್ತು. ಅಂತಿಮವಾಗಿ ಅದು, 200ಕ್ಕೆ ತಲುಪಿತು ಎಂದು ರಕ್ಷಣಾ ಕಾರ್ಯದರ್ಶಿ ಅಜಯ ಕುಮಾರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next