Advertisement

ಇಂದು ಭಾರತೀಯ ವಾಯುಪಡೆ ದಿನ: ಐಎಎಫ್ ಜಗತ್ತಿನ ಬಲಿಷ್ಠ ವಾಯುಪಡೆ

11:55 AM Oct 08, 2020 | keerthan |

ಮಣಿಪಾಲ: ನಮ್ಮ ದೇಶದ ಮೂರು ರಕ್ಷಣ ಪಡೆಗಳಾದ  ಭೂ ಸೇನೆ, ನೌಕಾ ಪಡೆ ಮತ್ತು ವಾಯು ಸೇನೆ ದೇಶ ರಕ್ಷಣೆಯ  ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿವೆ. ಶತ್ರು ರಾಷ್ಟ್ರಗಳು ದೇಶದ ಮೇಲೆ ಆಕ್ರಮಣ ನಡೆಸಿದಾಗಲೆಲ್ಲ ಅವನ್ನು ಹಿಮ್ಮೆಟ್ಟಿಸಿ ದೇಶದ ನೆಲ-ಜಲ-ವಾಯು ಪ್ರದೇಶವನ್ನು ರಕ್ಷಿಸಿಕೊಳ್ಳುವಲ್ಲಿ  ರಕ್ಷಣ ಪಡೆಗಳು ಯಶಸ್ವಿಯಾಗಿವೆ. ಅಷ್ಟೇ ಅಲ್ಲದೆ ಯಾವುದೇ ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಸೇವೆಗೆ ಈ ಪಡೆಗಳು ಕಟಿಬದ್ಧವಾಗಿವೆ.

Advertisement

1932, ಅ. 8ರಂದು ಭಾರತೀಯ ವಾಯು ಪಡೆಯನ್ನು ಸ್ಥಾಪಿಸಲಾಯಿತು.  ಅಂದಿನಿಂದ ಪ್ರತೀ ವರ್ಷ ಅಕ್ಟೋಬರ್‌ 8ರಂದು ಹಲವು ಯುದ್ಧಗಳಲ್ಲಿ ಭಾರತೀಯ ವಾಯುಸೇನೆಯು ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸುವ ಹಾಗೂ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವದಲ್ಲಿ ಅತೀ ದೊಡ್ಡ ವಾಯು ಪಡೆಯನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ, ರಷ್ಯಾ ಮತ್ತು ಚೀನದ ಅನಂತರದ ಸ್ಥಾನದಲ್ಲಿ ಭಾರತ ಇದೆ. ಮಾತ್ರವಲ್ಲದೇ ಜಗತ್ತಿನ ಶಕ್ತಿಶಾಲಿ ವಾಯು ಸೇನೆಗಳಲ್ಲಿ  ಭಾರತೀಯ ವಾಯುಪಡೆಯೂ ಒಂದಾಗಿದೆ.

ಮೊದಲ ಯುದ್ಧ ವಿಮಾನ
1933ರ ಎ.1ರಂದು ಮೊದಲ ಯುದ್ಧ ವಿಮಾನ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿತ್ತು. ಅಂದು ಬ್ರಿಟಿಷ್‌ ವಾಯುಪಡೆಯಿಂದ ತರಬೇತಿ ಪಡೆದ 6 ಮಂದಿ ಅಧಿಕಾರಿಗಳು ಮತ್ತು 19 ಸೈನಿಕರಿದ್ದರು. ಜತೆಗೆ 4 ವಿಮಾನಗಳಿದ್ದವು. ಆಗ ವಾಯುಪಡೆಯನ್ನು “ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌’ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರದ ಬಳಿಕ “ಇಂಡಿಯನ್‌ ಏರ್‌ಫೋರ್ಸ್‌’ ಎಂದು ಮರುನಾಮಕರಣ ಮಾಡಲಾಯಿತು.

ಸೇನಾ ಬಲ
ನಮ್ಮಲ್ಲಿ ಒಟ್ಟು 60 ವಾಯುಪಡೆ ನಿಲ್ದಾಣಗಳಿವೆ. ವಾಯು ಸೇನೆಯಲ್ಲಿ 1,39,576 ಸಕ್ರಿಯ ಅಧಿಕಾರಿಗಳಿದ್ದು, 1,40,000 ಮಂದಿ ಮೀಸಲು ಪಡೆಯಲ್ಲಿದ್ದಾರೆ. ಜತೆಗೆ ಸುಮಾರು 1,500 ಯುದ್ಧ ವಿಮಾನಗಳಿದ್ದು, ಸುಮಾರು 227 ಸುಖೋಯ್‌-30, 5 ರಫೇಲ್‌, 17 ತೇಜಸ್‌, 54 ಮಿಗ್‌-21, 65 ಮಿಗ್‌-29, 51 ಮಿರಾಜ್‌-2,000, 106 ಜಾಗ್ವಾರ್‌ ಭಾರತೀಯ ವಾಯು ಸೇನೆಯ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಾಗಿವೆ.

Advertisement

ಗರುಡ್‌ ಕಮಾಂಡೋ
ಗರುಡ್‌ ಕಮಾಂಡೋ ವಾಯು ಪಡೆಯ ವಿಶೇಷ ಕಮಾಂಡೋ ಪಡೆ. 2004ರಲ್ಲಿ ಆರಂಭವಾದ ಇದು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುತ್ತದೆ. ಕಮಾಂಡೋ ಪಡೆ ಗಳಲ್ಲೇ ಅತೀ ಸುದೀರ್ಘ‌ ತರಬೇತಿಯನ್ನು ಗರುಡ್‌ ನಲ್ಲಿ ನೀಡಲಾಗುತ್ತದೆ. ಹಲವು ರಕ್ಷಣ ಕಾರ್ಯಾ ಚರಣೆಗಳನ್ನು ನಡೆಸಿದ ಹಿರಿಮೆ ಇದಕ್ಕಿದೆ.

ಹಿಂಡನ್‌ ಹಿರಿಮೆ
ವಾಯುಪಡೆಯ ಹಿಂಡನ್‌ ವಾಯು ನಿಲ್ದಾಣ ಏಷ್ಯಾದಲ್ಲೇ ಅತೀ ದೊಡ್ಡ ವಾಯು ನೆಲೆ. ಗಾಜಿಯಾಬಾದ್‌ನಲ್ಲಿರುವ ಇದು ವೆಸ್ಟರ್ನ್ ಏರ್‌ ಕಮಾಂಡ್‌ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 9 ಸಾವಿರ ಅಡಿಯ ಅತೀ ದೊಡ್ಡ ರನ್‌ವೇ ಹೊಂದಿದೆ. ಇದು ವಿಶ್ವದ 8ನೇ ಅತೀ ದೊಡ್ಡ ವಾಯುನೆಲೆಯೂ ಹೌದು.

ಪ್ರಮುಖ ಪಾತ್ರ
ನೆರೆಯ ದೇಶಗಳಾದ ಪಾಕಿಸ್ಥಾನ ಮತ್ತು ಚೀನದೊಂದಿಗೆ ನಡೆದ ಯುದ್ಧದಲ್ಲಿ ನಮ್ಮ ವಾಯುಪಡೆ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ವಾಯುಪಡೆಯು ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಆಪರೇಷನ್‌ ವಿಜಯ…, ಆಪರೇಷನ್‌ ಮೇಘದೂತ್‌, ಆಪರೇಷನ್‌ ಕ್ಯಾಕ್ಟಸ್‌, ಆಪರೇಷನ್‌ ಪೂಮಲೈ, ಆಪರೇಷನ್‌ ರಾಹತ್‌ ಅತ್ಯಂತ ಪ್ರಮುಖವಾಗಿವೆ. ಇದಲ್ಲದೆ ದೇಶದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಭಯೋತ್ಪಾದಕರ ದಾಳಿ ನಡೆದಾಗ, ಗಲಭೆಗಳು ನಡೆದಾಗ ಪ್ರಾಣಾಪಾಯದಲ್ಲಿರುವ ಜನರನ್ನು ರಕ್ಷಿಸುವ ಕಾರ್ಯವನ್ನೂ ವಾಯು ಸೇನೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

2ನೇ ಜಾಗತಿಕ  ಯುದ್ಧದಲ್ಲಿ ಭಾಗಿ
1938ರಲ್ಲಿ ಆರಂಭಗೊಂಡ ದ್ವಿತೀಯ ಮಹಾಯುದ್ಧದಲ್ಲಿ ದೇಶವನ್ನು ಆಳುತ್ತಿದ್ದ ಬ್ರಿಟಿಷರ ಪರವಾಗಿ ಸೇನೆ ಯುದ್ಧದಲ್ಲಿ ಭಾಗವಹಿಸಿತ್ತು. ಸುಮಾರು 2 ಲಕ್ಷ ಸೈನಿಕರು ಭಾಗಿಯಾಗಿದ್ದು ಭಾರತೀಯ ವಾಯು ಸೇನೆಯೂ ಇದರಲ್ಲಿ ಸೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next