Advertisement

ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಫೈಟರ್‌ ಜೆಟ್‌ ರೋಮಾಂಚನ

11:47 AM Oct 24, 2017 | Team Udayavani |

ಹೊಸದಿಲ್ಲಿ : ಭಾರತೀಯ ವಾಯು ಪಡೆ ಇಂದು ಮಂಗಳವಾರ ಸೂಪರ್‌ ಹರ್‌ಕ್ಯುಲಸ್‌ ಸಿ-130 ಸಾರಿಗೆ ವಿಮಾನ ಮತ್ತು ಇತರ ಹಲವು ಬಗೆಯ ಯುದ್ಧ ವಿಮಾನಗಳನ್ನು ಲಕ್ನೋ -ಆಗ್ರಾ ಎಕ್ಸ್‌ಪ್ರೆಸ್‌ ವೇಯಲ್ಲಿ ಇಳಿಸುವ ತಾಲೀಮನ್ನು ಆರಂಭಿಸಿದ್ದು ವೀಕ್ಷಕರಲ್ಲಿ  ಭಾರೀ ರೋಮಾಂಚನ ಉಂಟು ಮಾಡಿದೆ.

Advertisement

ಪ್ರಾಕೃತಿಕ ವಿಕೋಪ, ಮಾನವೀಯ ನೆರವು ಮತ್ತು ಯುದ್ಧದ ಸನ್ನಿವೇಶ ಉಂಟಾದ ಸಂದರ್ಭದಲ್ಲಿ ಫೈಟರ್‌ ಜೆಟ್‌ಗಳನ್ನು ತುರ್ತಾಗಿ ಇಳಿಸುವ ಮತ್ತು ಅವುಗಳ ಕಾರ್ಯ ಸನ್ನದ್ಧತೆಯನ್ನು ಪರೀಕ್ಷಿಸುವ ಸಲುವಾಗಿ ಈ ಕವಾಯತುಗಳನ್ನು ಭಾರತೀಯ ವಾಯು ಪಡೆ ನಡೆಸುತ್ತಿದೆ. 

ಈ ಕವಾಯತಿನ ಅಂಗವಾಗಿ ಇಂದು ಮೊದಲ ಅವತರಣವನ್ನು ಸಿ130 ವಿಮಾನ  ಗಾರ್ಡ್‌ ಕಮಾಂಡೋಗಳೊಂದಿಗೆ ಯಶಸ್ವಿಯಾಗಿ ಕೈಗೊಂಡಿತು. ಆ ಬಳಿಕ ಹಲವು ಮಿರಾಜ್‌ ಮತ್ತು ಸುಖೋಯಿ ಫೈಟರ್‌ ಜೆಟ್‌ಗಳು ಕೆಳ ಮಟ್ಟದಲ್ಲಿ ಹಾರಾಟ ನಡೆಸಿ ಭೂ ಸ್ಪರ್ಶ ಮಾಡಿದವು. 

ಇವುಗಳ ಬಳಿಕ ಜಾಗ್ವಾರ್‌ ಫೈಟರ್‌ ಜೆಟ್‌ಗಳು ಇದೀಗ ಹಾರಾಟ ಮತ್ತು ಅವತರಣಕ್ಕೆ ಸಿದ್ಧವಾಗಿ ತಮ್ಮ ಸರದಿಗಾಗಿ ಕಾಯುತ್ತಿರುವುದಾಗಿ ಮೂಲಗಳು ತಿಳಿಸಿವೆ. 

ಭಾರತೀಯ ವಾಯು ಪಡೆ ತನ್ನ ಯಾವುದೇ ಜೆಟ್‌ಗಳು ನಿಶ್ಚಲವಾಗಿ ನಿಂತಿರುವುದನ್ನು ಬಯಸುವುದಿಲ್ಲ; ತಳಮಟ್ಟದಲ್ಲಿ ಹಾರಾಟ ನಡೆಸುವ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಭೂ ಸ್ಪರ್ಶ ಮಾಡುವ ಅವುಗಳ ಕಾರ್ಯ ಕ್ಷಮತೆ ಮತ್ತು ಸನ್ನದ್ಧತೆಯನ್ನು ಪರೀಕ್ಷಿಸುವುದೇ ಈ ಕವಾಯತಿನ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಚೀನ ಮತ್ತು ಪಾಕಿಸ್ಥಾನ ದೇಶಗಳು ಭಾರತದ ಮೇಲೆ ಏಕ ಕಾಲದಲ್ಲಿ ಯುದ್ಧಕ್ಕೆ ತೊಡಗಿದ ಸಂದರ್ಭದಲ್ಲಿ ಎರಡೂ ಗಡಿಗಳಲ್ಲಿ ಪರಿಣಾಮಕಾರಿ ಪ್ರತಿ ಸಮರಕ್ಕೆ ತೊಡಗುವ ಕ್ಷಮತೆ ಮತ್ತು ಸನ್ನದ್ಧತೆಯನ್ನು ಪರೀಕ್ಷಿಸುವುದು ಕೂಡ ಕವಾಯತಿನ ಉದ್ದೇಶವೆಂದು ಮೂಲಗಳು ಹೇಳಿವೆ. 

ವಾಯು ಪಡೆಯು ಈ ಕವಾಯತನ್ನು ಉತ್ತರ ಪ್ರದೇಶ ಸರಕಾರದ ಸಹಯೋಗದೊಂದಿಗೆ ಉನ್ನಾವೋ ದಲ್ಲಿನ ಬಾಂಗರ್‌ಮಾವೂ ಸಮೀಪದಲ್ಲಿ ನಡೆಸುತ್ತಿದೆ. ಲಕ್ನೋ – ಆಗ್ರಾ ಎಕ್ಸ್‌ಪ್ರೆಸ್‌ವೇಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಉದ್ಘಾಟಿಸಲಾಗಿತ್ತು. 

ಪ್ರಾಕೃತಿಕ ವಿಕೋಪ, ರಾಷ್ಟ್ರೀಯ ಭದ್ರತೆಯೇ ಮೊದಲಾದ ವಿಷಮ ಹಾಗೂ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ತಳಮಟ್ಟದ ಹಾರಾಟ ಮತ್ತು ಭೂಸ್ಪರ್ಶ ಕ್ಷಮತೆಯನ್ನು ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷಿಸುವುದು ಈ ಕವಾಯತಿನ ಮುಖ್ಯ ಉದ್ದೇಶವಾಗಿದೆ ಎಂದು ವಾಯುಪಡೆ ಮೂಲಗಳು ಹೇಳಿವೆ. 

ರಸ್ತೆ ಮತ್ತು ಸಾರಿಗೆ ಸಚಿವಾಲಯದ ಅಧಿಕಾರಿಗಳು ಹೇಳುವ ಪ್ರಕಾರ ದೇಶದಲ್ಲಿ 12 ಹೈವೇಗಳನ್ನು ಈ ರೀತಿಯ ಉದ್ದೇಶಗಳಿಗೆ ಬಳಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಇವುಗಳಲ್ಲಿ ಮೂರು ಹೈವೇಗಳು ಒಡಿಶಾ, ಜಾರ್ಖಂಡ್‌ ಮತ್ತು ಛತ್ತೀಸ್‌ಗಢದ ಮಾವೋ ಉಗ್ರ-ಬಾಧಿತ ಪ್ರದೇಶಗಳನ್ನು ಸಂಪರ್ಕಿಸುತ್ತವೆ. ಈ ಪ್ರದೇಶಗಳು ಪ್ರತೀ ವರ್ಷ ಪ್ರವಾಹ, ಚಂಡಮಾರುತದ ಪ್ರಕೋಪಕ್ಕೆ ಗುರಿಯಾಗುವುದು ಸಾಮಾನ್ಯವಾಗಿದೆ.   

Advertisement

Udayavani is now on Telegram. Click here to join our channel and stay updated with the latest news.

Next