Advertisement

ಭಾರತ ವನಿತೆಯರ ಒಂದು ವಿಕೆಟ್‌ ವಿಕ್ರಮ

12:51 PM Feb 22, 2017 | |

ಕೊಲಂಬೊ: ಅತ್ಯಂತ ರೋಮಾಂಚ ಕಾರಿಯಾಗಿ ಸಾಗಿದ, ಯಾರೂ ಗೆಲ್ಲಬಹುದಾದ ಅಥವಾ ಟೈ ಆಗುವ ಸಾಧ್ಯತೆಯನ್ನು ಮುಕ್ತವಾಗಿ ತೆರೆದಿರಿಸಿದ ಐಸಿಸಿ ವನಿತಾ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ಎದುರಾಳಿ ದಕ್ಷಿಣ ಆಫ್ರಿಕಾವನ್ನು ಕೇವಲ ಒಂದು ವಿಕೆಟ್‌ ಅಂತರದಿಂದ ಸೋಲಿಸಿ “ಚಾಂಪಿಯನ್‌’ ಎನಿಸಿ ಕೊಂಡಿದೆ. 

Advertisement

ತನ್ನ ವಿಶ್ವಕಪ್‌ ಪ್ರಧಾನ ಸುತ್ತಿನ ಪ್ರವೇಶಕ್ಕೆ “ಅಜೇಯ’ ಮೆರುಗು ನೀಡಿದೆ.ಕೊಲಂಬೋದ “ಪಿ. ಸಾರಾ ಓವಲ್‌’ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದು ಕೊಂಡ ದಕ್ಷಿಣ ಆಫ್ರಿಕಾ 49.4 ಓವರ್‌ಗಳಲ್ಲಿ 244 ರನ್ನುಗಳ ಸವಾಲಿನ ಮೊತ್ತ ಪೇರಿಸಿ ಆಲೌಟ್‌ ಆಯಿತು. ಭಾರತ ಅಂತಿಮ 2 ಎಸೆತಗಳಲ್ಲಿ ಗೆಲುವಿಗೆ ಅಗತ್ಯವಿದ್ದ 8 ರನ್‌ ಬಾರಿಸುವಲ್ಲಿ ಯಶಸ್ವಿಯಾಯಿತು. ಒಟ್ಟು ಭರ್ತಿ 50 ಓವರ್‌ಗಳಲ್ಲಿ 9 ವಿಕೆಟಿಗೆ 245 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು. ಸೂಪರ್‌ ಸಿಕ್ಸ್‌ ಹಂತದಲ್ಲೂ ಭಾರತ ಹರಿಣಗಳ ಪಡೆಯನ್ನು ಮಗುಚಿತ್ತು.

ನಾಯಕಿ ಮಿಥಾಲಿ ರಾಜ್‌ ಅನುಪಸ್ಥಿತಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಭಾರತ ತಂಡವನ್ನು ಮುನ್ನಡೆಸಿದ್ದರು. ಅವರೇ ಗೆಲುವಿನ ಗೌರವ ತಂದಿ ತ್ತರು. ಕೌರ್‌ ಕೊಡುಗೆ ಅಜೇಯ 41 ರನ್‌ (41 ಎಸೆತ, 2 ಬೌಂಡರಿ, 1 ಸಿಕ್ಸರ್‌).

ಕೊನೆಯ ಹಂತದ ಕೌತುಕ
40 ಓವರ್‌ ತನಕ ಪಂದ್ಯ ಭಾರತದ ಕೈಯಲ್ಲೇ ಇತ್ತು. ಅಂತಿಮ 10 ಓವರ್‌ಗಳಲ್ಲಿ 7 ವಿಕೆಟ್‌ ನೆರವಿನಿಂದ 59 ರನ್‌ ಮಾಡಿದರೆ ಸಾಕಿತ್ತು. ಆದರೆ ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ಪಟಪಟನೆ ವಿಕೆಟ್‌ ಉರುಳಿಸಲಾರಂಭಿಸಿತು. ಭಾರತ ಕೊನೆಯ 2 ಓವರ್‌ಗಳಲ್ಲಿ 2 ವಿಕೆಟ್‌ಗಳಿಂದ 12 ರನ್‌, ಅಂತಿಮ ಓವರಿನಲ್ಲಿ 2 ವಿಕೆಟ್‌ ನೆರವಿಂದ 9 ರನ್‌ ತೆಗೆಯುವ ಒತ್ತಡಕ್ಕೆ ಸಿಲುಕಿತು.

ಮರ್ಸಿಯಾ ಲೊಸೆಲೊ ಪಾಲಾದ ಅಂತಿಮ ಓವರಿನ ಮೊದಲ ಎಸೆತದಲ್ಲೇ ಪೂನಂ ಯಾದವ್‌ ರನೌಟಾದರು. ಆದರೆ ಒಂದು ರನ್‌ ಸಿಕ್ಕಿತು. ಮುಂದಿನ 3 ಎಸೆತಗಳನ್ನು ಎದುರಿಸಿದ ಕೌರ್‌ಗೆ ಒಂದೂ ರನ್‌ ಗಳಿಸಲಾಗಲಿಲ್ಲ. 5ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಎಸೆತದಲ್ಲಿ 2 ರನ್‌ ಕಸಿದರು. ಭಾರತ ಸೋಲರಿಯದ ತಂಡವಾಗಿ ಕೂಟವನ್ನು ಮುಗಿಸಿತು!

Advertisement

ತೀರಾ ನಿಧಾನ ಗತಿಯಿಂದ ಚೇಸಿಂಗ್‌ ಆರಂಭಿಸಿದ ಭಾರತ ತಿರುಷ್ಕಾಮಿನಿ (10) ಅವರನ್ನು 20 ರನ್‌ ಆಗಿದ್ದಾಗ ಕಳೆದುಕೊಂಡಿತು. 2ನೇ ವಿಕೆಟಿಗೆ ಜತೆಗೂಡಿದ ಮೋನಾ ಮೆಶ್ರಮ್‌ (59) ಮತ್ತು ದೀಪ್ತಿ ಶರ್ಮ (71) 122 ರನ್‌ ಪೇರಿಸಿ ಭಾರತ ಸವಾಲನ್ನು ಸುಲಭಗೊಳಿಸಿದರು. ವೇದಾ ಕೃಷ್ಣಮೂರ್ತಿ 31 ರನ್‌ ಕೊಡುಗೆ ಸಲ್ಲಿಸಿದರು.

ದಕ್ಷಿಣ ಆಫ್ರಿಕಾ ಸವಾಲಿನ ಮೊತ್ತ
ಭಾರತದ ಪ್ರಧಾನ ಅಸ್ತ್ರವಾಗಿದ್ದ ಸ್ಪಿನ್‌ ದಾಳಿಯನ್ನು ದಕ್ಷಿಣ ಆಫ್ರಿಕಾ ಆಟಗಾರ್ತಿಯರು ದಿಟ್ಟ ರೀತಿಯಲ್ಲೇ ನಿಭಾಯಿಸಿದರು. ಆರಂಭಿಕ ರಾದ ಲೈಜೆಲ್‌ ಲೀ (37) ಮತ್ತು ಲಾರಾ ವೊಲ್ವಾರ್ಡ್‌ (21) ಭರ್ತಿ 10 ಓವರ್‌ ನಿಭಾಯಿಸಿ 51 ರನ್‌ ಪೇರಿಸಿದರು. ವನ್‌ಡೌನ್‌ನಲ್ಲಿ ಬಂದ ಮಿಗ್ನನ್‌ ಡು ಪ್ರೀಝ್ ಉತ್ತಮ ಪ್ರದರ್ಶನವಿತ್ತು 40 ರನ್‌ ಮಾಡಿದರು (72 ಎಸೆತ, 1 ಬೌಂಡರಿ). ಇವರದು ಆಫ್ರಿಕಾ ಸರದಿಯ ಸರ್ವಾಧಿಕ ಗಳಿಕೆಯಾಗಿತ್ತು.

ತಿೃಷಾ ಚೆಟ್ಟಿ 22, ಕ್ಲೋ ಟ್ರಿಯಾನ್‌ 23 ರನ್‌ ಬಾರಿಸಿದರು. ನಾಯಕಿ ಡೇನ್‌ ವಾನ್‌ ನೀಕರ್ಕ್‌ 37, ಸುನ್‌ ಲೂಸ್‌ 35 ರನ್ನುಗಳ ಕೊಡುಗೆ ಸಲ್ಲಿಸಿದರು.ದಕ್ಷಿಣ ಆಫ್ರಿಕಾ ಪರ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದವರು ಆರಂಭಿಕ ಆಟಗಾರ್ತಿ ಲೈಜೆಲ್‌ ಲೀ. ಅವರ 37 ರನ್‌ ಕೇವಲ 31 ಎಸೆತಗಳಿಂದ ಬಂತು. 3 ಸಿಕ್ಸರ್‌, 3 ಬೌಂಡರಿ ಬಾರಿಸಿ ಭಾರತದ ಬೌಲರ್‌ಗಳನ್ನು ದಂಡಿಸಿದರು.ಭಾರತದ ಪರ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ 51 ರನ್ನಿಗೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. 

ಸಂಕ್ಷಿಪ್ತ ಸ್ಕೋರ್‌
ದಕ್ಷಿಣ ಆಫ್ರಿಕಾ-49.4 ಓವರ್‌ಗಳಲ್ಲಿ 244 (ಡು ಪ್ರೀಝ್ 40, ಲೀ 37, ನೀಕರ್ಕ್‌ 37, ಲೂಸ್‌ 35, ರಾಜೇಶ್ವರಿ 51ಕ್ಕೆ 3, ಶಿಖಾ 41ಕ್ಕೆ 2). ಭಾರತ-50 ಓವರ್‌ಗಳಲ್ಲಿ 9 ವಿಕೆಟಿಗೆ 245 (ದೀಪ್ತಿ 71, ಮೋನಾ 59, ಕೌರ್‌ ಔಟಾಗದೆ 41, ವೇದಾ 31, ಕಾಪ್‌ 36ಕ್ಕೆ 2, ಖಾಕಾ 55ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next