ಹೊಸದಿಲ್ಲಿ: ದೇಶದಲ್ಲಿ ಪ್ರಸ್ತುತ ಮಳೆಯ ಕೊರತೆಯನ್ನು ಗಮನಿಸಿದರೆ 8 ವರ್ಷಗಳಲ್ಲೇ ಕನಿಷ್ಠ ಮುಂಗಾರು ಮಳೆಯನ್ನು ಕಂಡ ವರ್ಷ ಎಂಬ ದಾಖಲೆ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಅದಕ್ಕಿಂತ ಗಾಬರಿಯ ಸಂಗತಿಯೆಂದರೆ ಈ ಆಗಸ್ಟ್ ತಿಂಗಳು 100 ವರ್ಷಗಳಲ್ಲೇ ಕನಿಷ್ಠ ಮಳೆಯನ್ನು ಕಾಣುವತ್ತ ದಾಪು ಗಾಲಿಕ್ಕಿದೆ. ಈ ತಿಂಗಳು ಮುಗಿಯಲು ಇನ್ನೆರಡು ದಿನ ಮಾತ್ರ ಬಾಕಿ ಇವೆ.
ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿ ರುವ ದೇಶಕ್ಕೆ ಮುಂಗಾರು ಮಳೆ ಅತ್ಯಂತ ಮಹತ್ವದ್ದಾಗಿದೆ. ಈ ಮುಂಗಾರು ಮಳೆ ವಾಡಿಕೆಯಾಗಿ ದೇಶದ ಶೇ. 70ರಷ್ಟು ಬೆಳೆಗಳು, ಜಲಾಶಯಗಳು, ಅಂತರ್ಜಲಕ್ಕೆ ನೀರೊದಗಿಸುತ್ತದೆ. ಇದು ಕಡಿಮೆಯಾದರೆ ಸಹಜವಾಗಿಯೇ ಬೆಳೆಗಳು ಕಡಿಮೆಯಾಗುತ್ತವೆ. ಇದರಿಂದ ಆಹಾರಧಾನ್ಯಗಳ ಬೆಲೆ ಗಗನಕ್ಕೇರುತ್ತವೆ. ಈಗಾಗಲೇ ದೇಶದಲ್ಲಿ ಆಹಾರಧಾನ್ಯಗಳು ಸಿಕ್ಕಾಪಟ್ಟೆ ದುಬಾರಿಯಾಗಿವೆ.
ಸದ್ಯ ದೇಶದ ಅರ್ಧದಷ್ಟು ಕೃಷಿಭೂಮಿಗೆ ನೀರಾವರಿಯ ಕೊರತೆಯಿದೆ. ಮುಂಗಾರಿನ ಕೊರತೆಯೂ ಕಾಡಿದರೆ ಅನಿವಾರ್ಯವಾಗಿ ಅಕ್ಕಿ, ಗೋಧಿ, ಸಕ್ಕರೆಯಂತಹ ಪದಾರ್ಥಗಳ ರಫ್ತಿನ ಮೇಲೆ ನಿಷೇಧ ಹೇರಲೇಬೇಕಾಗುತ್ತದೆ. ಈಗಾಗಲೇ ಅಕ್ಕಿ, ಈರುಳ್ಳಿ ರಫ್ತಿಗೆ ನಿಷೇಧ ವಿಧಿಸಲಾಗಿದೆ.