ನಟಿ ಸುಮಲತಾ ಅಂಬರೀಶ್ ಕಳೆದೊಂದು ವರ್ಷದಿಂದ ಚಿತ್ರರಂಗಕ್ಕಿಂತ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ರಾಜಕೀಯ ರಂಗದಲ್ಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸಂಸದೆಯಾಗಿ ಆಯ್ಕೆಯಾದ ಅವರು ಸದ್ಯ ರಾಜಕೀಯ ರಂಗದಲ್ಲೇ ಬ್ಯುಸಿ. ಅದೇನೆ ಇರಲಿ, ತೆರೆಮೇಲೆ ಸುಮಲತಾ ಅವರನ್ನು ನೋಡಿ ತುಂಬ ಸಮಯವಾಯ್ತು, ಬಿಗ್‌ಸ್ಕ್ರೀನ್‌ನಲ್ಲಿ ಸುಮಲತಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಸುಮಲತಾ ಮತ್ತೆ ಬಣ್ಣ ಹಚ್ಚುತ್ತಾರಾ? ಎನ್ನುತ್ತಿದ್ದ ಸಿನಿಪ್ರಿಯರ ಮುಂದೆ, ಶೀಘ್ರದಲ್ಲೇ ಸುಮಲತಾ ಹೊಸ ಪಾತ್ರದ ಮೂಲಕ ದರ್ಶನ ಕೊಡಲಿದ್ದಾರೆ.
ಹೌದು, ಸುಮಲತಾ ಸದ್ಯ ಅಭಿನಯಿಸಿರುವ “ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದ ಪ್ರಮೋಶನ್ ಕೆಲಸಗಳ ಜೋರಾಗಿವೆ. ಚಿತ್ರ ಜನವರಿ 24ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಲಂಡನ್‌ನಲ್ಲಿ ನೆಲೆಸಿರುವ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ, ಜಾನಕಿ ಎಂಬ ಅನಿವಾಸಿ ಕನ್ನಡತಿ ಪಾತ್ರದಲ್ಲಿ ಸುಮಲತಾ ಕಾಣಿಸಿಕೊಳ್ಳುತ್ತಿದ್ದಾರೆ.
ಸುಮಲತಾ ಅವರ ಪಾತ್ರದ ಬಗ್ಗೆ ಮಾತನಾಡುವ ನಾಗತಿಹಳ್ಳಿ ಚಂದ್ರಶೇಖರ್, “ಅಂಬರೀಶ್ ಅವರು ಇದ್ದಾಗಲೇ ಸುಮಲತಾ ಅವರ ಪಾತ್ರದ ಚಿತ್ರೀಕರಣ ನಡೆಸಲಾಗಿತ್ತು. ಅಂಬರೀಶ್ ಕೂಡ ಈ ಪಾತ್ರವನ್ನು ಕೇಳಿ ಖುಷಿಪಟ್ಟಿದ್ದರು. ಲಂಡನ್‌ನಲ್ಲಿ ತುಂಬ ವರ್ಷಗಳಿಂದ ನೆಲೆಸಿರುವ ಜಾನಕಿ ಎಂಬ ಗೃಹಿಣಿ ಪಾತ್ರದಲ್ಲಿ ಸುಮಲತಾ ಅಭಿನಯಿಸಿದ್ದಾರೆ. ಲಂಡನ್‌ನಲ್ಲಿ ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ, ತಾಯ್ನಾಡಿನ ಮೇಲೆ ಮೋಹ ಇಟ್ಟುಕೊಂಡಿರುವಂಥ ಪಾತ್ರ ಅವರದ್ದು. ಚಿತ್ರದಲ್ಲಿ ಅವರ ಮೇಲೆ ಒಂದು ವಿಶೇಷವಾದ ಹಾಡಿದೆ.
ಅದನ್ನು ಸಿನಿಮಾದಲ್ಲೇ ನೋಡಬೇಕು. ಈ ಹಿಂದೆ ನಾನು ನಿರ್ದೇಶಿಸಿದ್ದ “ಪ್ಯಾರಿಸ್ ಪ್ರಣಯ’ ಸಿನಿಮಾದಲ್ಲೂ ಸುಮಲತಾ ನಟಿಸಿದ್ದರು. ಈ ಸಿನಿಮಾದಲ್ಲಿ ಎರಡನೇ ಬಾರಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಈ ಸಿನಿಮಾದ ಶೂಟಿಂಗ್ ನಡೆಯುವಾಗ ಸುಮಲತಾ ರಾಜಕೀಯಕ್ಕೆ ಬರುತ್ತಾರೆ, ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಸುಳಿವು ಇರಲಿಲ್ಲ. ಆನಂತರ ಎಲ್ಲವೂ ಅನಿರೀಕ್ಷಿತವಾಗಿ ನಡೆದು ಹೋಯಿತು. ಚುನಾವಣೆ ಮುಗಿದ ನಂತರ ಸುಮಲತಾ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದರು. ಸಿನಿಮಾದಲ್ಲಿ ಅವರ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎನ್ನುತ್ತಾರೆ.
ವಿತರಣೆಯತ್ತ ಮೇಷ್ಟ್ರು ಚಿತ್ತ: ಇಲ್ಲಿಯವರೆಗೆ ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್, “ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ಮೂಲಕ ವಿತರಕರಾಗುತ್ತಿದ್ದಾರೆ. ಆ ಬಗ್ಗೆ ಮಾತನಾಡುವ ನಾಗತಿಹಳ್ಳಿ, “ಒಬ್ಬ ನಿರ್ದೇಶಕ, ನಿರ್ಮಾಪಕನಿಗೆ ತನ್ನ ಸಿನಿಮಾ ತನ್ನ ಮಗುವಿದ್ದಂತೆ. ಅದನ್ನು ಸರಿಯಾಗಿ ಪೋಷಿಸಿ, ಪ್ರೇಕ್ಷಕರ ಕೈಗಿಡುವ ಹೊಣೆಗಾರಿಕೆ ಅವರ ಮೇಲಿರುತ್ತದೆ.
ಸದ್ಯ ನನ್ನ ಸಿನಿಮಾವನ್ನೂ ಸರಿಯಾಗಿ ಪ್ರೇಕ್ಷಕರಿಗೆ ತಲುಪಿಸಬೇಕಾದ ಹೊಣೆಗಾರಿಕೆ, ಅನಿವಾರ್ಯತೆ ಎಲ್ಲವೂ ನನ್ನ ಮೇಲಿರುವುದರಿಂದ, ಈ ಸಿನಿಮಾವನ್ನು ನಾವೇ ವಿತರಣೆ ಮಾಡೋಣ ಎಂಬ ನಿರ್ಧಾರಕ್ಕೆ ಬರಬೇಕಾಯ್ತು. ಇದು ಯಾರ ವಿರುದ್ದವೂ ಸಮರ ಮಾಡಲು, ಅಥವಾ ಜಿದ್ದಿಗಾಗಿ ಮಾಡಿದ ನಿರ್ಧಾರವಲ್ಲ. ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳಿಗೆ ಥಿಯೇಟರ್ ಸಿಗುತ್ತಿಲ್ಲ ಎಂದು ದೂರುವ ಬದಲು, ನಾವೇ ಏನಾದ್ರೂ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ವಿತರಣೆಗೆ ಮುಂದಾಗುತ್ತಿದ್ದೇವೆ. ಸದ್ಯಕ್ಕೆ ನಮ್ಮ ಸಿನಿಮಾವನ್ನು ಭಾರತದಾದ್ಯಂತ ಮತ್ತು ಭಾರತದ ಹೊರಗೆ ಏಕಕಾಲಕ್ಕೆ ಬಿಡುಗಡೆ ಮಾಡುವ ತಯಾರಿ ನಡೆದಿದೆ.
ಮುಂದೆ ಬೇರೆ ಚಿತ್ರಗಳನ್ನೂ ಇದೇ ರೀತಿ ವಿತರಣೆ ಮಾಡಬೇಕಾ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಜ. 24ರಂದು “ಇಂಡಿಯಾ ವರ್ಸಸ್ ಇಂಗ್ಲೆಂಡ್’ ಕನ್ನಡ ಸಬ್ ಟೈಟಲ್ ಜೊತೆ ಭಾರತದ ಬಹುತೇಕ ಎಲ್ಲಾ ಮೆಟ್ರೋ ನಗರಗಳಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಅಮೆರಿಕಾ, ಕೆನಡಾ, ಆಫ್ರಿಕಾ, ಅರಬ್, ಆಸ್ಟ್ರೇಲಿಯಾ ಸೇರಿ ಇತರೆಡೆ ಕನ್ನಡಿಗರು ಹೆಚ್ಚಾಗಿರುವ ದೇಶಗಳಲ್ಲಿ ಚಿತ್ರ ಬಿಡುಗಡೆಯ ತಯಾರಿ ನಡೆಯುತ್ತಿದೆ ಎಂಬುದು ಮೇಷ್ಟ್ರು ಮಾತು.