Advertisement

ಭಾರತ ವನಿತೆಯರಿಗೆ ಮತ್ತೆ ಸೋಲು

06:00 AM Mar 27, 2018 | Team Udayavani |

ಮುಂಬಯಿ: ತ್ರಿಕೋನ ವನಿತಾ ಟಿ20 ಸರಣಿಯಲ್ಲಿ ಸತತ ಮೂರನೇ ಪಂದ್ಯದಲ್ಲಿ ಸೋತಿರುವ ಭಾರತ ವನಿತೆಯರು ಫೈನಲಿಗೇರುವ ಅವಕಾಶದಿಂದ ವಂಚಿತರಾಗಿದ್ದಾರೆ. ಸೋಮವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಕ್ಕೆ 36 ರನ್ನುಗಳಿಂದ ಶರಣಾಗಿದೆ. ಈ ಗೆಲುವಿನಿಂದ ಆಸ್ಟ್ರೇಲಿಯ ತಾನಾಡಿದ ಮೂರು ಪಂದ್ಯಗಳಿಂದ ನಾಲ್ಕಂಕ ಪಡೆದಿದ್ದರೆ ಭಾರತ ಇನ್ನೂ ಅಂಕ ಖಾತೆ ತೆರೆಯಲಿಲ್ಲ. ಆಡಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಇಂಗ್ಲೆಂಡ್‌ ವನಿತೆಯರು ನಾಲ್ಕು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 

Advertisement

ಮಾ. 28ರಂದು ಆಸ್ಟ್ರೇಲಿಯ ತಂಡವು ಇಂಗ್ಲೆಂಡ್‌ ತಂಡವನ್ನು ಎದುರಿಸಲಿದ್ದರೆ ಮಾ. 29ರಂದು ಭಾರತವು ಇಂಗ್ಲೆಂಡ್‌ ವಿರುದ್ಧ ಆಡಲಿದೆ. ಸದ್ಯ ತಲಾ ನಾಲ್ಕು ಅಂಕ ಹೊಂದಿರುವ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ಮಾ. 31ರ ಫೈನಲ್‌ನಲ್ಲಿ ಮತ್ತೆ ಮುಖಾಮುಖಿಯಾಗಲಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯ ವನಿತೆಯರು ಬೆತ್‌ ಮೂನಿ ಮತ್ತು ಎಲಿಸ್‌ ವಿಲಾನಿ ಅವರ ಅರ್ಧಶತಕದಿಂದಾಗಿ 5 ವಿಕೆಟಿಗೆ 186 ರನ್‌ ಪೇರಿಸಿತು. ಮೂನಿ 71 ರನ್‌ ಗಳಿಸಿದ್ದರೆ ವಿಲಾನಿ 10 ಬೌಂಡರಿ ನೆರವಿನಿಂದ 61 ರನ್‌ ಹೊಡೆದರು.

ಗೆಲ್ಲಲು ಕಠಿನ ಗುರಿ ಪಡೆದ ಭಾರತ ವನಿತೆಯರು ಆರಂಭದಲ್ಲಿಯೇ ಎಡವಿದರು. 26 ರನ್‌ ಗಳಿಸುವಷ್ಟರಲ್ಲಿ ತಂಡ ಮೂರು ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಜೆಮಿಮಾ ರಾಡ್ರಿಗಸ್‌ ಸಹಿತ ಹರ್ಮನ್‌ಪ್ರೀತ್‌ ಕೌರ್‌ ಮತ್ತು ಅನುಜಾ ಪಾಟೀಲ್‌ ಗೆಲ್ಲಲು ಕಠಿನ ಪ್ರಯತ್ನಪಟ್ಟರು. ಆದರೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 150 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾದರು. 

ಶಟ್‌ ಹ್ಯಾಟ್ರಿಕ್‌
ಸತತ ಮೂರು ಎಸೆತಗಳಲ್ಲಿ ಮಂದನಾ, ಮಿಥಾಲಿ ಮತ್ತು ದೀಪ್ತಿ ಶರ್ಮ ಅವರ ವಿಕೆಟನ್ನು ಹಾರಿಸಿದ ಮೇಗನ್‌ ಶಟ್‌ ವನಿತಾ ಟ್ವೆಂಟಿ20ಯಲ್ಲಿ ಆಸ್ಟ್ರೇಲಿಯ  ಪರ ಮೊದಲ ಹ್ಯಾಟ್ರಿಕ್‌ ಸಾಧಿಸಿದ ಗೌರವಕ್ಕೆ ಪಾತ್ರರಾದರು. ವನಿತಾ ಕ್ರಿಕೆಟ್‌ನಲ್ಲಿ ಒಟ್ಟಾರೆ ಇದು 7ನೇ ಹ್ಯಾಟ್ರಿಕ್‌ ಸಾಧನೆಯಾಗಿದೆ.

ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯ ವನಿತೆಯರು 5 ವಿಕೆಟಿಗೆ 186; ಭಾರತ ವನಿತೆಯರು 20 ಓವರ್‌ಗಳಲ್ಲಿ 5 ವಿಕೆಟಿಗೆ 150

Advertisement
Advertisement

Udayavani is now on Telegram. Click here to join our channel and stay updated with the latest news.

Next