Advertisement

ಬೌಲರ್‌ಗಳ ತಿರುಗೇಟು; ಭಾರತಕ್ಕೆ ಏಕದಿನ ಸರಣಿ

10:51 PM Feb 09, 2022 | Team Udayavani |

ಅಹ್ಮದಾಬಾದ್‌: ಪ್ರಸಿದ್ಧ್ ಕೃಷ್ಣ ಸೇರಿದಂತೆ ಬೌಲರ್‌ಗಳ ಜಬರ್ದಸ್ತ್ ತಿರುಗೇಟಿನಿಂದ ವೆಸ್ಟ್‌ ಇಂಡೀಸ್‌ ಎದುರಿನ ದ್ವಿತೀಯ ಏಕದಿನ ಪಂದ್ಯವನ್ನು 44 ರನ್ನುಗಳಿಂದ ಗೆದ್ದ ಭಾರತ ಸರಣಿ ವಶಪಡಿಸಿಕೊಂಡಿದೆ.

Advertisement

ಎರಡೂ ತಂಡಗಳು ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸಿದವು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 9 ವಿಕೆಟಿಗೆ 237 ರನ್‌ ಗಳಿಸಿದರೆ, ವೆಸ್ಟ್‌ ಇಂಡೀಸ್‌ 46 ಓವರ್‌ಗಳಲ್ಲಿ 193ಕ್ಕೆ ಸರ್ವಪತನ ಕಂಡಿತು. 3ನೇ ಹಾಗೂ ಅಂತಿಮ ಮುಖಾಮುಖೀ ಶುಕ್ರವಾರ ನಡೆಯಲಿದೆ. ಮೊದಲ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿತ್ತು.

ಪ್ರಸಿದ್ಧ್ ಮಿಂಚಿನ ದಾಳಿ
ಕರ್ನಾಟಕದ ಪೇಸ್‌ ಬೌಲರ್‌ ಪ್ರಸಿದ್ಧ್ ಕೃಷ್ಣ ಮಿಂಚಿನ ದಾಳಿ ನಡೆಸಿ ಪ್ರವಾಸಿಗರ ಮೇಲೆರಗಿದರು. ಇವರ ಸಾಧನೆ 12 ಕ್ಕೆ 4 ವಿಕೆಟ್‌. ತಮ್ಮ ಮೊದಲೆರಡು ಓವರ್‌ಗಳಲ್ಲಿ ಕಿಂಗ್‌ ಮತ್ತು ಬ್ರಾವೊ ವಿಕೆಟ್‌ ಉಡಾಯಿಸಿದರು. ದ್ವಿತೀಯ ಸ್ಪೆಲ್‌ನಲ್ಲಿ ನಾಯಕ ಪೂರಣ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿದರು. ಈ 3 ವಿಕೆಟ್‌ಗಳಿಗೆ ಅವರು ವ್ಯಯಿಸಿದ್ದು ಬರೀ 4 ರನ್‌. ಮಧ್ಯಮ ಕ್ರಮಾಂಕದ ಆಟಗಾರ ಶಮರ್‌ ಬ್ರೂಕ್ಸ್‌ (44) ಭರವಸೆಯ ಆಟವಾಡಿದರು. ಇವರನ್ನು ಔಟ್‌ ಮಾಡುವ ಮೂಲಕ ಹೂಡಾ ಏಕದಿನ ವಿಕೆಟ್‌ ಖಾತೆ ತೆರೆದರು.

ಅಗ್ರ ಕ್ರಮಾಂಕದ ವೈಫಲ್ಯ
ವೆಸ್ಟ್‌ ಇಂಡೀಸ್‌ ಬೌಲರ್‌ಗಳ ಶಿಸ್ತಿನ ದಾಳಿಯಿಂದಾಗಿ ಭಾರತಕ್ಕೆ ಭಾರೀ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಅಗ್ರ ಕ್ರಮಾಂಕದ ವೈಫಲ್ಯ ಎದ್ದು ಕಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್‌. ರಾಹುಲ್‌-ಸೂರ್ಯಕುಮಾರ್‌ ಯಾದವ್‌ ಹೆಚ್ಚು ಜವಾಬ್ದಾರಿಯಿಂದ ಆಡಿ ಗಮನ ಸೆಳೆದರು. ಸೂರ್ಯಕುಮಾರ್‌ ಭಾರತೀಯ ಸರದಿಯ ಏಕೈಕ ಅರ್ಧ ಶತಕ ಬಾರಿಸಿದರೆ, ರಾಹುಲ್‌ ಒಂದು ರನ್ನಿನಿಂದ ಈ ಅವಕಾಶ ಕಳೆದುಕೊಂಡರು. ಕೊನೆಯಲ್ಲಿ ವಾಷಿಂಗ್ಟನ್‌ ಸುಂದರ್‌ ಮತ್ತು ದೀಪಕ್‌ ಹೂಡಾ ಸಣ್ಣದೊಂದು ಹೋರಾಟ ನಡೆಸಿದರು. ವಿಂಡೀಸ್‌ ಬೌಲಿಂಗ್‌ ಸಾಂಘಿಕ ಯಶಸ್ಸು ಕಂಡಿತು. ದಾಳಿಗಿಳಿದ ಎಲ್ಲ 6 ಮಂದಿ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು.

42 ರನ್ನಿಗೆ 3 ವಿಕೆಟ್‌ ಪತನ
ನಾಯಕ ರೋಹಿತ್‌ ಶರ್ಮ (5) ಬೇಗನೇ ಔಟಾದುದರಿಂದ ಭಾರತಕ್ಕೆ ಆರಂಭದಲ್ಲೇ ಹಿನ್ನಡೆಯಾಯಿತು. ಅಚ್ಚರಿಯ ಬದಲಾವಣೆಯೊಂದರಲ್ಲಿ ಇನ್ನಿಂಗ್ಸ್‌ ಆರಂಭಿಸಲು ಬಂದ ರಿಷಭ್‌ ಪಂತ್‌ ಕೂಡ ಯಶಸ್ಸು ಕಾಣಲಿಲ್ಲ. 34 ಎಸೆತಗಳಿಂದ 18 ರನ್‌ ಮಾಡಿ ನಿರ್ಗಮಿಸಿದರು. ತವರಲ್ಲಿ ನೂರನೇ ಪಂದ್ಯ ಆಡಲಿಳಿದ ವಿರಾಟ್‌ ಕೊಹ್ಲಿ ಗಳಿಕೆಯೂ 18 ರನ್‌. ಇಬ್ಬರೂ ತಲಾ 3 ಬೌಂಡರಿ ಹೊಡೆದರು. ಹೀಗೆ 12 ಓವರ್‌ ಮುಕ್ತಾಯಕ್ಕೆ ಭಾರತದ 3 ವಿಕೆಟ್‌ 43 ರನ್ನಿಗೆ ಬಿತ್ತು.

Advertisement

ರಾಹುಲ್‌-ಸೂರ್ಯ ನೆರವು
4ನೇ ವಿಕೆಟಿಗೆ ಜತೆಗೂಡಿದ ಉಪನಾಯಕ ಕೆ.ಎಲ್‌. ರಾಹುಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಕೆರಿಬಿಯನ್ನರ ಬೌಲಿಂಗ್‌ ಆಕ್ರಮಣವನ್ನು ತಡೆದು ನಿಲ್ಲುವಲ್ಲಿ ಯಶಸ್ವಿಯಾದರು. 18 ಓವರ್‌ ನಿಭಾಯಿಸಿದ ಈ ಜೋಡಿ 91 ರನ್‌ ಪೇರಿಸಿತು. ಯಾವ ಕ್ರಮಾಂಕವಾದರೂ ಸೈ ಎಂಬ ರೀತಿಯಲ್ಲಿ ಬ್ಯಾಟಿಂಗ್‌ ನಡೆಸಿದ ರಾಹುಲ್‌ 48 ಎಸೆತ ಎದುರಿಸಿ 49 ರನ್‌ ಹೊಡೆದರು. 4 ಬೌಂಡರಿ ಜತೆಗೆ ಭಾರತೀಯ ಸರದಿಯ 2 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು.
ಸೂರ್ಯಕುಮಾರ್‌  83 ಎಸೆತ ಎದುರಿಸಿ 64 ರನ್‌ ಕೊಡುಗೆ ಸಲ್ಲಿಸಿದರು (5 ಬೌಂಡರಿ). ಇದು ಸೂರ್ಯಕುಮಾರ್‌ ಅವರ ಎರಡನೇ ಫಿಫ್ಟಿ.

ವಾಷಿಂಗ್ಟನ್‌ ಸುಂದರ್‌ 24 ಹಾಗೂ ದೀಪಕ್‌ ಹೂಡಾ 29 ರನ್‌ ಮಾಡಿದರು. ಕೊನೆಯ 10 ಓವರ್‌ಗಳಲ್ಲಿ ಭಾರತದಿಂದ ಗಳಿಸಲು ಸಾಧ್ಯವಾದದ್ದು 54 ರನ್‌ ಮಾತ್ರ.

ಇಶಾನ್‌ ಕಿಶನ್‌ ಬದಲು ರಾಹುಲ್‌
ನಿರೀಕ್ಷೆಯಂತೆ ಕೆ.ಎಲ್‌. ರಾಹುಲ್‌ ತಂಡಕ್ಕೆ ಮರಳಿದರು. ಇವಾರಿಗಾಗಿ ಜಾಗ ಖಾಲಿ ಮಾಡಿದವರು ಇಶಾನ್‌ ಕಿಶನ್‌. ಆದರೆ ರಾಹುಲ್‌ ಅವರನ್ನು ಆರಂಭಿಕನನ್ನಾಗಿ ಇಳಿಸುವ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಯಿತು. ಅಚ್ಚರಿಯ ನಡೆಯೊಂದರಲ್ಲಿ ರಿಷಭ್‌ ಪಂತ್‌ ಓಪನರ್‌ ಆಗಿ ಕಾಣಿಸಿಕೊಂಡರು. ಮಧ್ಯಮ ಕ್ರಮಾಂಕವನ್ನು ಗಟ್ಟಿಗೊಳಿಸಬೇಕಿರುವ ಭಾರತ, ಓಪನಿಂಗ್‌ನಲ್ಲಿ ಪ್ರಯೋಗ ಮಾಡಲು ಹೊರಟಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೊಲಾರ್ಡ್‌ ಗಾಯಾಳು
ವೆಸ್ಟ್‌ ಇಂಡೀಸ್‌ ಕಡೆಯ ಅಚ್ಚರಿಯೆಂದರೆ ನಾಯಕ ಕೈರನ್‌ ಪೊಲಾರ್ಡ್‌ ಹೊರಗುಳಿದದ್ದು. ಇವರ ಬದಲು ನಿಕೋಲಸ್‌ ಪೂರಣ್‌ ನಾಯಕತ್ವ ವಹಿಸಿದರು. ಪೊಲಾರ್ಡ್‌ ಗಾಯಾಳಾಗಿದ್ದು, ಇವರ ಸ್ಥಾನಕ್ಕೆ ಓಡೀನ್‌ ಸ್ಮಿತ್‌ ಬಂದರು.

ಕೊಹ್ಲಿ ತವರಲ್ಲಿ 100 ಪಂದ್ಯ
ವಿರಾಟ್‌ ಕೊಹ್ಲಿ ತವರಲ್ಲಿ 100ನೇ ಏಕದಿನ ಪಂದ್ಯವಾಡಿದರು. ಅವರು ಈ ಸಾಧನೆಗೈದ ಭಾರತದ 5ನೇ ಕ್ರಿಕೆಟಿಗ. ಉಳಿದವರೆಂದರೆ ಸಚಿನ್‌, ಅಜರುದ್ದೀನ್‌, ಮಹೇಂದ್ರ ಸಿಂಗ್‌ ಧೋನಿ ಮತ್ತು ಯುವರಾಜ್‌ ಸಿಂಗ್‌.
ಈ ಪಂದ್ಯದಲ್ಲಿ ಕೊಹ್ಲಿ 18 ರನ್ನಿಗೆ ಔಟಾದರು. ಇದರೊಂದಿಗೆ ತವರಿನ 100 ಪಂದ್ಯಗಳಲ್ಲಿ 5,020 ರನ್‌ ಬಾರಿಸಿದಂತಾಯಿತು. ಇದರಲ್ಲಿ 19 ಶತಕ ಸೇರಿದೆ. ಕೊಹ್ಲಿ ತವರಿನ 100 ಪಂದ್ಯಗಳಲ್ಲಿ 5 ಸಾವಿರ ರನ್‌ ಗಳಿಸಿದ ಭಾರತದ ಕೇವಲ 2ನೇ ಕ್ರಿಕೆಟಿಗ. ಸಚಿನ್‌ ತೆಂಡುಲ್ಕರ್‌ 164 ಪಂದ್ಯಗಳಿಂದ 6,976 ರನ್‌ ಬಾರಿಸಿ ಅಗ್ರಸ್ಥಾನ ಕಾಯ್ದು ಕೊಂಡಿದ್ದಾರೆ. ಬಾರಿಸಿದ ಶತಕಗಳ ಸಂಖ್ಯೆ 20. ಧೋನಿಗೆ 3ನೇ ಸ್ಥಾನ (127 ಪಂದ್ಯ, 4,351 ರನ್‌, 7 ಶತಕ). ಅಜರುದ್ದೀನ್‌ 4ನೇ ಸ್ಥಾನದಲ್ಲಿದ್ದಾರೆ (113 ಪಂದ್ಯ, 3,163 ರನ್‌, 3 ಶತಕ). ಯುವರಾಜ್‌ 5ನೇ ಸ್ಥಾನ ಪಡೆದಿದ್ದಾರೆ (108 ಪಂದ್ಯ, 3,415 ರನ್‌, 7 ಶತಕ).

ಸ್ಕೋರ್‌ ಪಟ್ಟಿ
ಭಾರತ
ರೋಹಿತ್‌ ಶರ್ಮ ಸಿ ಹೋಪ್‌ ಬಿ ರೋಚ್‌ 5
ರಿಷಭ್‌ ಪಂತ್‌ ಸಿ ಹೋಲ್ಡರ್‌ ಬಿ ಸ್ಮಿತ್‌ 18
ವಿರಾಟ್‌ ಕೊಹ್ಲಿ ಸಿ ಹೋಪ್‌ ಬಿ ಸ್ಮಿತ್‌ 18
ಕೆಎಲ್‌ ರಾಹುಲ್‌ ರನೌಟ್‌ 49
ಸೂರ್ಯಕುಮಾರ್‌ ಸಿ ಜೋಸೆಫ್ ಬಿ ಅಲೆನ್‌ 64
ಸುಂದರ್‌ ಸಿ ಜೋಸೆಫ್ ಬಿ ಹೊಸೇನ್‌ 24
ದೀಪಕ್‌ ಹೂಡಾ ಸಿ ಹೊಸೇನ್‌ ಬಿ ಹೋಲ್ಡರ್‌ 29
ಶಾರ್ದೂಲ್ ಠಾಕೂರ್‌ ಸಿ ಬ್ರೂಕ್ಸ್‌ ಬಿ ಜೋಸೆಫ್ 8
ಮೊಹಮ್ಮದ್‌ ಸಿರಾಜ್‌ ಸಿ ಹೋಪ್‌ ಬಿ ಜೋಸೆಫ್ 3
ಯಜುವೇಂದ್ರ ಚಹಲ್‌ ಔಟಾಗದೆ 11
ಪ್ರಸಿದ್ಧ್ ಕೃಷ್ಣ ಔಟಾಗದೆ 0
ಇತರ 8
ಒಟ್ಟು (9 ವಿಕೆಟಿಗೆ) 237
ವಿಕೆಟ್‌ ಪತನ:1-9, 2-39, 3-43, 4-134, 5-177, 6-192, 7-212, 8-224, 9-226.
ಬೌಲಿಂಗ್‌;ಕೇಮರ್‌ ರೋಚ್‌ 8-0-42-1
ಅಲ್ಜಾರಿ ಜೋಸೆಫ್ 10-0-36-2
ಓಡೀನ್‌ ಸ್ಮಿತ್‌ 7-0-29-2
ಜಾಸನ್‌ ಹೋಲ್ಡರ್‌ 9-2-37-1
ಅಖೀಲ್‌ ಹೊಸೇನ್‌ 6-0-39-1
ಫ್ಯಾಬಿಯನ್‌ ಅಲೆನ್‌ 10-0-50-1

ವೆಸ್ಟ್‌ ಇಂಡೀಸ್‌
ಶೈ ಹೋಪ್‌ ಸಿ ಸೂರ್ಯಕುಮಾರ್‌ ಬಿ ಚಹಲ್‌ 27
ಬ್ರ್ಯಾಂಡನ್‌ ಕಿಂಗ್‌ ಸಿ ಪಂತ್‌ ಬಿ ಪ್ರಸಿದ್ಧ್ 18
ಡ್ಯಾರೆನ್‌ ಬ್ರಾವೊ ಸಿ ಪಂತ್‌ ಪ್ರಸಿದ್ಧ್ 1
ಶಮರ್‌ ಬ್ರೂಕ್ಸ್‌ ಸಿ ಸೂರ್ಯಕುಮಾರ್‌ ಬಿ ಹೂಡಾ 44
ನಿಕೋಲಸ್‌ ಪೂರಣ್‌ ಸಿ ರೋಹಿತ್‌ ಬಿ ಪ್ರಸಿದ್ಧ್ 9
ಜಾಸನ್‌ ಹೋಲ್ಡರ್‌ ಸಿ ಹೂಡಾ ಬಿ ಠಾಕೂರ್‌ 2
ಅಖೀಲ್‌ ಹೊಸೇನ್‌ ಸಿ ಪಂತ್‌ ಬಿ ಠಾಕೂರ್‌ 34
ಫ್ಯಾಬಿಯನ್‌ ಅಲೆನ್‌ ಸಿ ಪಂತ್‌ ಬಿ ಸಿರಾಜ್‌ 13
ಓಡೀನ್‌ ಸ್ಮಿತ್‌ ಸಿ ಕೊಹ್ಲಿ ಬಿ ಸುಂದರ್‌ 24
ಅಲ್ಜಾರಿ ಜೋಸೆಫ್ ಔಟಾಗದೆ 7
ಕೇಮರ್‌ ರೋಚ್‌ ಎಲ್‌ಬಿಡಬ್ಲ್ಯು ಬಿ ಪ್ರಸಿದ್ಧ್ 0
ಇತರ 14
ಒಟ್ಟು (46 ಓವರ್‌ಗಳಲ್ಲಿ ಆಲೌಟ್‌) 193
ವಿಕೆಟ್‌ ಪತನ:1-32, 2-38, 3-52, 4-66, 5-76, 6-117, 8-159, 9-193.
ಬೌಲಿಂಗ್‌;ಮೊಹಮ್ಮದ್‌ ಸಿರಾಜ್‌ 9-1-38-1
ಶಾರ್ದೂಲ್ ಠಾಕೂರ್‌ 9-1-41-2
ಪ್ರಸಿದ್ಧ್ ಕೃಷ್ಣ 9-3-12-4
ಯಜುವೇಂದ್ರ ಚಹಲ್‌ 10-0-45-1
ವಾಷಿಂಗ್ಟನ್‌ ಸುಂದರ್‌ 5-0-28-1
ದೀಪಕ್‌ ಹೂಡಾ 4-0-24-1

Advertisement

Udayavani is now on Telegram. Click here to join our channel and stay updated with the latest news.

Next