ನವದೆಹಲಿ: ಭಾರತದ ಯೋಜಿತ ಕ್ಷಿಪಣಿ ಪರೀಕ್ಷೆಯ ದಿನ ಸಮೀಪಿಸುತ್ತಿದ್ದಂತೆ, ಹಿಂದೂ ಮಹಾಸಾಗರಕ್ಕೆ ಚೀನಾ ಮತ್ತೂಂದು ಬೇಹುಗಾರಿಕಾ ಹಡಗನ್ನು ಕಳುಹಿಸಿಕೊಟ್ಟಿದೆ.
ಇದನ್ನೂ ಓದಿ:ಕೋವಿಡ್ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನಿಮ್ಮ ಪಕ್ಷದವರಿಗೆ ಗೊತ್ತು: ಎಚ್ ಡಿಕೆ ಕಿಡಿ
ಶ್ರೀಲಂಕಾದ ಹಂಬಂತೋಟ ಬಂದರಿನಲ್ಲಿ ಚೀನಾ ಗೂಢಚರ್ಯೆ ನೌಕೆಯೊಂದನ್ನು ನಿಯೋಜಿಸಿದ ಮೂರು ತಿಂಗಳಲ್ಲೇ ಈ ಬೆಳವಣಿಗೆ ನಡೆದಿದೆ. ಚೀನಾದ ಈ ಹೊಸ ಬೇಹುಗಾರಿಕಾ ಹಡಗು ಯುವಾನ್ ವಾಂಗ್ 6ನ ಚಲನವಲನ ಗಳನ್ನು ಭಾರತೀಯ ನೌಕಾಪಡೆಯು ಸಕ್ರಿಯವಾಗಿ ಟ್ರ್ಯಾಕ್ ಮಾಡುತ್ತಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ಕ್ಷಿಪಣಿ ಪರೀಕ್ಷೆಗಳು ಮತ್ತು ಉಪಗ್ರಹಗಳ ಚಲನವಲನಗಳ ಮೇಲೆ ನಿಗಾ ಇಡುವಂತೆಯೇ ಎರಡೂ ಹಡಗುಗಳನ್ನು ವಿನ್ಯಾಸ ಗೊಳಿಸಲಾಗಿದೆ. ಯುವಾನ್ ವಾಂಗ್ 6 ನೌಕೆ ಈಗಾಗಲೇ ಹಿಂದೂ ಮಹಾ ಸಾಗರವನ್ನು ಪ್ರವೇಶಿಸಿದ್ದು, ಇಂಡೋನೇಷ್ಯಾದ ಬಾಲಿ ಕರಾವಳಿಯಾಚೆ ತಲುಪಿದೆ.
ಒಡಿಶಾ ಕರಾವಳಿಯಾಚೆ ನ.10-11ರ ವೇಳೆಗೆ 2,200 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ ಯೊಂದನ್ನು ಪರೀಕ್ಷಿಸಲು ಭಾರತ ಸಿದ್ಧವಾಗುತ್ತಿರುವಂತೆಯೇ ಚೀನಾ ಗುಟ್ಟಾಗಿ ಈ ನೌಕೆಯನ್ನು ಕಳುಹಿಸಿದೆ ಎಂದು ಹೇಳಲಾಗಿದೆ.