ಮುಂಬೈ: ಸ್ಪಿನ್ನರ್ ದೀಪ್ತಿ ಶರ್ಮಾ ಬೌಲಿಂಗ್ ಗೆ ಬೆದರಿದ ಆಂಗ್ಲರ ವನಿತಾ ತಂಡವು ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರಿ ಹಿನ್ನೆಡೆ ಅನುಭವಿಸಿದೆ.
ಭಾರತದ 428 ರನ್ ಗೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕೇವಲ 136 ರನ್ ಗೆ ಆಲೌಟಾದರು. ಈ ಮೂಲಕ 292 ರನ್ ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದರು.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿದ್ದ ಭಾರತ ವನಿತಾ ತಂಡವು ಇಂದು 428 ರನ್ ಗಳಿಗೆ ಆಲೌಟಾಯಿತು.
ತನ್ನ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಸೀವರ್ ಬ್ರಂಟ್ ಹೊರತುಪಡಿಸಿ ಯಾರೊಬ್ಬರೂ ಕ್ರೀಸ್ ಕಚ್ಚಿ ಆಡಲಿಲ್ಲ. ಬ್ರಂಟ್ 59 ರನ್ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ ಏಳು ರನ್ ನೀಡಿ ಐದು ವಿಕೆಟ್ ಕಿತ್ತರು. ಸ್ನೇಹ್ ರಾಣಾ ಎರಡು ವಿಕೆಟ್, ಪೂಜಾ ಮತ್ತು ರೇಣುಕಾ ತಲಾ ಒಂದು ವಿಕೆಟ್ ಪಡೆದರು.
ಭಾರತದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ.