ಸಿಲ್ಹೆಟ್: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ವನಿತಾ ಏಷ್ಯಾ ಕಪ್ ಕೂಟದ ಫೈನಲ್ ಪಂದ್ಯ ಏಕಪಕ್ಷೀಯವಾಗಿ ನಡೆದಿದೆ. ಭಾರತದ ಆರ್ಭಟದ ಎದುರು ಮಂಕಾದ ಶ್ರೀಲಂಕಾ ವಿಕೆಟ್ ಗಳ ಸೋಲನುಭವಿಸಿದೆ.
ಬಾಂಗ್ಲಾದೇಶದ ಸಿಲ್ಹೆಟ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 65 ರನ್ ಮಾಡಿದರೆ, ಭಾರತ ತಂಡವು 8.3 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಟಾಸ್ ಗೆದ್ದ ಶ್ರೀಲಂಕಾ ನಾಯಕಿ ಚಾಮರಿ ಅತ್ತಪಟ್ಟು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಬ್ಯಾಟಿಂಗ್ ಆರಂಭಿಸಿದ ಲಂಕಾದ ಬ್ಯಾಟರ್ ಗಳು ಸತತ ವಿಕೆಟ್ ಚೆಲ್ಲಿದರು. ಆರಂಭಿಕರಿಬ್ಬರೂ ರನೌಟಾದರೆ, ವೇಗಿ ರೇಣುಕಾ ಸಿಂಗ್ ದಾಳಿಗೆ ನಲುಗಿದ ಲಂಕಾ ಮಧ್ಯಮ ಕ್ರಮಾಂಕ ಪತರುಗಟ್ಟಿತು. ಮೂರು ಓವರ್ ಎಸೆದ ರೇಣುಕಾ ಕೇವಲ ಐದು ರನ್ ನೀಡಿ ಮೂರು ವಿಕೆಟ್ ಕಿತ್ತರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ತಲಾ ಎರಡು ವಿಕೆಟ್ ಪಡೆದರು. ಲಂಕಾ ಪರ 18 ರನ್ ಗಳಿಸಿದ ರಣವೀರಾ ಅವರದ್ದೇ ಹೆಚ್ಚಿನ ಗಳಿಕೆ.
ಸುಲಭ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಅನುಭವಿ ಸ್ಮೃತಿ ಮಂಧನಾ ಭರ್ಜರಿ ಆರಂಭ ಒದಗಿಸಿದರು. ಲಂಕಾ ಬೌಲರ್ ಗಳ ಮೇಲೆ ಸವಾರಿ ಮಾಡಿದ ಮಂಧನಾ, ಮೂರು ಸಿಕ್ಸರ್ ಮತ್ತು ಆರು ಬೌಂಡರಿ ನೆರವಿನಿಂದ 25 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರು. ನಾಯಕಿ ಹರ್ಮನ್ 11 ರನ್ ಮಾಡಿದರು.
ಭಾರತ ತಂಡವು ಎರಡು ವಿಕೆಟ್ ಕಳೆದುಕೊಂಡು 8.3 ಓವರ್ ಗಳಲ್ಲಿ 71 ರನ್ ಮಾಡಿ ಜಯ ಸಾಧಿಸಿತು. ಇದರೊಂದಿಗೆ ಏಳನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿ ಮೂಡಿಬಂತು. ಚೊಚ್ಚಲ ಏಷ್ಯಾಕಪ್ ಗೆಲ್ಲುವ ಲಂಕಾದ ಕನಸು ಕನಸಾಗಿಯೇ ಉಳಿಯಿತು.