Advertisement

ಇಂದಿನಿಂದ ಬಾಂಗ್ಲಾ ಬ್ಯಾಟಲ್‌: ಪೂರ್ಣ ಸಾಮರ್ಥ್ಯದ ಭಾರತ ತಂಡ ಸಜ್ಜು

11:00 PM Dec 03, 2022 | Team Udayavani |

ಢಾಕಾ: ಟೀಮ್‌ ಇಂಡಿಯಾ ಮತ್ತೆ “ಪೂರ್ಣ ಸಾಮರ್ಥ್ಯ’ದ ಪಡೆಯೊಂದಿಗೆ ಏಕದಿನ ಸರಣಿಗೆ ಸಜ್ಜಾಗಿದೆ. ಬಾಂಗ್ಲಾದೇಶ ವಿರುದ್ಧ ಅವರದೇ ನೆಲದಲ್ಲಿ 3 ಪಂದ್ಯಗಳ ಏಕದಿನ ಸರಣಿ ರವಿವಾರ ಆರಂಭವಾಗಲಿದ್ದು, ರೋಹಿತ್‌ ಶರ್ಮ ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ. ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ ಮೊದಲಾದ ಸೀನಿಯರ್‌ ಆಟಗಾರರು ಈ ಸರಣಿಯ ಕೇಂದ್ರಬಿಂದುವಾಗಿದ್ದಾರೆ.

Advertisement

ನ್ಯೂಜಿಲ್ಯಾಂಡ್‌ನ‌ಲ್ಲಿ ಏಕದಿನ ತಂಡವನ್ನು ಮುನ್ನಡೆಸಿದ ಓಪನರ್‌ ಶಿಖರ್‌ ಧವನ್‌ ಕೂಡ ತಂಡದಲ್ಲಿದ್ದಾರೆ. ಆದರೆ ಶುಭಮನ್‌ ಗಿಲ್‌, ಸಂಜು ಸ್ಯಾಮ್ಸನ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್‌ ಪಾಂಡ್ಯ ಕೂಡ ಆಡುತ್ತಿಲ್ಲ. ಇವರ ಬದಲು ರಜತ್‌ ಪಾಟೀದಾರ್‌, ರಾಹುಲ್‌ ತ್ರಿಪಾಠಿ ಅವಕಾಶ ಪಡೆದಿದ್ದಾರೆ.

ಓಪನರ್ ಯಾರು?
ಭಾರತ ತಂಡದಲ್ಲಿ ಉದ್ಭವಿಸಿರುವ ಪ್ರಮುಖ ಪ್ರಶ್ನೆಯೆಂದರೆ ಓಪನಿಂಗ್‌ ಜೋಡಿ ಯಾವುದು ಎಂಬುದು. ರೋಹಿತ್‌ ಶರ್ಮ ಅವರೊಡನೆ ಇನ್ನಿಂಗ್ಸ್‌ ಆರಂಭಿಸಲು ರಾಹುಲ್‌ ಬರುತ್ತಾರೋ ಅಥವಾ ಧವನ್‌ ಆಗಮಿಸುವರೋ ಎಂಬ ಕುತೂಹಕವಿದೆ. ಆದರೆ ಇವರಿಬ್ಬರೂ ಹೇಳಿಕೊಳ್ಳುವಂಥ ಫಾರ್ಮ್ ನಲ್ಲಿಲ್ಲ.

ನ್ಯೂಜಿಲ್ಯಾಂಡ್‌ ಪ್ರವಾಸದಲ್ಲಿ ಧವನ್‌ ತೀವ್ರ ಬ್ಯಾಟಿಂಗ್‌ ಬರಗಾಲ ಅನುಭವಿಸಿದ್ದರು. 2022ರಲ್ಲಿ ಧವನ್‌ ಒಟ್ಟು 19 ಏಕದಿನ ಪಂದ್ಯವಾ ಡಿದ್ದು, ಕೇವಲ 75.11ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. 2016-18ರ ಅವಧಿಯಲ್ಲಿ 101, ಬಳಿಕ 2019-21ರ ಅವಧಿಯಲ್ಲಿ 91ರಷ್ಟು ಸ್ಟ್ರೈಕ್‌ರೇಟ್‌ ಗಳಿಸಿದ್ದರು. ಇದು ಅವರ ಹಿನ್ನಡೆಯನ್ನು ಸೂಚಿಸುತ್ತದೆ.

ಇನ್ನೊಂದೆಡೆ ರಾಹುಲ್‌ 45 ಏಕದಿನ ಪಂದ್ಯಗಳಿಂದ 85 ಪ್ಲಸ್‌ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಸರಾಸರಿ 45ರಷ್ಟಿದೆ. ಆದರೆ ಮೊನ್ನೆಯ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಒಂದು ವೇಳೆ ಧವನ್‌ ಓಪನರ್‌ ಆಗಿ ಇಳಿದರೆ, ರಾಹುಲ್‌ ಮಿಡ್ಲ್ ಆರ್ಡರ್‌ನಲ್ಲಿ ಆಡುವ ಸಾಧ್ಯತೆಯೂ ಇಲ್ಲದಿಲ್ಲ. ರವಿಶಾಸ್ತ್ರಿ ಕೋಚ್‌ ಆಗಿದ್ದಾಗ ರಾಹುಲ್‌ ಕೆಲವು ಪಂದ್ಯಗಳಲ್ಲಿ ತಮ್ಮ ಸ್ಥಾನ ಬದಲಿಸಿ ಬಂದಿದ್ದರು.

Advertisement

ಹಾಗೆಯೇ ನಾಯಕ ರೋಹಿತ್‌ ಶರ್ಮ ಫಾರ್ಮ್ ಕೂಡ ಉಜ್ವಲವೇನಲ್ಲ. ಆರಂಭದಲ್ಲಿ ಮುನ್ನುಗ್ಗಿದರೂ ಇನ್ನಿಂಗ್ಸ್‌ ವಿಸ್ತರಿಸಲು ವಿಫ‌ಲರಾಗುತ್ತಿದ್ದಾರೆ. ಹೀಗಾಗಿ ಪವರ್‌ ಪ್ಲೇಯಲ್ಲಿ ರನ್‌ ಹರಿದು ಬರುತ್ತಿಲ್ಲ. ಇದರಿಂದ ಮಧ್ಯಮ ಕ್ರಮಾಂಕದವರ ಮೇಲೆ ಸಹಜವಾಗಿಯೇ ಒತ್ತಡ ಬೀಳುತ್ತದೆ. ಇದನ್ನು ವಿರಾಟ್‌ ಕೊಹ್ಲಿಯೇ ನಿಭಾಯಿಸಬೇಕಾಗುತ್ತದೆ. ಪಂತ್‌ ಕೂಡ ಸತತವಾಗಿ ಬ್ಯಾಟಿಂಗ್‌ ವೈಫ‌ಲ್ಯ ಕಾಣುತ್ತಿದ್ದಾರೆ. ಪಾಟೀದಾರ್‌, ತ್ರಿಪಾಠಿ ನಿಂತು ಆಡಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಬೇಕಿದೆ. ಹಾಗೆಯೇ ಇಶಾನ್‌ ಕಿಶನ್‌ ಕೂಡ.

ಶಮಿ ಗಾಯಾಳು
ಕೊನೆಯ ಕ್ಷಣದಲ್ಲಿ ಬೌಲಿಂಗ್‌ ವಿಭಾಗದಿಂದ ಆಘಾತಕಾರಿ ಸುದ್ದಿ ಯೊಂದು ಹೊರಬಿದ್ದಿದೆ. ಅನುಭವಿ ವೇಗಿ ಮೊಹಮ್ಮದ್‌ ಶಮಿ ಗಾಯಾಳಾಗಿ ಸರಣಿಯಿಂದ ಹೊರಬಿದ್ದಿರುವುದು ಭಾರತಕ್ಕೊಂದು ಹಿನ್ನಡೆಯೇ ಆಗಿದೆ. ಇವರ ಸ್ಥಾನದಲ್ಲಿ ಉಮ್ರಾನ್‌ ಮಲಿಕ್‌ ಕಾಣಿಸಿಕೊಂಡಿದ್ದಾರೆ.

ಇಲ್ಲಿನ ಪಿಚ್‌ ನ್ಯೂಜಿಲ್ಯಾಂಡ್‌ನ‌ಂತಲ್ಲ. ಏಷ್ಯಾ ಟ್ರ್ಯಾಕ್‌ ಆದ ಕಾರಣ ಸ್ಪಿನ್‌ ಬೌಲಿಂಗ್‌ಗೆ ನೆರವು ಲಭಿಸಲಿದೆ. ಅಕ್ಷರ್‌ ಪಟೇಲ್‌, ಶಾಬಾಜ್‌ ಅಹ್ಮದ್‌, ವಾಷಿಂಗ್ಟನ್‌ ಸುಂದರ್‌ ಇದರ ಲಾಭವನ್ನೆತ್ತಬೇಕಿದೆ.

ಶಮಿ ಗೈರಿನಿಂದ ವೇಗದ ಬೌಲಿಂಗ್‌ ವಿಭಾಗದಲ್ಲಿ ಅನುಭವಿಗಳ ಕೊರತೆ ಎದ್ದು ಕಾಣುತ್ತದೆ. ಶಾದೂìಲ್‌ ಠಾಕೂರ್‌ ಅವರೇ ಸೀನಿಯರ್‌. ಸಿರಾಜ್‌, ದೀಪಕ್‌ ಚಹರ್‌, ಕುಲದೀಪ್‌ ಸೇನ್‌, ಉಮ್ರಾನ್‌ ಮಲಿಕ್‌ ಮೇಲೆ ಭಾರೀ ಒತ್ತಡ ಬೀಳುವುದು ಖಂಡಿತ. ಏಕೆಂದರೆ ಬಾಂಗ್ಲಾ ತವರಲ್ಲಿ ಹೆಚ್ಚು ಅಪಾಯಕಾರಿ. ಆದರೆ ನಾಯಕ ತಮಿಮ್‌ ಇಕ್ಬಾಲ್‌ ಅನುಪಸ್ಥಿತಿ ಹಿನ್ನಡೆಯಾಗಿ ಕಾಡುವುದರಲ್ಲಿ ಅನುಮಾನವಿಲ್ಲ. ಇವರ ಗೈರಲ್ಲಿ ಲಿಟನ್‌ ದಾಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಕೆ.ಎಲ್‌. ರಾಹುಲ್‌ (ಉಪನಾಯಕ), ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ರಜತ್‌ ಪಾಟೀದಾರ್‌, ಶ್ರೇಯಸ್‌ ಅಯ್ಯರ್‌, ರಾಹುಲ್‌ ತ್ರಿಪಾಠಿ, ರಿಷಭ್‌ ಪಂತ್‌ (ವಿ.ಕೀ.), ಇಶಾನ್‌ ಕಿಶನ್‌, ಶಾಬಾಜ್‌ ಅಹ್ಮದ್‌, ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌, ಶಾರ್ದೂಲ್ ಠಾಕೂರ್, ಮೊಹಮ್ಮದ್‌ ಸಿರಾಜ್‌, ದೀಪಕ್‌ ಚಹರ್‌, ಕುಲದೀಪ್‌ ಸೇನ್‌, ಉಮ್ರಾನ್‌ ಮಲಿಕ್‌.

ಬಾಂಗ್ಲಾದೇಶ: ಲಿಟನ್‌ ದಾಸ್‌ (ನಾಯಕ), ಅನಾಮುಲ್‌ ಹಕ್‌, ಶಕಿಬ್‌ ಅಲ್‌ ಹಸನ್‌, ಮುಶ್ಫಿಕರ್‌ ರಹೀಂ, ಆಫಿಫ್ ಹುಸೇನ್‌, ಯಾಸಿರ್‌ ಅಲಿ, ಮೆಹಿದಿ ಹಸನ್‌ ಮಿರಾಜ್‌, ಮುಸ್ತಫಿಜುರ್‌ ರೆಹಮಾನ್‌, ತಸ್ಕಿನ್‌ ಅಹ್ಮದ್‌, ಹಸನ್‌ ಮಹ್ಮದ್‌, ಎಬಾದತ್‌ ಹುಸೇನ್‌, ನಾಸುಮ್‌ ಅಹ್ಮದ್‌, ಮಹಮದುಲ್ಲ, ನಜ್ಮುಲ್‌ ಹುಸೇನ್‌, ನುರುಲ್‌ ಹಸನ್‌, ಶೊರಿಫ‌ುಲ್‌ ಇಸ್ಲಾಮ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next