ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ವನಿತೆಯರು ಮೊದಲ ಸಲ ಒತ್ತಡಕ್ಕೆ ಸಿಲುಕಿದ್ದಾರೆ. ಏಕದಿನ ಸರಣಿಯನ್ನು 3-0 ವೈಟ್‌ವಾಶ್ ಮಾಡಿದ ಬಳಿಕ ಏಕೈಕ ಟೆಸ್ಟ್ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದ ಹರ್ಮನ್‌ಪ್ರೀತ್ ಕೌರ್ ಬಳಗವೀಗ ಟಿ20 ಸರಣಿಯ ಮೊದಲ ಪಂದ್ಯವನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದೆ. ರವಿವಾರ ದ್ವಿತೀಯ ಮುಖಾಮುಖೀ ಸಾಗಲಿದ್ದು, ಇದನ್ನು ಗೆದ್ದು ಸರಣಿಯನ್ನು ಉಳಿಸಿಕೊಳ್ಳಬೇಕಿದೆ.
ಭಾರತಕ್ಕೆ ತುರ್ತಾಗಿ ಬೇಕಿರುವುದು ಸುಧಾರಿತ ಬ್ಯಾಟಿಂಗ್ ಹಾಗೂ ಮಿಂಚಿನ ಗತಿಯ ಫೀಲ್ಡಿಂಗ್. ಶುಕ್ರವಾರ ದಕ್ಷಿಣ ಆಫ್ರಿಕಾ 4ಕ್ಕೆ 189 ರನ್ ಪೇರಿಸಿದರೆ, ಭಾರತ 4 ವಿಕೆಟಿಗೆ 177ರ ತನಕ ಬಂದು 12 ರನ್ನುಗಳಿಂದ ಸೋಲು ಕಾಣಬೇಕಾಯಿತು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಫಲಗೊಂಡದ್ದು, ಬಹಳಷ್ಟು ಕ್ಯಾಚ್‌ಗಳನ್ನು ಕೈಬಿಟ್ಟದ್ದು ಭಾರತಕ್ಕೆ ಮುಳುವಾಗಿ ಪರಿಣಮಿಸಿತು. ಹೀಗಾಗಿ ಭಾರತಕ್ಕೆ ಆಗಮಿಸಿದ ಬಳಿಕ ದಕ್ಷಿಣ ಆಫ್ರಿಕಾ ಮೊದಲ ಜಯವನ್ನು ಕಾಣುವಂತಾಯಿತು.
ಬ್ಯಾಟಿಂಗ್ ಟ್ರ್ಯಾಕ್:
ಚೆನ್ನೈ ಟ್ರ್ಯಾಕ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲವಾಗಿ ಪರಿಣಮಿಸುವುದರಿಂದ ರನ್ನಿಗೇನೂ ಬರಗಾಲವಿಲ್ಲ. ಇದು ಮೊದಲ ಪಂದ್ಯದಲ್ಲಿ ಸಾಬೀತಾಗಿದೆ. ಪ್ರವಾಸಿ ತಂಡದ ತಾಜ್ಮಿನ್ ಬ್ರಿಟ್ಜ್, ಮರಿಜಾನ್ ಕಾಪ್, ಭಾರತದ ಜೆಮಿಮಾ ರೋಡ್ರಿಗಸ್ ಅರ್ಧ ಶತಕ ಬಾರಿಸಿ ಮಿಂಚಿದ್ದರು. ಸ್ಮತಿ ಮಂಧನಾ ಕೂಡ ಫಾರ್ಮ್ ಮುಂದುವರಿಸಿದ್ದರು. ಆದರೆ ಶಫಾಲಿ ವರ್ಮ ಅವರ ಆರ್ಭಟ ಕಂಡುಬರಲಿಲ್ಲ. ದಯಾಳನ್ ಹೇಮಲತಾ ಬೇಗನೇ ಔಟಾದರು. ಕೌರ್ ಇನ್ನಷ್ಟು ಬಿರುಸಿನ ಆಟ ಆಡಬೇಕಿತ್ತು. ಕೊನೆಯಲ್ಲಿ ಜೆಮಿಮಾ ಜಬರ್ದಸ್ತ್ ಪ್ರದರ್ಶನ ನೀಡಿದ್ದರಿಂದ ಪಂದ್ಯ ರೋಚಕ ಘಟ್ಟ ತಲುಪಿತ್ತು.
ಇಂಥ ಟ್ರ್ಯಾಕ್‌ಗಳಲ್ಲಿ ಜಾಣ್ಮೆಯ ಬೌಲಿಂಗ್ ಅಗತ್ಯವಿದೆ. ಪೂಜಾ ವಸ್ತ್ರಾಕರ್ ಮಾತ್ರ ಇದರಲ್ಲಿ ಯಶಸ್ವಿಯಾಗಿದ್ದರು. ಇವರ 4 ಓವರ್‌ಗಳಲ್ಲಿ ಕೇವಲ 23 ರನ್ ಬಂದಿತ್ತು.