ಮುಂಬಯಿ: ಮತ್ತೊಂದು ದೊಡ್ಡ ಮೊತ್ತಕ್ಕೆ ಕಾರಣವಾದ 4ನೇ ವನಿತಾ ಟಿ20 ಪಂದ್ಯವನ್ನು 7 ರನ್ನು ಗಳಿಂದ ರೋಚಕವಾಗಿ ಗೆದ್ದ ಆಸ್ಟ್ರೇಲಿಯ ಸರಣಿ ವಶಪಡಿಸಿಕೊಂಡಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 3 ವಿಕೆಟಿಗೆ 188 ರನ್ ಗಳಿಸಿದರೆ, ಭಾರತ ಉತ್ತಮ ಹೋರಾಟ ಪ್ರದರ್ಶಿಸಿಯೂ 5ಕ್ಕೆ 181 ರನ್ ಬಾರಿಸಿ ಶರಣಾಯಿತು. 5 ಪಂದ್ಯಗಳ ಸರಣಿಯಲ್ಲಿ ಆಸೀಸ್ 3-1 ಮುನ್ನಡೆ ಸಾಧಿಸಿದೆ.
ಕೊನೆಯಲ್ಲಿ ರಿಚಾ ಘೋಷ್ ಬಿರುಸಿನ ಆಟವಾಡಿ, 19 ಎಸೆತಗಳಿಂದ ಅಜೇಯ 40 ರನ್ ಬಾರಿಸಿದರೂ ಪ್ರಯೋಜನವಾಗಲಿಲ್ಲ (4 ಬೌಂಡರಿ, 2 ಸಿಕ್ಸರ್). ನಾಯಕಿ ಕೌರ್ 46, ದೇವಿಕಾ ವೈದ್ಯ 32, ಶಫಾಲಿ ವರ್ಮ 20, ಮಂಧನಾ 16 ರನ್ ಮಾಡಿದರು.
ಆಸೀಸ್ ಆರಂಭಿಕ ಕುಸಿತಕ್ಕೆ ಸಿಲುಕಿದ ಬಳಿಕ ಚೇತರಿಸಿಕೊಂಡಿತು. ಎಲ್ಲಿಸ್ ಪೆರ್ರಿ ಮತ್ತೂಮ್ಮೆ ಭಾರತದ ದಾಳಿಯನ್ನು ದಿಟ್ಟ ರೀತಿಯಲ್ಲಿ ಎದುರಿಸಿ ಅಜೇಯ 72 ರನ್ ಬಾರಿಸಿದರು. 42 ಎಸೆತಗಳ ಈ ಸಿಡಿಲಬ್ಬರದ ಆಟದಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು.
ಗ್ರೇಸ್ ಹ್ಯಾರಿಸ್ 12 ಎಸೆತಗಳಿಂದ ಅಜೇಯ 27 ರನ್ ಹೊಡೆದರು (4 ಬೌಂಡರಿ, 1 ಸಿಕ್ಸರ್). ಡೆತ್ ಓವರ್‌ನಲ್ಲಿ ಆಕ್ರಮಣಕಾರಿಯಾಗಿ ಆಡಿದ ಈ ಜೋಡಿಯಿಂದ ಮುರಿಯದ 4ನೇ ವಿಕೆಟಿಗೆ 3.2 ಓವರ್‌ಗಳಿಂದ 48 ರನ್ ಒಟ್ಟುಗೂಡಿತು. ಆ್ಯಶ್ಲಿ ಗಾರ್ಡನರ್ 42 ರನ್ ಮಾಡಿದರು.ದೀಪ್ತಿ ಶರ್ಮ 2, ರಾಧಾ ಯಾಧವ್ ಒಂದು ವಿಕೆಟ್ ಉರುಳಿಸಿದರು.