Advertisement
1932ರ ಅ.8ರಂದು ಭಾರತೀಯ ವಾಯುಸೇನೆ ಎಂಬ ಹೆಸರಿನಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ರಾಯಲ್ ಏರ್ ಫೋರ್ಸ್‌ನ ಸಹಾಯಕ ಪಡೆಯಾಗಿ ಮೊದಲ ಬಾರಿಗೆ ಕಾರ್ಯಾಚರಣೆಗೆ ಇಳಿಯಿತು. ಅಂದಿನಿಂದ ಅ.8 ರಂದು ವಾಯುಸೇನೆ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಎರಡನೇ ವಿಶ್ವ ಮಹಾಯುದ್ಧದ ಅನಂತರ ಈ ಪಡೆಗೆ ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂಬ ಹೆಸರು ಪಡೆದುಕೊಂಡಿತು.
Advertisement
1971ರ ಪಾಕಿಸ್ಥಾನದ ವಿರುದ್ಧದಲ್ಲಿ ಭಾರತ ಗೆದ್ದು ಈಗ 50 ವರ್ಷಗಳಾಗುತ್ತಿವೆ. ಹೀಗಾಗಿ ವಾಯುಸೇನೆ ದಿನದಂದು ಈ ಸಂಭ್ರಮಾಚರಣೆಯನ್ನೂ ನಡೆಸಲು ನಿರ್ಧರಿಸಲಾಗಿದೆ. ಸ್ವರ್ಣಿಮ್ ವಿಜಯ್ ವರ್ಷ್ ಎಂಬ ಹೆಸರಿನಲ್ಲಿ ಈ ಆಚರಣೆ ನಡೆಯಲಿದೆ. ಅಲ್ಲದೆ ಈ ದಿನ ಈ ವರ್ಷವಷ್ಟೇ ವಾಯುಸೇನೆಗೆ ಸೇರ್ಪಡೆಯಾಗಿರುವ ರಫೇಲ್, ಸುಕೋಯ್-30ಎಂಕೆಐ, ಎಲ್‌ಸಿಎ ತೇಜಸ್, ಮಿರಾಜ್ 2000, ಮಿಗ್ 29 ಮತ್ತು ಜಾಗ್ವಾರ್ ಯುದ್ಧ ವಿಮಾನಗಳ ಪ್ರದರ್ಶನವೂ ನಡೆಯಲಿದೆ.
ಪ್ರಮುಖ ಯುದ್ಧ ವಿಮಾನಗಳು
ಮಿರಾಜ್ 2000 : ವಾಯುಸೇನೆಯ ಪ್ರಮುಖ ಯುದ್ಧ ವಿಮಾನವಿದು. ಫ್ರಾನ್ಸ್‌ನ ಈ ಯುದ್ಧ ವಿಮಾನಗಳು 1984ರಲ್ಲಿ ವಾಯುಪಡೆಗೆ ಸೇರ್ಪಡೆಗೊಂಡವು. ಕಾರ್ಗಿಲ್ ಯುದ್ಧದಲ್ಲೂ ಪ್ರಮುಖ ಪಾತ್ರ ವಹಿಸಿದ್ದವು. ಸದ್ಯ ಭಾರತದ ಬತ್ತಳಿಕೆಯಲ್ಲಿ 50 ಮಿರಾಜ್ 2000 ಯುದ್ಧ ವಿಮಾನಗಳಿವೆ.
ರಫೇಲ್ : ಫ್ರಾನ್ಸ್‌ನ ಈ ಯುದ್ಧ ವಿಮಾನಗಳ ಖರೀದಿಗಾಗಿ 2016ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಹಲವಾರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಇವುಗಳನ್ನು ಪಂಜಾಬ್‌ನ ಅಂಬಾಲ ವಾಯುನೆಲೆಯಲ್ಲಿ ಇಡಲಾಗಿದೆ. ಇಲ್ಲಿಂದ ಪಾಕಿಸ್ಥಾನದ ಗಡಿ 220 ಕಿ.ಮೀ. ದೂರವಿದೆ.
ಎಚ್‌ಎಎಲ್ ತೇಜಸ್ ಲಘು ಯುದ್ಧ ವಿಮಾನ: ಆರಂಭದಲ್ಲಿ ಭಾರತವು, ರಷ್ಯಾ, ಫ್ರಾನ್ಸ್ ಮತ್ತು ಬ್ರಿಟನ್‌ನ ತಂತ್ರಜ್ಞಾನವನ್ನು ಪಡೆದು ಎಚ್‌ಎಎಲ್‌ನಲ್ಲಿ ಉತ್ಪಾದನೆ ಮಾಡುತ್ತಿತ್ತು. ಆದರೆ 1980ರ ಅನಂತರ ಸ್ಥಳೀಯವಾಗಿಯೇ ಯುದ್ಧ ವಿಮಾನಗಳನ್ನು ಉತ್ಪಾದನೆ ಆರಂಭಿಸಿ, ಇದಕ್ಕೆ ತೇಜಸ್ ಎಂದು ಹೆಸರಿಡಲಾಯಿತು. ಈಗಾಗಲೇ ಹಲವಾರು ತೇಜಸ್ ಯುದ್ಧ ವಿಮಾನಗಳಿಗೆ ವಾಯುಸೇನೆ ಆರ್ಡರ್ ಕೊಟ್ಟಿದೆ.
ಮಿಕೋಯನ್ ಮಿಗ್ 21: ವೈಮಾನಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಸೂಪರ್ ಸಾನಿಕ್ ಯುದ್ಧ ವಿಮಾನ ಎಂದು ಕರೆಸಿಕೊಂಡ ಕೀರ್ತಿ ಇದಕ್ಕೆ ಸಲ್ಲುತ್ತದೆ. ಕಳೆದ 60 ವರ್ಷಗಳಲ್ಲಿ 60 ದೇಶಗಳು ಈ ವಿಮಾನವನ್ನು ಹೊಂದಿವೆ. 1971ರ ಪಾಕಿಸ್ಥಾನ ವಿರುದ್ಧ ಯುದ್ಧದಲ್ಲೂ ಇದು ಪ್ರಮುಖ ಪಾತ್ರ ವಹಿಸಿತ್ತು.
ಸುಖೋಯ್ ಸು-30ಎಂಕೆಐ : ಭಾರತದ ವಾಯುಪಡೆಯಲ್ಲಿ ಅತ್ಯಾಧುನಿಕ ಶಕ್ತಿ ಹೊಂದಿರುವ ಇದು, ಆಗಸದಲ್ಲೇ ಶತ್ರು ವಿಮಾನಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ರಷ್ಯಾದ ಉತ್ಪಾದನ ಪರವಾನಿಗೆಯೊಂದಿಗೆ ಎಚ್‌ಎಎಲ್‌ನಲ್ಲಿ ಉತ್ಪಾದಿಸಲಾಗುತ್ತಿದೆ.
ಸೆಪೆಕ್ಯಾಟ್ ಜಾಗ್ವಾರ್ : ಬ್ರಿಟಿಷ್ ರಾಯಲ್ ಏರ್ ಫೋರ್ಸ್ ಮತ್ತು ಫ್ರಾನ್ಸ್ ಏರ್ ಫೋರ್ಸ್ ಜತೆಯಾಗಿ ಅಭಿವೃದ್ಧಿ ಪಡಿಸಿರುವ ಇದು, ಭಾರತದ ಏರ್‌ಫೋರ್ಸ್ ಬಳಿ ಇರುವಂಥ ಯುದ್ಧ ವಿಮಾನ. ಆಗಸದಿಂದ ನೆಲದ ಮೇಲೆ ಟಾರ್ಗೆಟ್ ಮಾಡಿ ದಾಳಿ ಮಾಡಬಹುದು.
ವಾಯು ಸೇನೆ ಕುರಿತ ಆಸಕ್ತಿಕರ ಅಂಶಗಳು
ಇಡೀ ಜಗತ್ತಿನಲ್ಲೇ 4ನೇ ಅತೀ ದೊಡ್ಡ ವಾಯುಸೇನೆ ಎಂಬ ಹೆಗ್ಗಳಿಕೆ. ಅಮೆರಿಕ, ಚೀನ ಮತ್ತು ರಷ್ಯಾ ದೇಶಗಳು ಮೊದಲ ಮೂರು ಸ್ಥಾನದಲ್ಲಿವೆ.
“ನಭಂ ಸ್ಪರ್ಶಂ ದೀಪ್ತಮ್’ ಎಂಬುದು ಭಾರತೀಯ ವಾಯುಸೇನೆಯ ಗುರಿ.
ಭಾರತದ ವಾಯುಸೇನೆಯಲ್ಲಿ 1,400 ಯುದ್ಧ ವಿಮಾನಗಳು ಮತ್ತು 1,70,000 ಸಿಬಂದಿ ಇದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುನೆಲೆಯು ಏಷ್ಯಾದಲ್ಲೇ ಅತೀ ವಿಸ್ತಾರವಾದದ್ದು. ಜಗತ್ತಿನಲ್ಲಿ ಇದಕ್ಕೆ 8ನೇ ಸ್ಥಾನವಿದೆ. ಇಲ್ಲೇ ಪ್ರತೀ ವರ್ಷ ವಾಯುಸೇನೆಯ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಯುದ್ಧವಿಮಾನಗಳನ್ನು ಇಲ್ಲೇ ಪ್ರದರ್ಶಿಸಲಾಗುತ್ತದೆ.
ಗುಜರಾತ್ ಚಂಡಮಾರುತ (1998), ಸುನಾಮಿ(2004) ಉತ್ತರ ಭಾರತದಲ್ಲಿನ ವಿವಿಧ ಪ್ರವಾಹಗಳು, ಕೇರಳದ ಪ್ರವಾಹ ಸೇರಿದಂತೆ ವಿವಿಧ ಪ್ರಾಕೃತಿಕ ವಿಕೋಪಗಳಲ್ಲಿ ಜನರಿಗೆ ಸಹಾಯ ಮಾಡಿದೆ. ಹಾಗೆಯೇ, ಉತ್ತರಾಖಂಡ ಪ್ರವಾಹದ ವೇಳೆ 20 ಸಾವಿರ ಜನರನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸ್ಥಳಾಂತರಿಸಿತ್ತು.
ಆಪರೇಶನ್ ಪೂಮಲಾಯಿ, ಆಪರೇಶನ್ ವಿಜಯ್, ಆಪರೇಶನ್ ಮೇಘದೂತ್ ಪ್ರಮುಖ ಕಾರ್ಯಾಚರಣೆಗಳು.