Advertisement
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 2 ವಿಕೆಟಿಗೆ 212 ರನ್ ರಾಶಿ ಹಾಕಿದರೆ, ಅಫ್ಘಾನಿಸ್ಥಾನ 20 ಓವರ್‌ಗಳಲ್ಲಿ 8 ವಿಕೆಟಿಗೆ 111 ರನ್ ಮಾಡಿತು. ಭುವನೇಶ್ವರ್ ಕುಮಾರ್ 5 ವಿಕೆಟ್‌ಗಳನ್ನು ಕೇವಲ 4 ರನ್ನಿಗೆ ಉಡಾಯಿಸಿದರು. ಅಫ್ಘಾನ್ ಪರ ಇಬ್ರಾಹಿಂ ಜದ್ರಾನ್ ಅಜೇಯ 64 ರನ್ ಹೊಡೆದರು.
Related Articles
Advertisement
ಶತಕದ ಜತೆಯಾಟ :
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ನಾಯಕ ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಬಿರುಸಿನ ಆರಂಭ ಒದಗಿಸಿದರು. ಅಫ್ಘಾನ್ ಬೌಲರ್‌ಗಳ ಮೇಲೆ ಸವಾರಿ ಮಾಡಲಾರಂಭಿಸಿದ ಇವರಿಬ್ಬರೂ ದೊಡ್ಡ ಹೊಡೆತಗಳಿಗೆ ಮುಂದಾ ದರು. ರನ್ ಸರಾಗವಾಗಿ ಹರಿದು ಬಂದಿತು. ಪವರ್ ಪ್ಲೇಯಲ್ಲಿ 52 ರನ್ ಒಟ್ಟುಗೂಡಿತು. 10 ಓವರ್‌ಗಳಲ್ಲಿ ಮೊತ್ತ 87ಕ್ಕೆ ಏರಿತು. ಆರಂಭಿಕರಿಬ್ಬರೂ ಕ್ರೀಸ್‌ನಲ್ಲಿ ಭದ್ರವಾಗಿ ಬೇರುಬಿಟ್ಟಿದ್ದರು.
ತೀವ್ರ ಬ್ಯಾಟಿಂಗ್ ಬರಗಾಲದಲ್ಲಿದ್ದ ಈ ಇಬ್ಬರೂ ಆಟಗಾರರು ಏಷ್ಯಾ ಕಪ್ ಕೂಟದ ಅಂತಿಮ ಅವಕಾಶವನ್ನು ಚೆನ್ನಾಗಿಯೇ ಬಳಸಿ ಕೊಂಡರು. ಒಂದು ದಿನದ ಹಿಂದಷ್ಟೇ ಪಾಕಿಸ್ಥಾನ ವನ್ನು ನಿಯಂತ್ರಿಸಿದ ಅದೇ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿತೊಡಗಿದರು. ದುಬಾೖ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳು ಸರಾಗವಾಗಿ ಸಿಡಿಯಲ್ಪಟ್ಟವು. 11.2 ಓವರ್‌ಗಳಲ್ಲಿ ಶತಕದ ಜತೆಯಾಟ ಪೂರ್ತಿಗೊಂಡಿತು. ಮೊದಲು ಕೊಹ್ಲಿ, ಬಳಿಕ ರಾಹುಲ್ ಅರ್ಧ ಶತಕ ಪೂರೈಸಿದರು. ಆಗಲೇ ಅಫ್ಘಾನ್ 6 ಮಂದಿಯನ್ನು ಬೌಲಿಂಗ್ ದಾಳಿಗಿಳಿಸಿದರೂ ಪ್ರಯೋಜನವಾಗಲಿಲ್ಲ.
ಆರಂಭಿಕ ವಿಕೆಟಿಗೆ 12.4 ಓವರ್‌ಗಳಿಂದ 119 ರನ್ ಒಟ್ಟುಗೂಡಿತು. ಆಗ ಫರೀದ್ ಅಹ್ಮದ್ ಮಲಿಕ್ ಒಂದೇ ಓವರ್‌ನಲ್ಲಿ ಅವಳಿ ಯಶಸ್ಸು ತಂದಿತ್ತರು. ಮೊದಲು ರಾಹುಲ್, ಒಂದೇ ಎಸೆತದ ಅಂತರದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಸತತ ಎರಡನೇ ಸಿಕ್ಸರ್ ಬಾರಿಸಲು ಮುಂದಾದ ರಾಹುಲ್ ಬೌಂಡರಿ ಲೈನ್‌ನಲ್ಲಿದ್ದ ನಜೀಬುಲ್ಲ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ರಾಹುಲ್ ಗಳಿಕೆ 41 ಎಸೆತಗಳಿಂದ 62 ರನ್ (6 ಬೌಂಡರಿ, 2 ಸಿಕ್ಸರ್). ಸೂರ್ಯ ಒಂದು ಸಿಕ್ಸರ್ ಎತ್ತಿದ ಬೆನ್ನಲ್ಲೇ ಕ್ಲೀನ್ ಬೌಲ್ಡ್ ಆದರು (6). ಪಂತ್ ಅಜೇಯ 20 ರನ್ ಮಾಡಿದರು.
ರೋಹಿತ್‌ಗೆ ವಿಶ್ರಾಂತಿ : ನಾಯಕ ರೋಹಿತ್ ಶರ್ಮ ಈ ಪಂದ್ಯದಿಂದ ಬ್ರೇಕ್ ಪಡೆದರು. ಹೀಗಾಗಿ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಿದರು. ಚಹಲ್, ಹಾರ್ದಿಕ್ ಪಾಂಡ್ಯ ಕೂಡ ಆಡಲಿಳಿಯಲಿಲ್ಲ.
ಫೈನಲ್ ರಿಹರ್ಸಲ್ :
ದುಬಾೖ: ಸೂಪರ್ ಫೋರ್ ಹಂತದ ಕೊನೆಯ ಮುಖಾಮುಖಿ ಶ್ರೀಲಂಕಾ ಮತ್ತು ಪಾಕಿಸ್ಥಾನ ತಂಡಗಳ ನಡುವೆ ಶುಕ್ರವಾರ ನಡೆಯಲಿದೆ. ಈಗಾಗಲೇ ಈ ಎರಡೂ ತಂಡಗಳು ಮೊದಲೆರಡೂ ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಹಾಕಿವೆ. ರವಿವಾರ ಪ್ರಶಸ್ತಿ ಸಮರ ಏರ್ಪಡಲಿದೆ. ಹೀಗಾಗಿ ಶುಕ್ರವಾರದ ಈ ಪಂದ್ಯಕ್ಕೆ ಯಾವುದೇ ಮಹತ್ವವಿಲ್ಲ. ಆದರೆ ಫೈನಲ್ ಪಂದ್ಯಕ್ಕೆ ಇದೊಂದು ಉತ್ತಮ ರಿಹರ್ಸಲ್ ಆಗಲಿದೆ. ಯಾವ ತಂಡ ಸೂಪರ್ ಫೋರ್ ಹಂತದಲ್ಲಿ ಅಜೇಯವಾಗಿ ಉಳಿಯಲಿದೆ ಎಂಬುದೊಂದು ಕುತೂಹಲ.