ಅಡಿಲೇಡ್ : ಇಲ್ಲಿ ಬುಧವಾರ ನಡೆದ ಸೂಪರ್ 12 ಹಂತದ ಟಿ 20 ವಿಶ್ವಕಪ್ ರೋಚಕ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಕೊನೆಯ ಓವರ್ ನಲ್ಲಿ ರೋಚಕ ಗೆಲುವು ಸಾಧಿಸಿದೆ.
ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡ ಕೆ.ಎಲ್.ರಾಹುಲ್ ಅವರ 50 , ಕೊಹ್ಲಿ ಅವರ ಅಜೇಯ 64 ರನ್ , ಸೂರ್ಯ ಕುಮಾರ್ ಯಾದವ್ ಅವರ 30 ರನ್ ಕೊಡುಗೆಯಿಂದಾಗಿ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ನಾಯಕ ರೋಹಿತ್ ಶರ್ಮ 2 ರನ್ ಗೆ ಔಟಾಗಿ ನಿರಾಶೆ ಅನುಭವಿಸಿದರು. ಅಶ್ವಿನ್ ಅಜೇಯ 13 ರನ್ ಕೊಡುಗೆ ಸಲ್ಲಿಸಿದರು.
ಗುರಿ ಬೆನ್ನಟ್ಟಿದ ಬಾಂಗ್ಲಾ ಆರಂಭದಲ್ಲಿ ಅಬ್ಬರಿಸಿತು. ಲಿಟ್ಟನ್ ದಾಸ್ ಅವರ ಸ್ಪೋಟಕ ಆಟ ಭಾರತದ ಬೌಲರ್ ಗಳನ್ನು ಚಿಂತೆ ಗೀಡು ಮಾಡಿತ್ತು. 27 ಎಸೆತಗಳಲ್ಲಿ 60 ರನ್ ಗಳಿಸಿದ್ದ ದಾಸ್ ಅವರು ಮಳೆ ನಿಂತು ಮತ್ತೆ ಪಂದ್ಯ ಆರಂಭವಾದ ಬಳಿಕ ರನ್ ಔಟಾದ ಬಳಿಕ ಭಾರತ ತಂಡ ನಿಟ್ಟುಸಿರು ಬಿಟ್ಟಿತು. ಮಳೆಯಿಂದಾಗಿ 2ನೇ ಇನ್ನಿಂಗ್ಸ್ 16 ಓವರ್‌ಗಳಿಗೆ ಕಡಿತಮಾಡಿ ಬಾಂಗ್ಲಾ ದೇಶಕ್ಕೆ ಗೆಲ್ಲಲು 151 ರನ್ ಗಳ ಗುರಿ ನೀಡಲಾಗಿತ್ತು.ಕೊನೆಯ ಓವರ್ ನಲ್ಲಿ ಬಾಂಗ್ಲಾಕ್ಕೆ 6 ಎಸೆತಗಳಲ್ಲಿ 20 ರನ್ ಗಳಿಸುವ ಸವಾಲು ಎದುರಾಗಿತ್ತು. ಆದರೆ 15 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಅಂತಿಮವಾಗಿ ಭಾರತ 5 ರನ್‌ಗಳ ಜಯ ಸಾಧಿಸಿತು.
ಬಾಂಗ್ಲಾ ಪರ ನಜ್ಮುಲ್ ಹೊಸೈನ್ ಶಾಂತೋ 21, ನಾಯಕ ಶಕೀಬ್ ಅಲ್ ಹಸನ್ 13 , ನೂರುಲ್ ಹಸನ್ 25 ಮತ್ತು ತಸ್ಕಿನ್ ಅಹ್ಮದ್ 12 ರನ್ ಗಳಿಸಿದರು.
ಮಳೆ ಪಂದ್ಯಕ್ಕೆ ಅಡ್ಡಿ ಮಾಡಿದಾಗ ಬಾಂಗ್ಲಾ ತಂಡ ಡಿಎಲ್ ಎಸ್ ನಿಯಮದಂತೆ 17 ರನ್ ಮುನ್ನಡೆ ಹೊಂದಿತ್ತು. ಪಂದ್ಯ ರದ್ದಾಗಿದ್ದರೆ ಭಾರತ ಸೋಲುವ ಸ್ಥಿತಿ ಎದುರಾಗಿ ಹೊಸ ಲೆಕ್ಕಾಚಾರಗಳನ್ನು ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಭಾರತದ ಪರ ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಶಮಿ 1 ವಿಕೆಟ್ ಪಡೆದರು.