ಬೆಂಗಳೂರು : ಪ್ರವಾಸಿ ಶ್ರೀಲಂಕಾ ಎದುರು ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಶನಿವಾರ ಆರಂಭವಾಗಿರುವ ಸರಣಿಯ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 59.1 ಓವರ್ ಗಳಲ್ಲಿ 252 ರನ್ ಗಳ ಅಲ್ಪ ಮೊತ್ತಕ್ಕೆ ತನ್ನ ಮೊದಲ ಇನ್ನಿಂಗ್ಸ್ ಅಂತ್ಯ ಗೊಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಬಳಗ 10 ರನ್ ಆಗುವಷ್ಟರಲ್ಲಿ ಮಯಾಂಕ್ ಅಗರ್ವಾಲ್ ಅವರು ರನ್ ಔಟ್ ಆಗಿ ನಿರ್ಗಮಿಸಿ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 29 ರನ್ ಆಗಿದ್ದ ವೇಳೆ ರೋಹಿತ್ ಶರ್ಮಾ ಔಟಾದರು.
ಹನುಮ ವಿಹಾರಿ 31, ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದ ವಿರಾಟ್ ಕೊಹ್ಲಿ23 ರನ್ ಗಳಿಗೆ ಔಟಾದರು. ರಿಷಬ್ ಪಂತ್ 39 ರನ್ ಗಳಿಸಿ ಔಟಾದರು.
ಉತ್ತಮ ಆಟವಾಡಿದ ಶ್ರೇಯಸ್ ಅಯ್ಯರ್ ಗರಿಷ್ಠ 92 ರನ್ ಗಳಿಸಿ ಔಟಾಗುವ ಮೂಲಕ ಶತಕದ ಸಮೀಪದಲ್ಲಿ ಎಡವಿ ಭಾರಿ ನಿರಾಸೆ ಅನುಭವಿಸಿದರು. 98 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನೊಳಗೊಂಡ ಸ್ಪೋಟಕ ಆಟ ಅವರದ್ದಾಗಿತ್ತು.
ರವೀಂದ್ರ ಜಡೇಜಾ 4 , ರವಿಚಂದ್ರನ್ ಅಶ್ವಿನ್ 13, ಅಕ್ಷರ್ ಪಟೇಲ್ 9 , ಮೊಹಮ್ಮದ್ ಶಮಿ 5 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ಕೊನೆಯವರಾಗಿ ಔಟಾಗದೆ ಉಳಿದರು.
ಲಂಕಾ ಪರ ಬಿಗು ದಾಳಿ ನಡೆಸಿದ ಲಸಿತ್ ಎಂಬುಲ್ದೇನಿಯ ಮತ್ತು ಪ್ರವೀಣ್ ಜಯವಿಕ್ರಮ ತಲಾ 3 ವಿಕೆಟ್ ಪಡೆದು ಮಿಂಚಿದರು. ಧನಂಜಯ ಡಿ ಸಿಲ್ವಾ 2 ಮತ್ತು ಸುರಂಗ ಲಕ್ಮಲ್ 1 ವಿಕೆಟ್ ಪಡೆದರು.
ಮೊದಲ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 222 ರನ್‌ಗಳ ಜಯ ಸಾಧಿಸಿತ್ತು. ಈ ಟೆಸ್ಟ್ ಐದು ದಿನಗಳ ಕಾಲ ನಡೆಯುವುದು ಅನುಮಾನ ಎನ್ನುವ ಹಾಗೆ ಇಂದಿನ ಮೊದಲ ಇನ್ನಿಂಗ್ಸ್ ಆಟ ಕಂಡು ಬಂದಿದೆ.