Advertisement

INDvsSL; ಸೂಪರ್ ಓವರ್ ನಲ್ಲಿ ಸೂರ್ಯ ಬಳಗಕ್ಕೆ ಸೂಪರ್ ಗೆಲುವು

01:34 AM Jul 31, 2024 | Team Udayavani |

ಡಂಬುಲಾ: ಅತ್ಯಂತ ನಾಟಕೀಯವಾಗಿ ಸಾಗಿದ ಮೂರನೇ ಟಿ20 ಪಂದ್ಯದಲ್ಲಿ ಕೊನೆಗೆ ಭಾರತವು ಗೆಲುವು ಸಾಧಿಸಿದೆ. ಸೂಪರ್ ಓವರ್ ಗೆ ಸಾಗಿದ ಪಂದ್ಯದಲ್ಲಿ ಲಂಕಾ ತಂಡವನ್ನು ಸೋಲಿಸಿ ಟಿ20 ಸರಣಿಯನ್ನು 3-0 ಯಿಂದ ವೈಟ್ ವಾಶ್ ಮಾಡಿದೆ.

Advertisement

ಮಳೆಯಿಂದ ತಡವಾಗಿ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದರೆ, ಲಂಕಾ ತಂಡವು 8 ವಿಕೆಟ್ ಕಳೆದುಕೊಂಡು 137 ರನ್ ಮಾಡಿತು. ಸೂಪರ್ ಓವರ್ ನಲ್ಲಿ ಲಂಕಾ ಕೇವಲ ಎರಡು ರನ್ ಗಳಿಸಿದರೆ, ಭಾರತ ಮೊದಲ ಎಸೆತದಲ್ಲಿ ನಾಯಕ ಸೂರ್ಯ  ಬೌಂಡರಿ ಬಾರಿಸುವ ಮೂಲಕ ಜಯಗಳಿಸಿತು.

ಟಾಸ್ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ನಾಯಕನ ಈ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್ ಗಳು ಬಿಗಿ ದಾಳಿ ನಡೆಸಿದರು. ಭಾರತ ಕೇವಲ 14 ರನ್ ಗಳಿಗೆ ಮೊದಲ ಮೂರು ವಿಕೆಟ್ ಕಳೆದುಕೊಂಡಿತ್ತು. ಎರಡನೇ ಪಂದ್ಯದಲ್ಲಿ ಡಕೌಟಾಗಿದ್ದ ಸ್ಯಾಮ್ಸನ್ ಇಂದು ಮತ್ತೆ ಶೂನ್ಯಕ್ಕೆ ಮರಳಿದರು. ರಿಂಕು ಸಿಂಗ್ 1 ರನ್, ನಾಯಕ ಸೂರ್ಯ 8 ರನ್ ಮಾಡಿದರು.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್ ಕಚ್ಚಿ ನಿಂತ ಗಿಲ್ 37 ಎಸೆತಗಳಲ್ಲಿ 38 ರನ್ ಮಾಡಿದರು. ಕೊನೆಯಲ್ಲಿ ರಿಯಾನ್ ಪರಾಗ್ 18 ಎಸೆತಗಳಲ್ಲಿ 26 ರನ್, ವಾಷಿಂಗ್ಟನ್ ಸುಂದರ್ 25 ರನ್ ಮಾಡಿದರು.

ಶ್ರೀಲಂಕಾ ಪರ ತೀಕ್ಷಣ ಮೂರು ವಿಕೆಟ್ ಕಿತ್ತರೆ, ಎರಡು ವಿಕೆಟ್ ಹಸರಂಗ ಪಾಲಾಯಿತು. ವಿಕ್ರಮಸಿಂಘೆ, ಅಶಿತಾ ಫರ್ನಾಂಡೊ ಮತ್ತು ರಮೇಶ್ ಮೆಂಡಿಸ್ ತಲಾ ಒಂದು ವಿಕೆಟ್ ಕಿತ್ತರು.

Advertisement

ಸಾಧಾರಣ ಗುರಿ ಬೆನ್ನತ್ತಿದ ಲಂಕಾ ತಂಡಕ್ಕೆ ನಿಸ್ಸಾಂಕಾ ಮತ್ತು ಕುಸಾಲ್ ಮೆಂಡಿಸ್ ಉತ್ತಮ ಆರಂಭ ನೀಡಿದರು. ಅವರು ಮೊದಲು ವಿಕೆಟ್ ಗೆ 58 ರನ್ ಗಳಿಸಿದರು. ನಿಸ್ಸಾಂಕಾ 26 ರನ್ ಮಾಡಿದರೆ, ಕುಸಾಲ್ ಮೆಂಡಿಸ್ 43 ರನ್ ಮಾಡಿದರು. ಕುಸಾಲ್ ಪೆರೆರಾ ಮತ್ತು ಮೆಂಡಿಸ್ ಎರಡನೇ ವಿಕೆಟ್ ಗೆ 50 ರನ್ ಜತೆಯಾಟವಾಡಿದರು. ಪೆರೆರಾ 46 ರನ್ ಗಳಿಸಿ ಕೊನೆ ಕ್ಷಣದಲ್ಲಿ ವಿಕೆಟ್ ಒಪ್ಪಿಸಿದರು.

ಕೊನೆಯ ಓವರ್ ನಲ್ಲಿ ಆರು ರನ್ ಬೇಕಿದ್ದಾಗ ನಾಯಕ ಸೂರ್ಯ ಬೌಲಿಂಗ್ ಮಾಡಿ ಎರಡು ವಿಕೆಟ್ ಕಿತ್ತರು. ಕೊನೆಯ ಎಸೆತದಲ್ಲಿ ಮೂರು ರನ್ ಬೇಕಿದ್ದಾಗ ಲಂಕಾದ ವಿಕ್ರಮಸಿಂಘೆ ಎರಡು ರನ್ ಓಡಿ ಪಂದ್ಯ ಟೈ ಮಾಡಿದರು.

ಭಾರತದ ಪರ ರವಿ ಬಿಷ್ಣೋಯಿ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ ಮತ್ತು ಸೂರ್ಯಕುಮಾರ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

ಸೂಪರ್ ಓವರ್

ಸೂಪರ್ ಓವರ್ ನಲ್ಲಿ ಬ್ಯಾಟಿಂಗ್ ಮಾಡಲು ಲಂಕಾ ಪರ ಕುಸಾಲ್ ಪೆರೆರಾ ಮತ್ತು ಕುಸಾಲ್ ಮೆಂಡಿಸ್ ಬಂದರು. ಭಾರತದ ಪರ ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡಿದರು. ಮೊದಲಿಗೆ ವೈಡ್, ಮೊದಲ ಎಸೆತ ಸಿಂಗಲ್, ಎರಡನೇ ಎಸೆತದಲ್ಲಿ ಪೆರೆರಾ ಔಟಾದರು. ಮೂರನೇ ಎಸೆತದಲ್ಲಿ ನಿಸ್ಸಾಂಕಾ ಕೂಡಾ ಔಟಾದರು. ಭಾರತಕ್ಕೆ ಮೂರು ರನ್ ಗುರಿ ನೀಡಿತು.

ಭಾರತದ ಪರ ಬ್ಯಾಟಿಂಗ್ ಗೆ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಬಂದರು. ಲಂಕಾ ಪರ ತೀಕ್ಷಣ ಬೌಲಿಂಗ್ ಮಾಡಿದರು. ಮೊದಲ ಎಸೆತವನ್ನೇ ಬೌಂಡರಿಗೆ ಬಾರಿಸಿದ ಸೂರ್ಯ ತಂಡಕ್ಕೆ ಜಯ ತಂದಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next