ರೊಸೇಯೂ (ಡೊಮಿನಿಕಾ): ಪ್ರವಾಸಿ ಭಾರತದೆದುರಿನ ಆರಂಭಿಕ ಟೆಸ್ಟ್ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಅಂತಿಮಗೊಳಿಸಲಾಗಿದೆ. ಎಡಗೈ ಆಟಗಾರರಾದ ಕರ್ಕ್ ಮೆಕೆಂಝಿ ಮತ್ತು ಅಲಿಕ್ ಅಥನೇಜ್ ಮೊದಲ ಸಲ ರಾಷ್ಟ್ರೀಯ ತಂಡ ದಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್‌ರೌಂಡರ್ ರಖೀಮ್ ಕಾರ್ನ್ವಾಲ್ ತಂಡಕ್ಕೆ ಮರಳಿದ್ದಾರೆ. ಮೊದಲ ಟೆಸ್ಟ್ ಜು. 12ರಂದು ಇಲ್ಲಿ ಆರಂಭವಾಗಲಿದೆ.
ಆರಂಭದಲ್ಲಿ 18 ಸದಸ್ಯರ ತಂಡವನ್ನು ಪ್ರಕಟಿಸಿ ಇವರಿಗೆ ಅಭ್ಯಾಸ ಶಿಬಿರ ಏರ್ಪಡಿಸಲಾಗಿತ್ತು. ಈಗ ಆಟಗಾರರ ಸಂಖ್ಯೆಯನ್ನು 13ಕ್ಕೆ ಇಳಿಸಲಾಗಿದೆ. ಇಬ್ಬರು ಮೀಸಲು ಆಟಗಾರರೂ ಇದ್ದಾರೆ.
ಮೆಕೆಂಝಿ ಮತ್ತು ಅಥನೇಜ್ ಈಗಾಗಲೇ ಏಕದಿನ ಪಂದ್ಯವಾಡಿದರೂ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಇಬ್ಬರೂ “ಎ’ ತಂಡದ ಬಾಂಗ್ಲಾದೇಶ ಪ್ರವಾಸದ ವೇಳೆ ಉತ್ತಮ ಪ್ರದರ್ಶನ ನೀಡಿದ್ದರು. ಕಾರ್ನ್ವಾಲ್ 2021ರ ನವೆಂಬರ್‌ನಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಗಾಯಾಳಾಗಿರುವ ಕಾರಣ ಎಡಗೈ ಸ್ಪಿನ್ ಬೌಲರ್ ಗುಡಕೇಶ್ ಮೋಟಿ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇವರ ಬದಲು ಮತ್ತೋರ್ವ ಎಡಗೈ ಸ್ಪಿನ್ನರ್ ಜೋಮೆಲ್ ವ್ಯಾರಿಕ್ಯಾನ್ ಅವರಿಗೆ ಅವಕಾಶ ಲಭಿಸಿದೆ. ಕೈಲ್ ಮೇಯರ್ ಕೂಡ ಗಾಯಾಳಾಗಿ ಅವಕಾಶ ತಪ್ಪಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ತಂಡ: ಕ್ರೆಗ್ ಬ್ರಾತ್‌ವೇಟ್ (ನಾಯಕ), ಜರ್ಮೈನ್ ಬ್ಲ್ಯಾಕ್‌ವುಡ್ (ಉಪನಾಯಕ), ಅಲಿಕ್ ಅಥನೇಜ್, ತೇಜ್‌ನಾರಾಯಣ್ ಚಂದರ್‌ಪಾಲ್, ರಖೀಮ್ ಕಾರ್ನಿವಾಲ್, ಜೋಶುವ ಡ ಸಿಲ್ವ, ಶಾನನ್ ಗ್ಯಾಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕರ್ಕ್ ಮೆಕೆಂಝಿ, ರೇಮನ್ ರೀಫರ್, ಕೆಮರ್ ರೋಚ್, ಜೊಮೆಲ್ ವ್ಯಾರಿಕ್ಯಾನ್.
ಮೀಸಲು ಆಟಗಾರರು: ಟೆವಿನ್ ಇಮ್ಲಾಕ್, ಅಕೀಮ್ ಜೋರ್ಡನ್.