Advertisement
ಏಕದಿನ ಪಂದ್ಯ ಆರಂಭಗೊಂಡದ್ದು 1971ರ ಜನವರಿ 5ರಂದು. ಅಂದು ಮೆಲ್ಬರ್ನ್ನಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಭಾರತ ತನ್ನ ಮೊದಲ ಪಂದ್ಯವಾಡಿದ್ದು 1974ರ ಜುಲೈ 13ರಂದು. ಅಂದರೆ ಮೊದಲ ಏಕದಿನ ಪಂದ್ಯ ನಡೆದು ಮೂರೂವರೆ ವರ್ಷಗಳ ಬಳಿಕ. ಆದರೂ ಸಾವಿರ ಪಂದ್ಯಗಳ ಎತ್ತರಕ್ಕೆ ಭಾರತವೇ ಮೊದಲು ನೆಗೆಯುತ್ತಿರುವುದು ವಿಶೇಷ. ಆಸ್ಟ್ರೇಲಿಯ 958 ಪಂದ್ಯಗಳನ್ನಾಡಿದರೆ, ಇಂಗ್ಲೆಂಡ್ ಇನ್ನೂ 761 ಪಂದ್ಯಗಳಿಗೆ ನಿಂತಿದೆ!
ಈ ವರೆಗಿನ 999 ಪಂದ್ಯಗಳಲ್ಲಿ ಭಾರತಕ್ಕೆ ಒಲಿದ ಗೆಲುವು 518. ಆದರೆ ಈ ಯಾದಿಯಲ್ಲಿ ಭಾರತಕ್ಕೆ ದ್ವಿತೀಯ ಸ್ಥಾನ. 581 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯ ಅಗ್ರಸ್ಥಾನಿಯಾಗಿದೆ. ಸೋಲಿನ ಯಾದಿಯಲ್ಲೂ ಭಾರತಕ್ಕೆ ದ್ವಿತೀಯ ಸ್ಥಾನ (431). ಇತ್ತೀಚೆಗಷ್ಟೇ ಶ್ರೀಲಂಕಾ (432) ಭಾರತವನ್ನು ಹಿಂದಿಕ್ಕಿತ್ತು. ಮೊದಲ ಗೆಲುವಿನ ಖುಷಿ
ಭಾರತ ತನ್ನ ಮೊದಲ ಗೆಲುವು ದಾಖಲಿಸಿದ್ದು 1975ರ ವಿಶ್ವಕಪ್ ಪಂದ್ಯಾವಳಿಯಲ್ಲಿ. ಅದು ಈಸ್ಟ್ ಆಫ್ರಿಕಾ ಎದುರಿನ ಲೀಡ್ಸ್ ಪಂದ್ಯವಾಗಿತ್ತು. ಅಂತರ 10 ವಿಕೆಟ್. ಈಸ್ಟ್ ಆಫ್ರಿಕಾ 120ಕ್ಕೆ ಉದುರಿದರೆ, ಭಾರತ 29.5 ಓವರ್‌ಗಳಲ್ಲಿ ನೋಲಾಸ್ 123 ರನ್ ಬಾರಿಸಿತು. ಅಜೇಯ 54 ರನ್ ಹೊಡೆದ ಫಾರೂಖ್ ಇಂಜಿನಿಯರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಆಟಗಾರನೆನಿಸಿದರು.
Related Articles
ಅಜಿತ್ ವಾಡೇಕರ್ ಆವರಿಂದ ಮೊದಲ್ಗೊಂಡು ಕೆ.ಎಲ್. ರಾಹುಲ್ ತನಕ ಈವರೆಗೆ 26 ನಾಯಕರು ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇವರಲ್ಲಿ ಅತ್ಯುತ್ತಮ ಸಾಧನೆ ಧೋನಿಯದ್ದಾಗಿದೆ. ಇವರ ನಾಯಕತ್ವದ 199 ಪಂದ್ಯಗಳಲ್ಲಿ ಭಾರತ 110 ಗೆಲುವು ಕಂಡಿದೆ.
Advertisement
ವಿಕೆಟ್ ಕೀಪಿಂಗ್ ದಾಖಲೆಯೂ ಧೋನಿ ಹೆಸರಲ್ಲಿದೆ (438). ಫೀಲ್ಡಿಂಗ್ ರೆಕಾರ್ಡ್ ಹೊಂದಿರುವವರು ಮೊಹಮ್ಮದ್ ಅಜರುದ್ದೀನ್ (156 ಕ್ಯಾಚ್).ಈ 999 ಪಂದ್ಯಗಳಲ್ಲಿ ಒಟ್ಟು 242 ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್ ವಿರುದ್ಧ ಯುಪಿ ಯೋಧರಿಗೆ ಸತತ 4ನೇ ಆಘಾತ
ರೋಹಿತ್ ವಿಶ್ವದಾಖಲೆಏಕದಿನದಲ್ಲಿ ಸರ್ವಾಧಿಕ ವೈಯಕ್ತಿಕ ರನ್ ವಿಶ್ವದಾಖಲೆಗೆ ರೋಹಿತ್ ಶರ್ಮ ಅಧಿಪತಿ (264). ಏಕದಿನದಲ್ಲಿ 3 ದ್ವಿಶತಕ ಬಾರಿಸಿದ ಏಕೈಕ ಆಟಗಾರನೆಂಬುದೂ ರೋಹಿತ್ ಹೆಗ್ಗಳಿಕೆ. ಬೌಲಿಂಗಿಗೆ ಕುಂಬ್ಳೆ, ಶ್ರೀನಾಥ್ ಅತ್ಯಧಿಕ ವಿಕೆಟ್ ಉರುಳಿಸಿದ ಬೌಲಿಂಗ್ ದಾಖಲೆ ಅನಿಲ್ ಕುಂಬ್ಳೆ ಹೆಸರಲ್ಲಿದೆ (334). ದ್ವಿತೀಯ ಸ್ಥಾನದಲ್ಲಿರುವವರು ಜೆ. ಶ್ರೀನಾಥ್ (315). ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದವರ್ಯಾರೂ ಮುನ್ನೂರರ ಗಡಿ ತಲುಪಿಲ್ಲ. ವರ್ಷದಲ್ಲಿ ಅತ್ಯಧಿಕ 61 ವಿಕೆಟ್ (1996) ಕೆಡವಿದ ದಾಖಲೆಯೂ ಕುಂಬ್ಳೆ ಹೆಸರಲ್ಲಿದೆ. ಹ್ಯಾಟ್ರಿಕ್ ಹೀರೋಸ್
ಆಯ್ಕೆ ಸಮಿತಿಯ ಹಾಲಿ ಅಧ್ಯಕ್ಷ ಚೇತನ್ ಶರ್ಮ ಭಾರತದ ಮೊದಲ ಹ್ಯಾಟ್ರಿಕ್ ಹೀರೋ. ಅದು ನ್ಯೂಜಿಲ್ಯಾಂಡ್ ಎದುರಿನ 1987ರ ನಾಗ್ಪುರ ವಿಶ್ವಕಪ್ ಪಂದ್ಯವಾಗಿತ್ತು. ಉಳಿದ ಹ್ಯಾಟ್ರಿಕ್ ಸಾಧಕರೆಂದರೆ ಕಪಿಲ್‌ದೇವ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ. ಇವರಲ್ಲಿ ಕುಲದೀಪ್ 2 ಸಲ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ್ದಾರೆ. 4 ರನ್ನಿಗೆ 6 ವಿಕೆಟ್ ಕೆಡವಿದ ಸ್ಟುವರ್ಟ್ ಬಿನ್ನಿ ಭಾರತೀಯ ಬೌಲಿಂಗ್ ದಾಖಲೆ ಹೊಂದಿದ್ದಾರೆ. ವಾಡೇಕರ್ ಮೊದಲ ನಾಯಕ
ಭಾರತ ತನ್ನ ಮೊದಲ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ಆಡಿತು. ಅದು ಏಕದಿನ ಇತಿಹಾಸದ 12ನೇ ಪಂದ್ಯ. ಅಜಿತ್ ವಾಡೇಕರ್ ಮೊದಲ ನಾಯಕ. ಪ್ರಥಮ ಎಸೆತ ಎದುರಿಸಿದವರು ಸುನೀಲ್ ಗಾವಸ್ಕರ್. ಮೊದಲ ರನ್, ಮೊದಲ ಬೌಂಡರಿ, ಮೊದಲ ಸಿಕ್ಸರ್ ಗಳೆಲ್ಲದಕ್ಕೂ ಗಾವಸ್ಕರ್ ಸಾಕ್ಷಿಯಾದರು. ಮೊದಲು ಔಟಾದ ಆಟಗಾರ ಸುದೀರ್ ನಾಯಕ್. ಹಾಗೆಯೇ ಡೆನ್ನಿಸ್ ಅಮಿಸ್ ಅವರನ್ನು ಎಲ್‌ಬಿಡಬ್ಲ್ಯು ಮಾಡುವ ಮೂಲಕ ಏಕನಾಥ ಸೋಲ್ಕರ್ ಮೊದಲ ವಿಕೆಟ್ ಉರುಳಿಸಿದರು. ಭಾರತದ ಮೊದಲ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡ ಆಟಗಾರರು: ಸುನೀಲ್ ಗಾವಸ್ಕರ್, ಸುದೀರ್ ನಾಯಕ್, ಅಜಿತ್ ವಾಡೇಕರ್, ಜಿ.ಆರ್. ವಿಶ್ವನಾಥ್, ಫಾರೂಖ್ ಇಂಜಿನಿಯರ್, ಬೃಜೇಶ್ ಪಟೇಲ್, ಏಕನಾಥ್ ಸೋಲ್ಕರ್, ಸಯ್ಯದ್ ಅಬಿದ್ ಅಲಿ, ಮದನ್‌ಲಾಲ್, ಎಸ್. ವೆಂಕಟರಾಘವನ್, ಬಿಷನ್ ಸಿಂಗ್ ಬೇಡಿ.ಈ ಪಂದ್ಯವನ್ನು ಭಾರತ 4 ವಿಕೆಟ್‌ಗಳಿಂದ ಸೋತಿತ್ತು. ಪ್ರಥಮ ಶತಕ ಸಂಭ್ರಮ
ಭಾರತದಿಂದ ದಾಖಲಾದ ಪ್ರಪ್ರಥಮ ಶತಕವೇ ವಿಶ್ವದಾಖಲೆಯಾಗಿತ್ತು ಎಂಬುದೊಂದು ಹೆಗ್ಗಳಿಕೆ. ಅದು ಟನ್‌ಬ್ರಿಜ್ ವೆಲ್ಸ್‌ನಲ್ಲಿ ನಡೆದ 1983ರ ವಿಶ್ವಕಪ್‌ನ ಜಿಂಬಾಬ್ವೆ ಎದುರಿನ ಪಂದ್ಯ. ಈ ಮುಖಾಮುಖಿಯಲ್ಲಿ ಕಪ್ತಾನ ಕಪಿಲ್‌ದೇವ್ ಅಜೇಯ 175 ರನ್ ಸಿಡಿಸಿದ್ದು ಆ ಕಾಲಕ್ಕೆ ಸರ್ವಾಧಿಕ ವೈಯಕ್ತಿಕ ಮೊತ್ತವಾಗಿತ್ತು. ಕಪಿಲ್ ನ್ಯೂಜಿಲ್ಯಾಂಡಿನ ಗ್ಲೆನ್ ಟರ್ನರ್ ಅವರ 171 ರನ್ನುಗಳ ದಾಖಲೆಯನ್ನು ಮುರಿದಿದ್ದರು. ಭಾರತದ ಮೊದಲ ಅರ್ಧ ಶತಕ ಬಾರಿಸಿದವರು ಬೃಜೇಶ್ ಪಟೇಲ್ (82). 2 ವಿಶ್ವಕಪ್ ವಿಜಯ
ಭಾರತದ ಏಕದಿನ ಇತಿಹಾಸದ ಮಹಾನ್ ಸಾಧನೆಗಳೆಂದರೆ ಎರಡು ಸಲ ವಿಶ್ವ ಚಾಂಪಿಯನ್ ಎನಿಸಿದ್ದು. 1983ರಲ್ಲಿ ಕಪಿಲ್‌ದೇವ್ ನಾಯಕತ್ವದಲ್ಲಿ, 2011ರಲ್ಲಿ ಧೋನಿ ಸಾರಥ್ಯದಲ್ಲಿ ಭಾರತ ವಿಶ್ವವಿಜೇತ ಎನಿಸಿಕೊಂಡಿತು. ಜತೆಗೆ 60 ಹಾಗೂ 50 ಓವರ್‌ಗಳ ಏಕದಿನ ವಿಶ್ವಕಪ್‌ಗಳೆರಡನ್ನೂ ಗೆದ್ದ ಏಕೈಕ ತಂಡವೆಂಬುದು ಭಾರತದ ಪಾಲಿನ ಮತ್ತೂಂದು ಹೆಗ್ಗಳಿಕೆ. ಈ ಸಾಲಿಗೆ ಅವಳಿ ಚಾಂಪಿಯನ್ಸ್ ಟ್ರೋಫಿ ಗೆಲುವನ್ನೂ ದಾಖಲಿಸಬಹುದು. ಸಚಿನ್ ಗರಿಷ್ಠ ಪಂದ್ಯ
ದಾಖಲೆಗಳ ವೀರ ಸಚಿನ್ ತೆಂಡುಲ್ಕರ್ ಏಕದಿನದಲ್ಲಿ ನಿರ್ಮಿಸಿರುವ ದಾಖಲೆಗಳಿಗೆ ಲೆಕ್ಕವಿಲ್ಲ. ಅತ್ಯಧಿಕ 463 ಪಂದ್ಯ, ಅತೀ ಹೆಚ್ಚು 18,426 ರನ್, ಸರ್ವಾಧಿಕ 49 ಶತಕ, ಮೊದಲ ದ್ವಿಶತಕ (ಅಜೇಯ 200)… ಹೀಗೆ ಸಾಗುತ್ತದೆ.