Advertisement

ಪಾಕ್‌ ಪಂಟರ್ಸ್ ಎದುರು ಪಲ್ಟಿ ಹೊಡೆದ Champions..!

06:47 PM Jun 18, 2017 | Team Udayavani |

ಕೆನ್ನಿಂಗ್ಟನ್‌ ಓವಲ್‌: ಹೌದು, ಈ ರೀತಿಯ ಫ‌ಲಿತಾಂಶವನ್ನು ಯಾವ ಭಾರತೀಯನೂ ನಿರೀಕ್ಷಿಸಿರಲಿಲ್ಲ. ಐಸಿಸಿ ಪ್ರಾಯೋಜಿತ ಕ್ರಿಕೆಟ್‌ ಟೂರ್ನಮೆಂಟ್‌ಗಳಲ್ಲಿ ತನ್ನ ಬದ್ಧ ಎದುರಾಳಿ ಪಾಕಿಸ್ಥಾನದ ವಿರುದ್ಧ ಇದುವರೆಗೂ ಅಜೇಯವಾಗಿಯೇ ಇದ್ದ ಟಿಂ ಇಂಡಿಯಾದ ಗೆಲುವಿನ ಸರಣಿ ಇಂದು ಮುರಿಯಲ್ಪಟ್ಟಿದೆ. ಅದೂ 180 ರನ್ನುಗಳ ಹೀನಾಯ ಸೋಲಿನ ಮೂಲಕ. ಅತ್ತ ಪಾಕಿಸ್ಥಾನ ಮಾತ್ರ ತನ್ನ ಸಂಘಟಿತ ಹೋರಾಟದ ಮೂಲಕ ಭಾರತವನ್ನು ಭರ್ಜರಿಯಾಗಿ ಮಣಿಸಿ ಹತ್ತು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಚೊಚ್ಚಲ ಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಆಂಗ್ಲರ ನಾಡಿನಲ್ಲಿ ಭರ್ಜರಿಯಾಗಿಯೇ ಸೇಡು ತೀರಿಸಿಕೊಂಡಿದೆ.

Advertisement

ಟಾಸ್‌ ಗೆದ್ದರೂ ಬ್ಯಾಟಿಂಗ್‌ ನಡೆಸದೇ ಎದುರಾಳಿಗೆ ಬ್ಯಾಟಿಂಗ್‌ ಬಿಟ್ಟುಕೊಟ್ಟ ತಪ್ಪಿಗೆ ನಾಯಕ ವಿರಾಟ್‌ ಕೊಹ್ಲಿ ಸರಿಯಾದ ಬೆಲೆಯನ್ನೇ ತೆತ್ತಿದ್ದಾರೆ. ಇದು 2003ರ ವಿಶ್ವಕಪ್‌ ಫೈನಲ್‌ನಲ್ಲಿ ಆಸೀಸ್‌ ವಿರುದ್ಧ ಗಂಗೂಲಿ ಪಡೆ ಸೋತ ವಿಧಾನವನ್ನೇ ನೆನಪಿಸುವಂತಿತ್ತು. ಅಂದು ಗಂಗೂಲಿ ಟಾಸ್‌ ಗೆದ್ದರೂ ಎದುರಾಳಿಗೆ ಬ್ಯಾಟಿಂಗ್‌ ಬಿಟ್ಟುಕೊಟ್ಟು ಅತಿದೊಡ್ಡ ಪ್ರಮಾದವನ್ನೇ ಮಾಡಿದ್ದರು.


ಪಾಕಿಸ್ಥಾನ ನೀಡಿದ 338 ರನ್ನುಗಳ ಭರ್ಜರಿ ಸವಾಲನ್ನು ಬೆನ್ನಟ್ಟಲಾರಂಭಿಸಿದ ಭಾರತಕ್ಕೆ ವೇಗಿ ಮಹಮ್ಮದ್‌ ಅಮೀರ್‌ ಎಸೆದ ಪ್ರಥಮ ಓವರಿನಲ್ಲೇ ಆಘಾತ ಕಾದಿತ್ತು. ತಂಡದ ಖಾತೆ ತೆರೆಯುವಷ್ಟರಲ್ಲಿ ರೋಹಿತ್‌ ಶರ್ಮಾ (0) ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಮತ್ತೆ ಬಂದ ನಾಯಕ ಕೊಹ್ಲಿ (5) ತನಗೆ ಸಿಕ್ಕಿದ ಜೀವದಾನದ ಲಾಭವನ್ನೆತ್ತಲಾಗದೇ ಮುಂದಿನ ಎಸತದಲ್ಲಿಯೇ ಕ್ಯಾಚ್‌ ನೀಡಿ ನಿರ್ಗಮಿಸಿದರು. ಧವನ್‌ (21) ಹಾಗೂ ಯುವರಾಜ್‌ (22) ಅಳುಕತ್ತಲೇ ಅಡುತ್ತ ಜೊತೆಯಾಟ ಬೆಳೆಸಲು ಯತ್ನಿಸಿದಾದರೂ ಇವರ ಆಟ ಪಾಕ್‌ ಬೌಲರ್‌ ಗಳ ಮುಂದೆ ಬಹಳಷ್ಟು ಹೊತ್ತು ನಡೆಯಲಿಲ್ಲ, 21 ರನ್‌ ಗಳಿಸಿದ್ದ ಧವನ್‌ ಅಮೀರ್‌ ಗೆ ವಿಕೆಟ್‌ ಒಪ್ಪಿಸಿದರೆ ಸ್ವಲ್ಪ ಹೊತ್ತಿನಲ್ಲೇ ಯುವರಾಜ್‌ ನಿರ್ಗಮಿಸಿದರು. ಅಲ್ಲಿಗೆ ಭಾರತದ ಅವಸ್ಥೆ 54-4 ಆಗಿತ್ತು. ಗ್ರೇಟ್‌ ಫಿನಿಶರ್‌ ಖ್ಯಾತಿಯ ಧೋನಿ ಮಾಡಿದ್ದು ನಾಲಕ್ಕೇ ರನ್‌, ಅವರೂ ಸಹ ಯುವಿ ಬೆನ್ನಲ್ಲೇ ನಿರ್ಗಮಿಸಿ ಭಾರತದ ಪತನದ ಬಾಲವನ್ನು ಬೆಳೆಸಿದರು!. ಮತ್ತೆ ಬಂದ ಕೇಧಾರ್‌ ಜಾಧವ್‌ ಆಟ 9ರನ್ನಿಗೇ ಮುಗಿಯಿತು.


72 ಕ್ಕೆ 6 ಎಂಬ ಶೋಚನೀಯ ಪರಿಸ್ಥಿತಿಯಲ್ಲಿದ್ದ ಭಾರತದ ಬ್ಯಾಟಿಂಗ್‌ ಸರಣಿಗೆ ಸ್ವಲ್ಪ ಜೀವ ತುಂಬಿದವರು
ಹಾರ್ಧಿಕ್‌ ಪಾಂಡ್ಯ (76 ರನೌಟ್‌). ತಮ್ಮ ಬಿರುಸಿನ ಇನ್ನಿಂಗ್ಸ್‌ ನಲ್ಲಿ ಈ ಯುವ ಆಟಗಾರ ಎದುರಿಸಿದ್ದು 43 ಎಸೆತೆಗಳನ್ನು ಇದರಲ್ಲಿ 4 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್‌ ಮೂಲಕ 76 ರನ್‌ ಸಿಡಿಸಿ ಇಲ್ಲದ ರನ್ನಿಗೆ ಓಡಿ ಪಂದ್ಯದ ನಿರ್ಣಾಯಕ ಹಂತದಲ್ಲಿ ರನೌಟ್‌ ಆಗಿ ನಿರ್ಗಮಿಸಿದರು. ಆಗ ಭಾರತದ ಸ್ಕೋರ್‌ ಬೋರ್ಡ್‌ 152 ಕ್ಕೆ 7 ಆಗಿತ್ತು.

ಕೊನೆಯಲ್ಲಿ ಜಡೇಜಾ (15), ಅಶ್ವಿ‌ನ್‌ (1), ಭುವನೇಶ್ವರ್‌ ಕುಮಾರ್‌ (1*) ಮತ್ತು ಬುಮ್ರಾ (1) ಬ್ಯಾಟ್‌ ಮಾಡಲಷ್ಟೇ ಕ್ರೀಸಿಗೆ ಬಂದಂತಿತ್ತು. ಪಾಂಡ್ಯ ವಿಕೆಟ್‌ ಬಿದ್ದೊಡನೆ ಪಾಕಿಸ್ಥಾನದ ಐತಿಹಾಸಿಕ ವಿಜಯಕ್ಕೆ ಕ್ಷಣಗಣನೆಯಷ್ಟೇ ಬಾಕಿಯಿತ್ತು. ಕೊನೆಯಲ್ಲಿ ಭಾರತವು 30.3 ಓವರ್‌ ಗಳಲ್ಲಿ 158 ರನ್ನಿಗೆ ಆಲೌಟ್‌ ಆಗುವ ಮೂಲಕ 180 ರನ್ನುಗಳ ಭಾರೀ ಅಂತರದಿಂದ ಪಾಕಿಗೆ ಶರಣಾಗಿ ತನ್ನ ಕೈಯಲ್ಲಿದ್ದ ಚಾಂಪಿಯನ್ಸ್‌ ಪಟ್ಟವನ್ನು ತನ್ನ ಬದ್ಧ ಎದುರಾಳಿಗೆ ಒಪ್ಪಿಸಿಬಿಟ್ಟಿತು.

Advertisement


6 ಓವರುಗಳಲ್ಲಿ 2 ಮೇಡನ್‌ ಮೂಲಕ ಕೇವಲ 16 ರನ್ನುಗಳನ್ನು ನೀಡಿ 3 ಅತ್ಯಮೂಲ್ಯ ವಿಕೆಟ್‌ (ರೋಹಿತ್‌ ಶರ್ಮಾ, ಶಿಖರ್‌ ಧವನ್‌ ಮತ್ತು ವಿರಾಟ್‌ ಕೊಹ್ಲಿ) ಪಡೆದ 25 ವರ್ಷದ ಯುವ ವೇಗಿ ಮಹಮ್ಮದ್‌ ಅಮೀರ್‌ ಪಾಕಿಸ್ಥಾನದ ಐತಿಹಾಸಿಕ ಗೆಲುವಿನ ರೂವಾರಿಯಾಗಿ ಮೂಡಿಬಂದರು. ಇದಕ್ಕೂ ಮೊದಲು 27 ವರ್ಷ ಪ್ರಾಯದ ಇನ್ನೋರ್ವ ಯುವ ಆಟಗಾರ ಫ‌ಖಾರ್‌ ಝಮಾನ್‌ (114) ತನ್ನ ಚೊಚ್ಚಲ ಶತಕದ ಮೂಲಕ ಪಾಕ್‌ ಭರ್ಜರಿ ಮೊತ್ತ ಪೇರಿಸಲು ನೆರವಾಗಿದ್ದರು. ಅಂತೂ ಭಾರತೀಯ ಆಟಗಾರರಿಗೆ ಹೋಲಿಸಿದಲ್ಲಿ ಪಾಕ್‌ ತಂಡದ ಇಂದಿನ ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಹೆಚ್ಚು ಶಿಸ್ತುಬದ್ಧವಾಗಿತ್ತು.


ಪಾಕ್‌ ಭರ್ಜರಿ ಬ್ಯಾಟಿಂಗ್‌ ; ಚಾಂಪಿಯನ್ಸ್‌ಗಳಿಗೆ 339 ರನ್ ಟಾರ್ಗೆಟ್‌

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ಡ್ರೀಂ ಫೈನಲ್‌ ಕಾದಾಟದಲ್ಲಿ ಚಾಂಪಿಯನ್ಸ್‌ ಪಟ್ಟವನ್ನು ಉಳಿಸಿಕೊಳ್ಳಲು ಬಲಿಷ್ಠ ಭಾರತಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವು 339 ರನ್ನುಗಳ ಕಠಿಣ ಗುರಿಯನ್ನು ನೀಡಿದೆ. ಇವತ್ತಿನ ಹೈ ವೊಲ್ಟೇಜ್‌ ಫೈನಲ್‌ ಕಾದಾಟದಲ್ಲಿ ಟಾಸ್‌ ಗೆಲ್ಲುವ ಅದೃಷ್ಟ ಟೀಂ ಇಂಡಿಯಾ ಕಪ್ತಾನ ಕೊಹ್ಲಿ ಪಾಲಾಯಿತು. ಟಾಸ್‌ ಗೆದ್ದು ಎದುರಾಳಿಗಳನ್ನು ಬ್ಯಾಟಿಂಗ್‌ ಗೆ ಇಳಿಸಿದ ಕೊಹ್ಲಿಗೆ ಪಾಕ್‌ ಆರಂಭಿಕ ಆಟಗಾರರು ಆಘಾತ ನೀಡಿದರು.


ಆರಂಭಿಕ ಆಟಗಾರರಾದ ಅಜರ್‌ ಆಲಿ (59) ಮತ್ತು ಶತಕ ವೀರ ಫ‌ಖಾರ್‌ ಝಮಾನ್‌ (114) ಅವರ 128 ರನ್ನುಗಳ ಭರ್ಜರಿ ಜೊತೆಯಾಟ
ದ ಮೂಲಕ ಭಾರತೀಯ ಬೌಲರ್‌ ಗಳ ಬೆವರಿಳಿಸಿದರು. ಬಳಿಕ ಬಾಬರ್‌ ಅಝಂ (46) ಮತ್ತು ಬಿರುಸಿನ ಆಟವಾಡುವ ಮೂಲಕ 37 ಬಾಲ್‌ ಗಳಲ್ಲಿ ಭರ್ಜರಿ 57 ರನ್ನುಗಳನ್ನು ಸಿಡಿಸಿದ ಮಹಮ್ಮದ್‌ ಹಫೀಝ್ ಹಾಗೂ ಇಮಾದ್‌ ವಾಸಿಂ (25) ಅವರ ಕೊನೆ ಕ್ಷಣದ ಅತ್ಯಮೂಲ್ಯ ಜೊತೆಯಾಟದಿಂದ ಪಾಕ್‌ ನಿಗದಿತ 50 ಓವರುಗಳಲ್ಲಿ 4 ವಿಕೆಟ್‌ ಕಳೆದುಕೊಂಡು 338 ರನ್ನುಗಳ ಸವಾಲಿನ ಮೊತ್ತವನ್ನು ಪೇರಿಸಿತು.


ಭಾರತೀಯ ಬೌಲರ್‌ಗಳಲ್ಲಿ ವೇಗಿ ಭುವನೇಶ್ವರ್‌ ಕುಮಾರ್‌ ಮಾತ್ರವೇ ಪಾಕ್‌ ಆಟಗಾರರನ್ನು ಸ್ವಲ್ಪ ಮಟ್ಟಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಭುವನೇಶ್ವರ್‌ ತನ್ನ 10 ಓವರ್‌ ಗಳ ದಾಳಿಯಲ್ಲಿ 2 ಮೇಡನ್‌ ಮೂಲಕ ಕೇವಲ 44 ರನ್ನುಗಳನ್ನು ನೀಡಿ 1 ವಿಕೆಟ್‌ ಪಡೆದರು. ಇವರನ್ನು ಬಿಟ್ಟರೆ ಹಾರ್ಧಿಕ್‌ ಪಾಂಡ್ಯ (10 ಓವರ್‌ 53 ರನ್‌ 1 ವಿಕೆಟ್‌) ಮಾತ್ರ ಪರಿಣಾಮಕಾರಿ ಎಣಿಸಿದರು ಉಳಿದಂತೆ ಜಡೇಜಾ, ಅಶ್ವಿ‌ನ್‌, ಬುಮ್ರಾ ದುಬಾರಿಯೆಣಿಸದರು. ಪಾಕ್‌ ಪರ ಉರುಳಿದ 4 ವಿಕೆಟ್‌ ಗಳಲ್ಲಿ, ಅಜರ್‌ ಅವರು ರನೌಟ್‌ ಆದರೆ, ಉಳಿದ ಮೂರು ವಿಕೆಟ್‌ ಗಳನ್ನು ಭುವನೇಶ್ವರ್‌ ಕುಮಾರ್‌, ಪಾಂಡ್ಯ ಮತ್ತು ಜಾಧವ್‌ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next