Advertisement

ಟರ್ನಿಂಗ್‌ ಟ್ರ್ಯಾಕ್‌ನಲ್ಲಿ ಲಂಕಾಕ್ಕೆ 4 ವಿಕೆಟ್‌ ಜಯ

11:47 PM Jul 28, 2021 | Team Udayavani |

ಕೊಲಂಬೊ: ಭಾರೀ ಟರ್ನ್ ತೆಗೆದುಕೊಳ್ಳುತ್ತಿದ್ದ ಕೊಲಂಬೊ ಟ್ರ್ಯಾಕ್‌ನಲ್ಲಿ ಶ್ರೀಲಂಕಾ ಬುಧವಾರದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ವಿರುದ್ದ 4 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಸರಣಿ 1-1 ಸಮಬಲಗೊಂಡಿದೆ. ಅಂತಿಮ ಪಂದ್ಯ ಗುರುವಾರ ನಡೆಯಲಿದೆ.

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ನಿಗಧಿತ 20 ಓವರ್‌ಗಳಲ್ಲಿ 5 ವಿಕೆಟಿಗೆ ಕೇವಲ 132 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಶ್ರೀಲಂಕಾ ಎಚ್ಚರಿಕೆ ಆಟವಾಡುವ ಮೂಲಕ 19.4 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 133 ರನ್‌ ಪೇರಿಸಿ ಗೆಲುವಿನ ದಡ ಸೇರಿತು.ಲಂಕಾ ಸರದಿಯಲ್ಲಿ ಭನುಕ 36, ಧನಂಜಯ ಡಿ ಸಿಲ್ವ ಅಜೇಯ 40 ರನ್‌ ಬಾರಿಸಿದರು.

ಭಾರತ ನಿಧಾನಗತಿಯ ಆರಂಭ:

ಭಾರತದ ಪವರ್‌ ಪ್ಲೇ ಅವಧಿಯ ಸ್ಕೋರ್‌ ನೋಲಾಸ್‌ 45. ಮೊದಲ 10 ಓವರ್‌ಗಳಲ್ಲಿ ಒಟ್ಟುಗೂಡಿದ್ದು ಒಂದು ವಿಕೆಟಿಗೆ 61 ರನ್‌ ಮಾತ್ರ. ಕೇವಲ ಆರರ ಸರಾಸರಿಯಲ್ಲಿ ರನ್‌ ಬಂದಿತ್ತು. ಈ ಅವಧಿಯಲ್ಲಿ ಲಂಕಾ 8 ಬೌಲರ್‌ಗಳನ್ನು ದಾಳಿಗಿಳಿಸಿತ್ತು.

ನಾಯಕ ಧವನ್‌ ಮತ್ತು ಋತುರಾಜ್‌ ಗಾಯಕ್ವಾಡ್‌ ಭರ್ತಿ 7 ಓವರ್‌ ನಿಭಾಯಿಸಿ 49 ರನ್‌ ಗಳಿಸಿದರು. ಆಗ 21 ರನ್‌ ಮಾಡಿದ ಗಾಯಕ್ವಾಡ್‌ ವಿಕೆಟ್‌ ಬಿತ್ತು (18 ಎಸೆತ, 1 ಬೌಂಡರಿ). ಶಣಕ ತಮ್ಮ ಮೊದಲ ಓವರಿನಲ್ಲೇ ಯಶಸ್ಸು ಕಂಡಿದ್ದರು.

Advertisement

ಧವನ್‌-ಪಡಿಕ್ಕಲ್‌ ರನ್‌ ಗತಿ ಏರಿಸಲು ಗರಿಷ್ಠ ಪ್ರಯತ್ನಪಟ್ಟರು. ಆದರೆ 31 ಎಸೆತಗಳಿಂದ ಬಂದದ್ದು ಕೇವಲ 32 ರನ್‌. ದ್ವಿತೀಯ ಸ್ಪೆಲ್‌ ಎಸೆಯಲು ಬಂದ ಧನಂಜಯ ಭಾರತದ ಕಪ್ತಾನನ್ನು ಕ್ಲೀನ್‌ಬೌಲ್ಡ್‌ ಮಾಡಿದರು. ಧವನ್‌ ಗಳಿಕೆ 42 ಎಸೆತಗಳಿಂದ 40 ರನ್‌ (5 ಬೌಂಡರಿ). ಧವನ್‌ ಅವರದೇ ಭಾರತದ ಸರದಿಯ ಗರಿಷ್ಠ ಗಳಿಕೆಯಾಗಿತ್ತು.

ಡೆತ್‌ ಓವರ್‌ ಆರಂಭವಾದರೂ ಭಾರತದ ಮೊತ್ತ ನೂರರ ಗಡಿ ಮುಟ್ಟಿರಲಿಲ್ಲ. ಪಡಿಕ್ಕಲ್‌-ಸಂಜು ಸ್ಯಾಮ್ಸನ್‌ ಜೋಡಿಯ ಮೇಲೆ ತಂಡ ಹೆಚ್ಚಿನ ಭರವಸೆ ಇರಿಸಿತು. ಆದರೆ ಯಾವುದೇ ಲಾಭವಾಗಲಿಲ್ಲ. 16ನೇ ಓವರ್‌ನ 3ನೇ ಎಸೆತದಲ್ಲೇ ಪಡಿಕ್ಕಲ್‌ ಅವರನ್ನು ಹಸರಂಗ ಬೌಲ್ಡ್‌ ಮಾಡಿದರು (23 ಎಸೆತ, 29 ರನ್‌, 1 ಬೌಂಡರಿ, 1 ಸಿಕ್ಸರ್‌). ಸ್ಯಾಮ್ಸನ್‌ ಕೂಡ ಯಶಸ್ಸು ಕಾಣಲಿಲ್ಲ (7).

ದೇವದತ್ತ ಪಡಿಕ್ಕಲ್‌ ಸೇರಿ  ನಾಲ್ವರ ಪದಾರ್ಪಣೆ : ದ್ವಿತೀಯ ಟಿ20 ಪಂದ್ಯದಲ್ಲಿ ಆರ್‌ಸಿಬಿಯ ಬ್ಯಾಟಿಂಗ್‌ ಹೀರೋ ದೇವದತ್ತ ಪಡಿಕ್ಕಲ್‌ ಸೇರಿದಂತೆ ನಾಲ್ವರು ಕ್ರಿಕೆಟಿಗರು ಮೊದಲ ಸಲ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದರು. ಉಳಿದ ಮೂವರೆಂದರೆ ಋತುರಾಜ್‌ ಗಾಯಕ್ವಾಡ್‌, ನಿತೀಶ್‌ ರಾಣಾ ಮತ್ತು ಚೇತನ್‌ ಸಕಾರಿಯಾ. ಇವರೆಲ್ಲರೂ ಐಪಿಎಲ್‌ನಲ್ಲಿ ಮಿಂಚಿದ ಕ್ರಿಕೆಟಿಗರೆಂಬುದು ವಿಶೇಷ.

ಭಾರತ ತಂಡದಲ್ಲಿ ಬರೋಬ್ಬರಿ 7 ಬದಲಾವಣೆ ಸಂಭವಿಸಿತ್ತು. ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ದೀಪಕ್‌ ಚಹರ್‌, ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ ಮತ್ತು ಯಜುವೇಂದ್ರ ಚಹಲ್‌ ಹೊರಗುಳಿದರು.

ಕೃಣಾಲ್‌ ಪಾಂಡ್ಯ ಅವರ ಕೊರೊನಾ ವರದಿ ಫ‌ಲಿತಾಂಶ ಪಾಸಿಟಿವ್‌ ಬಂದ ಕಾರಣ ಪಂದ್ಯವನ್ನು ಒಂದು ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next