Advertisement

ಭಾರತದ ಆಕ್ರಮಣಕ್ಕೆ ಮಳೆ ತಡೆ

06:35 AM Feb 12, 2018 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಕನಸಿನ ಓಟ ಬೆಳೆಸಿದ್ದ ಟೀಮ್‌ ಇಂಡಿಯಾಕ್ಕೆ ಶನಿವಾರ ರಾತ್ರಿ “ವಾಂಡರರ್’ ಅಂಗಳದಲ್ಲಿ ಬ್ರೇಕ್‌ ಬಿದ್ದಿದೆ. ಮಳೆಯಿಂದ ಅಡಚಣೆಗೊಳಗಾದ 4ನೇ ಏಕದಿನ ಪಂದ್ಯವನ್ನು ಹರಿಣಗಳ ಪಡೆ ಡಿ-ಎಲ್‌ ನಿಯಮದಂತೆ 5 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು ಜೀವಂತವಾಗಿರಿಸಿದೆ.

Advertisement

3-0 ಮುನ್ನಡೆಯೊಂದಿಗೆ ನಾಲ್ಕನೇ ಪ್ರಯತ್ನದಲ್ಲೇ ಐತಿಹಾಸಿಕ ಸರಣಿ ಗೆಲುವಿನ ಕನಸಿನಲ್ಲಿ ವಿಹರಿಸುತ್ತಿದ್ದ ಕೊಹ್ಲಿ ಪಡೆ ಮೊದಲು ಬ್ಯಾಟಿಂಗ್‌ ನಡೆಸಿ 7 ವಿಕೆಟಿಗೆ 289 ರನ್‌ ಪೇರಿಸಿತು. ದಕ್ಷಿಣ ಆಫ್ರಿಕಾದ ಚೇಸಿಂಗ್‌ ವೇಳೆ 8ನೇ ಓವರ್‌ ಹೊತ್ತಿಗೆ ಭಾರೀ ಮಿಂಚಿನೊಂದಿಗೆ ಮಳೆ ಬಂದುದರಿಂದ 113 ನಿಮಿಷಗಳ ಆಟ ನಷ್ಟವಾಯಿತು. ಡಿ-ಎಲ್‌ ನಿಯಮದಂತೆ 28 ಓವರ್‌ಗಳಲ್ಲಿ 202 ರನ್ನುಗಳ ಗುರಿಯನ್ನು ನಿಗದಿಗೊಳಿಸಲಾಯಿತು. ಅರ್ಥಾತ್‌, ಉಳಿದ 20.4 ಓವರ್‌ಗಳಿಂದ 159 ರನ್‌ ಗಳಿಸಬೇಕಾದ ಸವಾಲು ಎದುರಾಯಿತು.

ಟಿ20 ಯುಗದಲ್ಲಿ ಇದೇನೂ ದೊಡ್ಡ ಸವಾಲಾಗಿರಲಿಲ್ಲ. ಮಾರ್ಕ್‌ರಮ್‌ ಪಡೆ  25.3 ಓವರ್‌ಗಳಲ್ಲಿ 5 ವಿಕೆಟಿಗೆ 207 ರನ್‌ ಬಾರಿಸಿ ಗೆಲುವಿನ ಖಾತೆ ತೆರೆಯಿತು. ಇದರೊಂದಿಗೆ “ಪಿಂಕ್‌ ಡೇ ಮ್ಯಾಚ್‌’ ಹರಿಣಗಳ ಪಾಲಿಗೆ ಮತ್ತೂಮ್ಮೆ ಅದೃಷ್ಟವನ್ನು ತೆರೆದಿರಿಸಿತು. ಈವರೆಗಿನ ಪಿಂಕ್‌ ಡೇ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಸೋತದ್ದೇ ಇಲ್ಲ!

ಅಕಸ್ಮಾತ್‌ ಶನಿವಾರದ ಪಂದ್ಯ ಮಳೆಯಿಂದ ರದ್ದುಗೊಂಡರೂ ಸರಣಿ ಟೀಮ್‌ ಇಂಡಿಯಾ ಪಾಲಾಗುತ್ತಿತ್ತು. ಆದರೆ ಈ ನಸೀಬು ಕೊಹ್ಲಿ ಪಡೆಗೆ ಇರಲಿಲ್ಲ. ಸರಣಿ ಗೆಲುವಿಗಾಗಿ ಭಾರತದ ಮುಂದೀಗ ಉಳಿದೆರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲಬೇಕಾದ ಸವಾಲಿದೆ. ಇನ್ನೊಂದೆಡೆ ಸರಣಿಯನ್ನು ಸರಿದೂಗಿಸಲು ಆಫ್ರಿಕಾ ಎರಡೂ ಪಂದ್ಯಗಳನ್ನು ಜಯಿಸಬೇಕಿದೆ.

ನಡೆಯಲಿಲ್ಲ ಸ್ಪಿನ್‌ ಮ್ಯಾಜಿಕ್‌
ಮೊದಲ 3 ಪಂದ್ಯಗಳಲ್ಲಿ ಭಾರತ ತನ್ನ ಘಾತಕ ಸ್ಪಿನ್‌ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಆಘಾತವಿಕ್ಕುತ್ತಲೇ ಬಂದಿತ್ತು. ಅಲ್ಲಿ ಯಜುವೇಂದ್ರ ಚಾಹಲ್‌-ಕುಲದೀಪ್‌ ಯಾದವ್‌ ಆತಿಥೇಯರ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಆದರೆ ವಾಂಡರರ್ನಲ್ಲಿ ಈ ಸ್ಪಿನ್‌ದ್ವಯರ ಮ್ಯಾಜಿಕ್‌ ನಡೆಯಲಿಲ್ಲ. ಇವರನ್ನೇ ಟಾರ್ಗೆಟ್‌ ಮಾಡಿಕೊಂಡ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಭರ್ಜರಿ ಹೊಡೆತ ಬಾರಿಸುತ್ತ ಮುನ್ನುಗ್ಗತೊಡಗಿದರು. ಚಾಹಲ್‌ ಅವರಂತೂ ಚೆನ್ನಾಗಿ ದಂಡಿಸಲ್ಪಟ್ಟರು. ಇವರ 5.3 ಓವರ್‌ಗಳಲ್ಲಿ 68 ರನ್‌ ಸೋರಿಹೋಯಿತು. 6 ಸಿಕ್ಸರ್‌, 2 ಬೌಂಡರಿ, 3 ವೈಡ್‌, 2 ನೋಬಾಲ್‌ ಮೂಲಕ ಚಾಹಲ್‌ ಅತ್ಯಂತ ದುಬಾರಿಯಾದರು. ಕುಲದೀಪ್‌ ಯಾದವ್‌ ಅವರ 6 ಓವರ್‌ಗಳಲ್ಲಿ 51 ರನ್‌ ಹರಿದು ಹೋಯಿತು. ಇಬ್ಬರಿಗೂ ಸಿಕ್ಕಿದ್ದು ಒಂದೊಂದು ವಿಕೆಟ್‌ ಮಾತ್ರ.

Advertisement

ಭುವನೇಶ್ವರ್‌ ಕುಮಾರ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ಉತ್ತಮ ನಿಯಂತ್ರಣ ಸಾಧಿಸಿದರೂ ಕೊಹ್ಲಿ ಇವರನ್ನು ಡೆತ್‌ ಓವರ್‌ಗಳಲ್ಲಿ ದಾಳಿಗಿಳಿಸದಿದ್ದುದು ಅಚ್ಚರಿಯಾಗಿ ಕಂಡಿತು. ಜತೆಗೆ ಭಾರತದ ಕಳಪೆ ಕ್ಷೇತ್ರರಕ್ಷಣೆ ಕೂಡ ಆತಿಥೇಯರಿಗೆ ವರವಾಗಿ ಪರಿಣಮಿಸಿತು.

ಆಫ್ರಿಕಾ ಸ್ಫೋಟಕ ಬ್ಯಾಟಿಂಗ್‌
ಗುರಿಯನ್ನು ಮರು ನಿಗದಿಗೊಳಿಸಿದ ಬಳಿಕ ಆಫ್ರಿಕಾ ಬ್ಯಾಟ್ಸ್‌ಮನ್‌ಗಳೆಲ್ಲ ಮುನ್ನುಗ್ಗಿ ಬಾರಿಸತೊಡಗಿದರು. ಸರಣಿಯಲ್ಲಿ ಮೊದಲ ಪಂದ್ಯವಾಡಿದ ಎಬಿಡಿ 18 ಎಸೆತಗಳಿಂದ 26 ರನ್‌ (1 ಬೌಂಡರಿ, 2 ಸಿಕ್ಸರ್‌), ಒಮ್ಮೆ ನೋಬಾಲ್‌ನಲ್ಲಿ ಬೌಲ್ಡ್‌ ಆದ ಮಿಲ್ಲರ್‌ 28 ಎಸೆತಗಳಿಂದ 39 ರನ್‌ (4 ಬೌಂಡರಿ, 2 ಸಿಕ್ಸರ್‌), ಪಂದ್ಯಶ್ರೇಷ್ಠ ಕ್ಲಾಸೆನ್‌ 27 ಎಸೆತಗಳಿಂದ ಅಜೇಯ 43 ರನ್‌ (5 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಇವರೆಲ್ಲರಿಗಿಂತ ಮಿಗಿಲಾದದ್ದು ಫೆಲುಕ್ವಾಯೊ ಅವರ ಪವರ್‌ಫ‌ುಲ್‌ ಬ್ಯಾಟಿಂಗ್‌. ಇವರ ಅಜೇಯ 23 ರನ್‌ ಬರೀ 5 ಎಸೆತಗಳಲ್ಲಿ ಸಿಡಿಯಲ್ಪಟ್ಟಿತು (3 ಸಿಕ್ಸರ್‌, 1 ಬೌಂಡರಿ).

ಆಫ್ರಿಕಾ ತಂಡಕ್ಕೆ ದಂಡ
ಶನಿವಾರದ 4ನೇ ಏಕದಿನ ಪಂದ್ಯದ ವೇಳೆ ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲವಾದ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ದಂಡ ವಿಧಿಸಲಾಗಿದೆ. ನಿಗದಿತ ಅವಧಿಯಲ್ಲಿ ಆಫ್ರಿಕಾ ಒಂದು ಓವರ್‌ ಹಿನ್ನಡೆಯಲ್ಲಿತ್ತು. ಮೈದಾನದ ಅಂಪಾಯರ್‌ಗಳಾದ ಅಲೀಮ್‌ ದಾರ್‌ ಮತ್ತು ಬೊಂಗನಿ ಜೆಲೆ, ತೃತೀಯ ಅಂಪಾಯರ್‌ ಇಯಾನ್‌ ಗೂಲ್ಡ್‌, 4ನೇ ಅಂಪಾಯರ್‌ ಶಾನ್‌ ಜಾರ್ಜ್‌ ನೀಡಿದ ದೂರನ್ನು ಗಣನೆಗೆ ತೆಗೆದುಕೊಂಡ ಐಸಿಸಿ ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್, ತಂಡದ ನಾಯಕ ಐಡನ್‌ ಮಾರ್ಕ್‌ರಮ್‌ ಅವರಿಗೆ ಪಂದ್ಯ ಸಂಭಾವನೆಯ ಶೇ. 20ರಷ್ಟು ಹಾಗೂ ಉಳಿದ ಆಟಗಾರರಿಗೆ ಶೇ. 10ರಷ್ಟು ದಂಡ ವಿಧಿಸಿದರು.

ಇದು ನಾಯಕ ಮಾರ್ಕ್‌ರಮ್‌ ಅವರಿಗೆ ಎದುರಾದ ಮೊದಲ “ದಂಡ ಶಿಕ್ಷೆ’. ಮುಂದಿನ 12 ತಿಂಗಳಲ್ಲಿ ಇದೇ ತಪ್ಪು ಪುನರಾವರ್ತನೆಗೊಂಡಲ್ಲಿ ಮಾರ್ಕ್‌ರಮ್‌ ಅವರು ಪಂದ್ಯ ನಿಷೇಧ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಸ್ಕೋರ್‌ಪಟ್ಟಿ
ಭಾರತ  7 ವಿಕೆಟಿಗೆ 289
* ದಕ್ಷಿಣ ಆಫ್ರಿಕಾ
(ಗುರಿ: 28 ಓವರ್‌ಗಳಲ್ಲಿ 202 ರನ್‌)
ಐಡನ್‌ ಮಾರ್ಕ್‌ರಮ್‌    ಎಲ್‌ಬಿಡಬ್ಲ್ಯು ಬುಮ್ರಾ    22
ಹಾಶಿಮ್‌ ಆಮ್ಲ    ಸಿ ಭುವನೇಶ್ವರ್‌ ಬಿ ಕುಲದೀಪ್‌    33
ಜೆಪಿ ಡ್ಯುಮಿನಿ    ಎಲ್‌ಬಿಡಬ್ಲ್ಯು ಕುಲದೀಪ್‌    10
ಎಬಿ ಡಿ ವಿಲಿಯರ್    ಸಿ ರೋಹಿತ್‌ ಬಿ ಪಾಂಡ್ಯ    26
ಡೇವಿಡ್‌ ಮಿಲ್ಲರ್‌    ಎಲ್‌ಬಿಡಬ್ಲಿé ಚಾಹಲ್‌    39
ಹೆನ್ರಿಚ್‌ ಕ್ಲಾಸೆನ್‌    ಔಟಾಗದೆ    43
ಆ್ಯಂಡಿಲ್‌ ಫೆಲುಕ್ವಾಯೊ    ಔಟಾಗದೆ    23
ಇತರ        11
ಒಟ್ಟು  (25.3 ಓವರ್‌ಗಳಲ್ಲಿ 5 ವಿಕೆಟಿಗೆ)        207
ವಿಕೆಟ್‌ ಪತನ: 1-43, 2-67, 3-77, 4-102, 5-174.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        4-0-27-0
ಜಸ್‌ಪ್ರೀತ್‌ ಬುಮ್ರಾ        5-0-21-1
ಕುಲದೀಪ್‌ ಯಾದವ್‌        6-0-51-2
ಹಾರ್ದಿಕ್‌ ಪಾಂಡ್ಯ        5-0-37-1
ಯಜುವೇಂದ್ರ ಚಾಹಲ್‌        5.3-0-68-1
ಪಂದ್ಯಶ್ರೇಷ್ಠ: ಹೆನ್ರಿಚ್‌ ಕ್ಲಾಸೆನ್‌
5ನೇ ಪಂದ್ಯ: ಪೋರ್ಟ್‌ ಎಲಿಜಬೆತ್‌ (ಫೆ. 13)

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಶಿಖರ್‌ ಧವನ್‌ ಜೊಹಾನ್ಸ್‌ಬರ್ಗ್‌ನಲ್ಲಿ ಶತಕ ಹೊಡೆದ ಭಾರತದ 3ನೇ ಬ್ಯಾಟ್ಸ್‌ಮನ್‌ ಎನಿಸಿದರು. ಉಳಿದಿಬ್ಬರೆಂದರೆ ಸೌರವ್‌ ಗಂಗೂಲಿ (127) ಮತ್ತು ಸಚಿನ್‌ ತೆಂಡುಲ್ಕರ್‌ (101). ಇವರು 2001ರ ಸರಣಿಯ ವೇಳೆ ಹೊಡೆದಿದ್ದರು. ಆದರೆ ಈ ಮೂರೂ ಶತಕಗಳ ವೇಳೆ ಭಾರತಕ್ಕೆ ಸೋಲೇ ಸಂಗಾತಿಯಾಯಿತು!
* ಧವನ್‌ 100ನೇ ಏಕದಿನದಲ್ಲಿ ಶತಕ ಬಾರಿಸಿದ ಭಾರತದ ಮೊದಲ ಕ್ರಿಕೆಟಿಗ. ಈವರೆಗೆ 100ನೇ ಏಕದಿನದಲ್ಲಿ ಭಾರತದ ಸರ್ವಾಧಿಕ ವೈಯಕ್ತಿಕ ರನ್‌ ದಾಖಲೆ ಗಂಗೂಲಿ ಹೆಸರಲ್ಲಿತ್ತು (97 ರನ್‌).
* ಧವನ್‌ 100 ಪಂದ್ಯಗಳಲ್ಲಿ 2ನೇ ಅತ್ಯಧಿಕ ರನ್‌ ರಾಶಿ ಹಾಕಿದ ಬ್ಯಾಟ್ಸ್‌ಮನ್‌ ಎನಿಸಿದರು (4,309). ಹಾಶಿಮ್‌ ಆಮ್ಲ ಅವರಿಗೆ ಅಗ್ರಸ್ಥಾನ (4,804 ರನ್‌).
* 5.3 ಓವರ್‌ಗಳಲ್ಲಿ 68 ರನ್‌ ನೀಡಿದ ಚಾಹಲ್‌ ಭಾರತದ 2ನೇ ಅತ್ಯಂತ ಕಳಪೆ ಇಕಾನಮಿ ರೇಟ್‌ ದಾಖಲಿಸಿದ ಬೌಲರ್‌ ಎನಿಸಿದರು (12.36). ಭಾರತದ ಕಳಪೆ ಬೌಲಿಂಗ್‌ ದಾಖಲೆ ಗಂಗೂಲಿ ಹೆಸರಲ್ಲಿದೆ (12.4). ಪಾಕಿಸ್ಥಾನ ವಿರುದ್ಧದ 1999ರ ಟೊರಂಟೊ ಪಂದ್ಯದಲ್ಲಿ ಅವರು 5 ಓವರ್‌ಗಳಲ್ಲಿ 62 ರನ್‌ ನೀಡಿದ್ದರು.
* ವಿರಾಟ್‌ ಕೊಹ್ಲಿ ಈ ಸರಣಿಯಲ್ಲಿ ಒಟ್ಟು 393 ರನ್‌ ಪೇರಿಸಿದರು. ಇದು ಭಾರತ-ದಕ್ಷಿಣ ಆಫ್ರಿಕಾ ನಡುವಿನ ದ್ವಿಪಕ್ಷೀಯ ಸರಣಿಯಲ್ಲಿ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆ. ಭಾರತದಲ್ಲಿ ಆಡಲಾದ 2015ರ ಸರಣಿಯಲ್ಲಿ ಎಬಿ ಡಿ ವಿಲಿಯರ್ 358 ರನ್‌ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.
* ಕೊಹ್ಲಿ ದ್ವಿಪಕ್ಷೀಯ ಸರಣಿಯೊಂದರಲ್ಲಿ ಅತ್ಯಧಿಕ ರನ್‌ ಹೊಡೆದ ಭಾರತೀಯ ನಾಯಕನೆಂಬ ತಮ್ಮದೇ ದಾಖಲೆಯನ್ನು ವಿಸ್ತರಿಸಿದರು (393). ಕಳೆದ ವರ್ಷ ಶ್ರೀಲಂಕಾ ವಿರುದ್ಧ ಕೊಹ್ಲಿ 330 ರನ್‌ ಬಾರಿಸಿದ್ದರು.
* ಕೊಹ್ಲಿ ವಿದೇಶಿ ಸರಣಿಯೊಂದರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ರನ್‌ ಬಾರಿಸಿದ ಭಾರತದ ನಾಯಕನೆನಿಸಿದರು (679). 2006ರ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ ರಾಹುಲ್‌ ದ್ರಾವಿಡ್‌ 645 ರನ್‌ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.
* ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಡಲಾದ ಸರಣಿಯೊಂದರ ಎಲ್ಲ ಮಾದರಿಯ ಪಂದ್ಯಗಳಲ್ಲಿ ಅತ್ಯಧಿಕ ರನ್‌ ಬಾರಿಸಿದ ವಿಶ್ವದ ಅಗ್ರ ನಾಯಕನಾಗಿಯೂ ಗುರುತಿಸಲ್ಪಟ್ಟರು (679). 2003-04ರ ಪ್ರವಾಸದ ವೇಳೆ ಬ್ರಿಯಾನ್‌ ಲಾರಾ 627 ರನ್‌ ಗಳಿಸಿದ ದಾಖಲೆ ಪತನಗೊಂಡಿತು.
* ಕನಿಷ್ಠ 5 ಎಸೆತಗಳ ಮಾನದಂಡದ ಪ್ರಕಾರ ಆ್ಯಂಡಿಲ್‌ ಫೆಲುಕ್ವಾಯೊ ಏಕದಿನದಲ್ಲೇ ಅತ್ಯಧಿಕ 460ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಸಿಡಿಸಿದರು (5 ಎಸೆತಗಳಿಂದ 23 ರನ್‌).

Advertisement

Udayavani is now on Telegram. Click here to join our channel and stay updated with the latest news.

Next