ಮುಂಬೈ: ಭಾರತದಲ್ಲಿ ಸದ್ಯ ಐಪಿಎಲ್ ಹವಾ ಇದೆ. ಇದೇ ವರ್ಷದ ಅಂತ್ಯದಲ್ಲಿ ಏಕದಿನ ವಿಶ್ವಕಪ್ ಕೂಡಾ ನಡೆಯಲಿದ್ದು, ಅದಕ್ಕೂ ಭಾರತವೇ ಆತಿಥ್ಯ ವಹಿಸಲಿದೆ. ಐಪಿಎಲ್ ನಡುವೆಯೇ ಬಿಸಿಸಿಐ ವಿಶ್ವಕಪ್ ಗೂ ತಯಾರಿ ನಡೆಸುತ್ತಿದೆ.
2016 ರ ಬಳಿಕ ಈ ಬಾರಿ ಭಾರತೀಯ ಭೂಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಪಂದ್ಯವೊಂದು ನಡೆಯಲಿದೆ. ಈ ಪಂದ್ಯವು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2023 ಮುಗಿದ ನಂತರ ಬಿಸಿಸಿಐ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಅಧಿಕೃತಗೊಳಿಸುತ್ತದೆ ಎಂದು ತಿಳಿದು ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ 5ರಂದು 50 ಓವರ್‌ಗಳ ವಿಶ್ವಕಪ್ ಆರಂಭವಾಗಲಿದೆ.
ಇದನ್ನೂ ಓದಿ:Karnataka Election ಮೋದಿ-ಶಾ ರೋಡ್ ಶೋ ಬಳಿಕ ವಾತಾವರಣ ಬದಲಾಗಿದೆ: ಬಿಎಸ್ ಯಡಿಯೂರಪ್ಪ
ಅಹಮದಾಬಾದ್ ಜತೆಗೆ ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿದೆ. 46 ದಿನಗಳ ಈವೆಂಟ್ ನಲ್ಲಿ ಮೂರು ನಾಕೌಟ್ ಸುತ್ತುಗಳು ಸೇರಿದಂತೆ ಒಟ್ಟು 48 ಪಂದ್ಯಗಳನ್ನು ಆಡಲಾಗುತ್ತದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಚೆನ್ನೈನಲ್ಲಿ ನಡೆಯುವ ಸಾಧ್ಯತೆಯಿದೆ. ಪಾಕಿಸ್ಥಾನದ ಹೆಚ್ಚಿನ ಪಂದ್ಯಗಳು ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆಯಲಿದೆ. ಬಾಂಗ್ಲಾದೇಶದ ಪಂದ್ಯಗಳು ಕೋಲ್ಕತ್ತಾ ಮತ್ತು ಗುವಾಹಟಿಯಲ್ಲಿ ನಡೆಯಲಿದೆ.